ಸ್ವತಂತ್ರ ಲಿಂಗಾಯತ ಧರ್ಮದ ಸ್ಥಾಪನೆ ಬೇಡಿಕೆ ಕುರಿತಂತೆ ಕೇಂದ್ರ ಸರ್ಕಾರಕ್ಕೆ ಶೀಘ್ರದಲ್ಲಿಯೇ ಶಿಫಾರಸು ಮಾಡಲಾಗುವುದು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು (ಡಿ.15): ಸ್ವತಂತ್ರ ಲಿಂಗಾಯತ ಧರ್ಮದ ಸ್ಥಾಪನೆ ಬೇಡಿಕೆ ಕುರಿತಂತೆ ಕೇಂದ್ರ ಸರ್ಕಾರಕ್ಕೆ ಶೀಘ್ರದಲ್ಲಿಯೇ ಶಿಫಾರಸು ಮಾಡಲಾಗುವುದು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಪ್ರತ್ಯೇಕ ವೀರಶೈವ- ಲಿಂಗಾಯತ ಧರ್ಮ ಹೋರಾಟ ಬೇಕು ಬೇಡ ಎಂಬ ವಿಚಾರದ ರಾಜ್ಯಾದ್ಯಂತ ಮೇಲೆ ತೀವ್ರ ಚರ್ಚೆ, ಹೋರಾಟ ಮುಂದುವರಿದಿರುವಾಗಲೇ ಅವರು ಈ ಹೇಳಿಕೆ ನೀಡಿದ್ದು, ವೀರಶೈವ- ಲಿಂಗಾ ಯತರು ಒಂದಾಗಿ ಬಂದಿಲ್ಲವಾದದ್ದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದ್ದಾರೆ.
ಮಾತೆ ಮಹಾದೇವಿ, ಬಸವ ದಳ ಸೇರಿ ಹಲವರಿಂದ 5 ಅರ್ಜಿಗಳು ಬಂದಿವೆ. ಆದರೆ, ನಾನು ವೀರಶೈವ-ಲಿಂಗಾಯತರು ಒಟ್ಟಾಗಿ ಮಾತುಕತೆಗೆ ಬನ್ನಿ ಎಂದು ಹೇಳಿದ್ದೆ. ಇದಾಗಿ 3 ತಿಂಗಳು ಕಳೆದಿದೆ. ಪ್ರತ್ಯೇಕ ಧರ್ಮ ಬಗ್ಗೆ ನನ್ನ ಮೇಲೆ ಅತೀವ ಒತ್ತಡ ಇದೆ. ಸ್ವತಂತ್ರ ಲಿಂಗಾಯತ ಧರ್ಮ ಕುರಿತ ಶಿಫಾರಸನ್ನು ಶೀಘ್ರ ಕೇಂದ್ರ ಸರ್ಕಾರಕ್ಕೆ ಕಳುಹಿಸುತ್ತೇನೆ ಎಂದಿದ್ದಾರೆ. ವೀರಶೈವ ಮತ್ತು ಲಿಂಗಾಯತರು ಒಂದಾಗಿ ಮಾತುಕತೆಗೆ ಬರುವಂತೆ ಹೇಳಿ ಮೂರು ತಿಂಗಳಾದರೂ ಬಂದಿಲ್ಲ ಮತ್ತು ಅವರು ಒಂದಾಗುವ ಸಾಧ್ಯತೆಯೂ ಇಲ್ಲವಾದ್ದರಿಂದ ಸ್ವತಂತ್ರ ಲಿಂಗಾಯತ ಧರ್ಮ ಸ್ಥಾಪನೆಯ ಬೇಡಿಕೆಯ ಕುರಿತಂತೆ ಶಿಫಾರಸು ಮಾಡಲಾಗುವುದು ಎಂದರು.
ಒತ್ತಡ ಹೆಚ್ಚಿದೆ: ಯಾವಾಗ ಕಳುಹಿಸಲಾಗುತ್ತದೆ ಎನ್ನುವುದಕ್ಕೆ ನಿಖರ ಉತ್ತರ ನೀಡದ ಅವರು, ಮಾತೆ ಮಹಾದೇವಿ, ಬಸವದಳ ಸೇರಿದಂತೆ ಈಗಾಗಲೇ ಐದು ಅರ್ಜಿಗಳು ನನ್ನ ಮುಂದೆ ಇವೆ. ಅತೀವ ಒತ್ತಡವೂ ಬರುತ್ತಿದೆ. ಹೀಗಾಗಿ, ಇನ್ನು ಮುಂದೆ ಅವುಗಳನ್ನು ಹಾಗೇ ಇಟ್ಟುಕೊಳ್ಳಲು ಆಗುವುದಿಲ್ಲ. ಕೇಂದ್ರದ ಅಲ್ಪಸಂಖ್ಯಾತರ ಇಲಾಖೆಗೆ ಕಳುಹಿಸಿಕೊಡಲಾಗುವುದು ಎಂದರು.
ಧರ್ಮ ಒಡೆದಿಲ್ಲ: ವೀರಶೈವ- ಲಿಂಗಾಯತ ಧರ್ಮ ಒಡೆಯುವ ಸಲುವಾಗಿ ಇಬ್ಬರು ಸಚಿವರನ್ನು ನೀವು ಛೂ ಬಿಟ್ಟಿರುವ ಆರೋಪ ಇದೆಯಲ್ವಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಯಾವ ಧರ್ಮವನ್ನೂ ಒಡೆದಿಲ್ಲ, ಜಾತಿಯನ್ನೂ ಒಡೆದಿಲ್ಲ, ಒಡೆಯುವುದೂ ಇಲ್ಲ. ಅದೇ ರೀತಿಯಾಗಿ ನಮ್ಮ ಸಚಿವರೂ ಅಂತಹ ಕೆಲಸ ಮಾಡಿಲ್ಲ. ಲಿಂಗಾಯತ ಧರ್ಮದ ಹೋರಾಟದ ಕುರಿತಾಗಿಯೂ ನಾನು ಯಾವುದೇ ಸಚಿವರಿಗೆ ಸೂಚನೆ ನೀಡಿಲ್ಲ. ಹೋರಾಟದಲ್ಲಿ ಭಾಗಿಯಾಗಿರುವುದು ಅವರವರ ವೈಯಕ್ತಿಕ ವಿಷಯವಷ್ಟೇ ಎಂದರು.
