ತಮಿಳುನಾಡಿನ ಇತಿಹಾಸ ಗೊತ್ತಿದ್ದವರಿಗೆ ಸಿನಿಮಾ ನಟರೆಂದರೆ ಕೇವಲ ಸ್ಟಾರ್​ಗಳಲ್ಲ...ರಾಜಕೀಯ ನಾಯಕರೂ ಹೌದು..ಅದು ಕರುಣಾನಿಧಿ, ಎಂಜಿಆರ್, ಜಯಲಲಿತಾ ಅಧಿಪತ್ಯದಲ್ಲಿ ಸಾಬೀತಾಗಿರುವ ಸತ್ಯ. ಸಿನಿಮಾ ನಟರು ರಾಜಕೀಯಕ್ಕೆ ಬಂದು ಮುಖ್ಯಮಂತ್ರಿ ಕೂಡಾ ಆಗಬಹುದು ಎಂದು ಸಾಬೀತು ಮಾಡಿದ ದೇಶದ ಮೊದಲ ರಾಜ್ಯ ತಮಿಳುನಾಡು. 

ಶಿವಾಜಿ ರಾವ್ ಗಾಯಕ್ವಾಡ್..ಹಾಗೆಂದರೆ ಸ್ವತಃ ರಜಿನಿಕಾಂತ್ ಕೂಡಾ ತಿರುಗಿ ನೋಡಲ್ಲ. ತಮಿಳುನಾಡು ರಜಿನಿಕಾಂತ್ ಅನ್ನೋ ವ್ಯಕ್ತಿಯನ್ನ ಅಷ್ಟರಮಟ್ಟಿಗೆ ಆವರಿಸಿದೆ. ತಮಿಳುನಾಡನ್ನೂ ಅಷ್ಟೆ..ರಜಿನಿಕಾಂತ್ ಆವರಿಸಿಬಿಟ್ಟಿದ್ದಾರೆ. ರಜಿನಿ ಕಣ್ಣೀರಿಟ್ಟರೆ, ತಮಿಳುನಾಡು ಕಣ್ಣೀರಿಡುತ್ತೆ.ಅವರು ನಗುತ್ತಿದ್ದರೆ, ಅಭಿಮಾನಿಗಳೂ ನಗುತ್ತಿರುತ್ತಾರೆ.

ಇಂದಿಗೂ ರಜಿನಿಕಾಂತ್​ರ ಸಿನಿಮಾ ರಿಲೀಸ್ ಆದರೆ, ಅದು ತಮಿಳಿಗರ ಪಾಲಿನ ನಾಡಹಬ್ಬ. ಅಂಥ ರಜಿನಿಕಾಂತ್ ರಾಜಕೀಯಕ್ಕೆ ಬರುತ್ತಾರಾ..? ತಮಿಳುನಾಡಿನಲ್ಲಿ ಬಿರುಗಾಳಿ ಎಬ್ಬಿಸುತ್ತಾರಾ..? ತಮಿಳುನಾಡಿನಲ್ಲಿ ದ್ರಾವಿಡ ಪಕ್ಷಗಳ ರಾಜಕೀಯ ಅಂತ್ಯವಾಗುತ್ತಾ..? ಸಂಚಲನ ಸೃಷ್ಟಿಯಾಗುತ್ತಾ..? ಈ ವರದಿ ಓದಿ.

ತಮಿಳುನಾಡಿನ ಇತಿಹಾಸ ಗೊತ್ತಿದ್ದವರಿಗೆ ಸಿನಿಮಾ ನಟರೆಂದರೆ ಕೇವಲ ಸ್ಟಾರ್​ಗಳಲ್ಲ...ರಾಜಕೀಯ ನಾಯಕರೂ ಹೌದು..ಅದು ಕರುಣಾನಿಧಿ, ಎಂಜಿಆರ್, ಜಯಲಲಿತಾ ಅಧಿಪತ್ಯದಲ್ಲಿ ಸಾಬೀತಾಗಿರುವ ಸತ್ಯ. ಸಿನಿಮಾ ನಟರು ರಾಜಕೀಯಕ್ಕೆ ಬಂದು ಮುಖ್ಯಮಂತ್ರಿ ಕೂಡಾ ಆಗಬಹುದು ಎಂದು ಸಾಬೀತು ಮಾಡಿದ ದೇಶದ ಮೊದಲ ರಾಜ್ಯ ತಮಿಳುನಾಡು.
ಈಗ ತಮಿಳುನಾಡು ರಾಜಕೀಯದಲ್ಲಿ ಕೊರತೆಯಾಗಿರುವುದು ಅದೇ...ಕರುಣಾನಿಧಿಯವರಿಗೆ ವಯಸ್ಸಾಗಿದೆ. ಅವರ ಮಕ್ಕಳಿಗೆ ಕರುಣಾನಿಧಿಯವರಿಗಿದ್ದ ಜನಪ್ರಿಯತೆ, ಚರಿಷ್ಮಾ ಇನ್ನೂ ಸಿಕ್ಕಿಲ್ಲ. ರಾಜಕೀಯದಲ್ಲಿ ಸಕ್ರಿಯರಾಗಿದ್ದರೂ ವಿಜಯ್​ಕಾಂತ್ ನಾಯಕತ್ವವನ್ನ ತಮಿಳುನಾಡು ಜನ ಇನ್ನೂ ಒಪ್ಪಿಕೊಂಡಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಅಣ್ಣಾಡಿಎಂಕೆಯ ಸರ್ವಸಮ್ಮತ ನಾಯಕಿ ಪುರಚ್ಚಿ ತಲೈವಿ ಇಲ್ಲ. ಹಾಗಾಗಿಯೇ ಈಗ ತಲೈವಾ ರಾಜಕೀಯಕ್ಕೆ ಬರುವ ಸಮಯ ಸನ್ನಿಹಿತವಾಗಿದೆ ಎಂಬ ಸಂದೇಶ ರವಾನೆಯಾಗುತ್ತಿರುವುದು.

ರಜಿನಿಕಾಂತ್​ಗೆ ಇಂಥಾದ್ದೊಂದು ಪ್ರಶ್ನೆ ಮೊತ್ತ ಮೊದಲ ಬಾರಿಗೆ 1996ರಲ್ಲಿ ಎದುರಾಗಿತ್ತು. ಆಗ ರಜಿನಿ ನೀಡಿದ್ದ ಉತ್ತರ ಇದು. ಸಮಯ ಕೂಡಿ ಬರಬೇಕು ಎನ್ನುವ ಅರ್ಥದಲ್ಲಿ ಮಾತನಾಡಿದ್ದರು ರಜಿನಿ. ರಾಜಕೀಯಕ್ಕೆ ಬರೋಕೆ ಕೇವಲ ಜನಪ್ರಿಯತೆ ಮಾನದಂಡವಾಗಬಾರದು. ಅದಕ್ಕೆ ಅರ್ಹತೆ, ಪರಿಶ್ರಮ ಮತ್ತು ಅನುಭವ ಮೂರೂ ಇರಬೇಕು. ಎಲ್ಲಕ್ಕೂ ಮಿಗಿಲಾಗಿ ಎಂಟ್ರಿ ಕೊಡುವ ಸಮಯ ಕರೆಕ್ಟ್ ಆಗಿರಬೇಕು ಎನ್ನುವ ವಾದ ಮುಂದಿಟ್ಟಿದ್ದರು ರಜಿನಿ. ಈಗ ಕಾಲ ಕೂಡಿ ಬಂತಾ..?

ಗಾಳ ಹಾಕಿದೆ ಬಿಜೆಪಿ - ದಾಳವಾಗುತ್ತಾರಾ ರಜಿನಿಕಾಂತ್..?

ರಜಿನಿಗೆ ಗಾಳ ಹಾಕಿದವರಲ್ಲಿ ಬಿಜೆಪಿ ನಾಯಕರು ಮೊದಲಿಗರೇನಲ್ಲ. ಕೊನೆಯವರೂ ಆಗಲಾರರು. ಆದರೆ, ರಾಜಕೀಯ ಚದುರಂಗದಾಟಕ್ಕೆ ರಜಿನಿ ಎಂಟ್ರಿ ಕೊಟ್ಟರೆ, ಅವರು ಖಂಡಿತಾ ದಾಳವಾಗಲ್ಲ. ಆದರೆ, ರಾಜನೇ..ಆಗಬೇಕು. ಏಕೆಂದರೆ, ರಜಿನಿಕಾಂತ್ ತಮಿಳಿಗರ ಪಾಲಿಗೆ ಕೇವಲ ಸೂಪರ್ ಸ್ಟಾರ್ ಅಲ್ಲ...ತಲೈವಾ..ಅಭಿಮಾನಿಗಳು ರಜಿನಿಯನ್ನು ಕರೆಯೋದೇ ಹಾಗೆ..ತಲೈವಾ ಎಂದರೆ ನಾಯಕ ಎಂದರ್ಥ.

ರಜಿನಿಕಾಂತ್​ ಅವರದ್ದೊಂದು ಫೇಮಸ್ ಡೈಲಾಗ್ ಗೊತ್ತಲ್ಲ. ನಾನು ಒಂದು ಸಲ ಹೇಳಿದರೆ, ನೂರು ಸಾರಿ ಹೇಳಿದಂತೆ..ಅಂಥಾ.ಆದರೆ, ರಾಜಕೀಯ ಕುರಿಂತೆ ರಜಿನಿಕಾಂತ್ ಹೀಗೆ ಒಂದೇ ಸಲ ತಮ್ಮ ಮಾರ್ಗ ತೋರಿಸಿಕೊಂಡಿಲ್ಲ. ಅವರು ಹಲವು ಬಾರಿ ರಾಜಕೀಯದ ಬಗ್ಗೆ ಮಾತನಾಡಿದ್ದಾರೆ...ಸ್ಪಷ್ಟ ಸಂದೇಶ ಸಿಕ್ಕಿಲ್ಲ.

ಆದರೆ, ನಿಮಗೆ ಗೊತ್ತಿರಲಿ. ಕೆಲವು ಬಾರಿ ಎಲ್ಲವನ್ನೂ ತ್ಯಜಿಸಿದ ಸನ್ಯಾಸಿಯಂತೆ ತೋರಿಸಿಕೊಳ್ಳುವ ರಜಿನಿಕಾಂತ್, ಸಿನಿಮಾಗಳಲ್ಲಿ ಮಾತ್ರ ರಾಜಕೀಯ ಸಂದೇಶ ಕೊಡುತ್ತಲೇ ಇರ್ತಾರೆ. ಆದರೆ, ರಜಿನಿಕಾಂತ್ ಹಾಗೆಲ್ಲ ರಾಜಕೀಯದಿಂದ ತಪ್ಪಿಸಿಕೊಳ್ಳೋಕೂ ಸಾಧ್ಯವಿಲ್ಲ. ಅವರಿಗೆ ಇಷ್ಟವಿದೆಯೋ..ಇಲ್ಲವೋ..ಅಗತ್ಯ ಇದೆಯೋ..ಇಲ್ಲವೋ..ಅವರು ರಾಜಕೀಯಕ್ಕೆ ಬರಲೇಬೇಕು..ಅವರು ರಾಜ್​ಕುಮಾರ್ ಥರಾ...ರಾಜಕೀಯದ ಸಹವಾಸ ಬೇಡ ಎಂದು ದೂರ ಹೋಗೋಕೆ ಸಾಧ್ಯವೇ ಇಲ್ಲ. ಅದಕ್ಕೆ ದಶಕಗಳ ಇತಿಹಾಸವೇ ಸಾಕ್ಷಿ.
ರಾಜಕೀಯ, ಅಲ್ಲಿ ನೇರವಂತಿಕೆ ಅನ್ನೋದು ಹೆಸರಿಗೆ ಮಾತ್ರ.ಆಡಿದ ಮಾತುಗಳಿಗಿಂತ ನುಂಗಿಕೊಳ್ಳುವ ಮಾತುಗಳಿಗೇ ಆರ್ಥ ಜಾಸ್ತಿ. ಆದರೆ ರಜಿನಿಕಾಂತ್ ಹಾಗಲ್ಲ. ತಮಗೆ ಅನ್ನಿಸಿದ್ದನ್ನು ನೇರವಾಗಿಯೇ ಹೇಳುವ ವ್ಯಕ್ತಿ. ಆಡಂಬರ, ದೊಡ್ಡಸ್ತಿಕೆಯನ್ನ ತೋರಿಸಿಕೊಳ್ಳುವ ಗುಣ ಅವರದ್ದಲ್ಲ. ಸರಳ ವ್ಯಕ್ತಿತ್ವ. ಮಾತು ಏನಿದ್ದರೂ.ನೇರ..ದಿಟ್ಟ..ನಿರಂತರ..

ಇದು ರಜಿನಿಕಾಂತ್. ಆ ವೇದಿಕೆಯಲ್ಲಿ ನಿಂತು, ಕರ್ನಾಟಕವನ್ನು ಬಾಯಿಗೆ ಬಂದಂತೆ ಬೈದು ಹೀರೋ ಆಗಬಹುದಿತ್ತು. ಏಕೆಂದರೆ, ಅದು ಕರ್ನಾಟಕ ಮತ್ತು ತಮಿಳುನಾಡು ಮಧ್ಯೆ ಕಿಚ್ಚು ಹೊತ್ತಿಸಿದ್ದ ಕಾವೇರಿ ಗಲಾಟೆಯ ಸಂದರ್ಭ. ರಜಿನಿಕಾಂತ್ ಕನ್ನಡಿಗರಾಗಿರುವ ಕಾರಣಕ್ಕೇ ತಮಿಳರ ಪರ ನಿಲ್ಲುತ್ತಿಲ್ಲ ಎಂದು ತಮಿಳು ಚಿತ್ರರಂಗ ಕೂಗೆಬ್ಬಿಸಿತ್ತು. ಆ ಕಷ್ಟ ಸಂದರ್ಭದಲ್ಲಿ ರಜಿನಿಯ ಆಪ್ತಮಿತ್ರರಾದ ಕಮಲ್ ಹಾಸನ್ ಕೂಡಾ ದೂರ ಸರಿದಿದ್ದರು. ತಮಿಳು ಚಿತ್ರರಂಗವೇ ರಜಿನಿ ವಿರುದ್ಧ ನಿಂತಿತ್ತು. ಆದರೂ ರಜಿನಿ ನೇರವಾಗಿ ತಮಗೆ ಅನ್ನಿಸಿದ್ದನ್ನು ನೇರವಾಗಿಯೇ ಹೇಳಿ ಎದ್ದು ಹೋಗಿದ್ದರು.

1991ರಲ್ಲೇ ಜಯಲಲಿತಾ ವಿರುದ್ಧ ಪ್ರತಿಭಟನೆಗಿಳಿದಿದ್ದ ರಜಿನಿ..!

1996ರಲ್ಲಿ ರಜಿನಿಗಾಗಿಯೇ ಸಿದ್ಧವಾಗಿತ್ತು ಕಾಂಗ್ರೆಸ್​ ವೇದಿಕೆ..!

ಇದು ಇತಿಹಾಸ. 1991ರಲ್ಲಿ ಜಯಲಲಿತಾ ಮೊದಲ ಬಾರಿಗೆ ಸಿಎಂ ಆಗಿದ್ದ ಸಮಯ ಅದು. ಜಯಲಲಿತಾ ಮನೆ ಇದೆಯಲ್ಲ..ಪೋಯಸ್ ಗಾರ್ಡನ್..ರಜಿನಿಕಾಂತ್ ಮನೆ ಇರೋದು ಕೂಡಾ ಅದೇ ಏರಿಯಾದಲ್ಲಿ. ಜಯಲಲಿತಾ ಮನೆ ಮತ್ತು ರಜಿನಿಕಾಂತ್ ಮನೆ, ಅದೇ ಏರಿಯಾದ ಒಂದೇ ಬೀದಿಯಲ್ಲಿವೆ. ಜಯಲಲಿತಾ ಸಿಎಂ ಆಗಿ ಬಂದಾಗ...ಅವರ ಮನೆಗಷ್ಟೇ ಅಲ್ಲ..ಇಡೀ ಏರಿಯಾ ಪೊಲೀಸ್ ಭದ್ರಕೋಟೆಯಾಗಿ ಹೋಗಿತ್ತು. ಇದರಿಂದ ಕಿರಿಕಿರಿಗೊಳಗಾದ ರಜಿನಿಕಾಂತ್ ಪ್ರತಿಭಟನೆಗಿಳಿದಿದ್ದರು. ಸಿಎಂ ಆಗಿದ್ದರೂ...ರಜಿನಿ ತಾಕತ್ತಿನ ಎದುರು ಜಯಲಲಿತಾ ಸೋತಿದ್ದರು. ಪೊಲೀಸ್ ಭದ್ರಕೋಟೆ ಕರಗಿತ್ತು. ಜಯಲಲಿತಾ ಮತ್ತು ರಜಿನಿಕಾಂತ್ ನಡುವಣ ಸ್ನೇಹ, ಆರಂಭದಲ್ಲಿ ಕೆಟ್ಟಿದ್ದು ನಿಜವಾದರೂ, ಸ್ವಲ್ಪ ಸಮಯದ ನಂತರ ಸರಿಹೋಗಿತ್ತು.

ಆದರೆ, 1996ರಲ್ಲಿ ರಜಿನಿಕಾಂತ್​ಗೆ ಕಾಂಗ್ರೆಸ್ ಗಾಳ ಹಾಕಿತ್ತು. ಆಗ ಪ್ರಧಾನಿಯಾಗಿದ್ದ ಪಿ.ವಿ. ನರಸಿಂಹರಾವ್, ತಮ್ಮ ಮೊಮ್ಮಗ ಸುಭಾಷ್ ರಾವ್ ಮೂಲಕ ರಜಿನಿ ಜೊತೆ ಮಾತುಕತೆ ನಡೆಸಿದ್ದರು. ಎರಡು ಸುತ್ತಿನ ಮಾತುಕತೆಯೂ ಆಗಿತ್ತು. ಕಾಂಗ್ರೆಸ್​ ಪರ ಟಿವಿಗಳಲ್ಲಷ್ಟೇ ಪ್ರಚಾರ ಮಾಡುವುದಾಗಿ ರಜಿನಿ ಒಪ್ಪಿಕೊಂಡಿದ್ದರು. ಆದರೆ...ಚುನಾವಣೆ ಸಮಯ ರಜಿನಿ ಕೈಕೊಟ್ಟಿದ್ದರು.

ಚುನಾವಣೆ ಹೊತ್ತಿಗೆ ‘ಕೈ’ ಕೊಟ್ಟು ಅಮೆರಿಕಕ್ಕೆ ಹಾರಿದ್ದ ರಜಿನಿಕಾಂತ್..! 

ಹಾಗಾದರೆ, ರಜಿನಿಗೆ ರಾಜಕೀಯ ಇಷ್ಟವಿರಲಿಲ್ಲವಾ..? ಈ ಪ್ರಶ್ನೆಗೆ ಸಿಕ್ಕಿದ್ದ ಉತ್ತರ, ರಜಿನಿಗೆ ಕಾಂಗ್ರೆಸ್​ನ ಕಲ್ಚರ್ ಇಷ್ಟವಾಗಿರಲಿಲ್ಲವಂತೆ. ಗೆದ್ದ ಮೇಲೆ ಅದು ಗೆಲ್ಲಿಸಿದವರನ್ನೇ ಮರೆತುಬಿಡುತ್ತೆ ಅನ್ನೋ ಕಾರಣಕ್ಕೆ ರಜಿನಿ ಹಾಗೆ ಎದ್ದು ಹೋಗಿದ್ದರು. ತಮಿಳುನಾಡಿನ ಇತಿಹಾಸ ಗೊತ್ತಿದ್ದವರಿಗೆ ಒಂದು ವಿಷಯವಂತೂ ನೆನಪಿನಲ್ಲಿರುತ್ತೆ. ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆಯೇ ನಡೆಯಲಿ...ಲೋಕಸಭೇ ಚುನಾವಣೆ ನಡೆಯಲಿ..ರಜಿನಿಯತ್ತ ಎಲ್ಲರೂ ಒಂದು ಕಣ್ಣಿಟ್ಟೇ ಇರುತ್ತಾರೆ...

2002ರಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರು ರಜಿನಿಕಾಂತ್..! 

ಇದು ವಿಚಿತ್ರ..ಆದರೂ ಸತ್ಯ. 2002ರಲ್ಲಿ ಕಾವೇರಿ ಭುಗಿಲೆದ್ದಾಗ, ಇಡೀ ತಮಿಳು ಚಿತ್ರರಂಗ ರಜಿನಿ ವಿರುದ್ಧ ನಿಂತಿತ್ತು. ಆದರೆ, ಕರ್ನಾಟಕದ ವಿರುದ್ಧ ತಮಿಳು ಚಿತ್ರರಂಗ ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರಜಿನಿಯ ಮಾತಿನಲ್ಲಿ ಸೂಪರ್ ಸ್ಟಾರ್ ಇರಲಿಲ್ಲ. ಒಬ್ಬ ಮುತ್ಸದ್ಧಿಯಿದ್ದ. ಏಕೆಂದರೆ, ಅಂದು ಗಂಗಾ-ಕಾವೇರಿ ನದಿ ಜೋಡಣೆ ಬಗ್ಗೆ ಮಾತನಾಡಿದ್ದ ರಜಿನಿಕಾಂತ್, ಅಷ್ಟಕ್ಕೇ ಸುಮ್ಮನಾಗಿರಲಿಲ್ಲ. ಸಮಸ್ಯೆಗೆ ಹೊಡೆದಾಟದಲ್ಲಿ ಪರಿಹಾರವಿಲ್ಲ...ಎಂದು ಹೇಳಿದ್ದ ರಜಿನಿ, ಉತ್ತರ ಭಾರತ ಮತ್ತು ದಕ್ಷಿಣ ಭಾರತದ ನದಿ ಜೋಡಣೆಗೆ ಆಂದೋಲನವನ್ನೇ ರೂಪಿಸಿದ್ದರು. ಸ್ವತಃ ಪ್ರಧಾನಿ ವಾಜಪೇಯಿಯವರನ್ನು ಭೇಟಿ ಮಾಡಿ ಆ ಯೋಜನೆಗೆ 1 ಕೋಟಿ ದೇಣಿಗೆ ಕೊಟ್ಟಿದ್ದರು. ರಾಷ್ಟ್ರಪತಿಯಾಗಿದ್ದ ಅಬ್ದುಲ್ ಕಲಾಂ, ಸಿಎಂಗಳಾಗಿದ್ದ ಜಯಲಲಿತಾ, ಎಸ್​.ಎಂ. ಕೃಷ್ಣ, ಚಂದ್ರಬಾಬು ನಾಯ್ಡು, ಮಾಜಿ ಪ್ರಧಾನಿಗಳಾಗಿದ್ದ ದೇವೇಗೌಡ, ಪಿ.ವಿ. ನರಸಿಂಹ ರಾವ್, ಸೋನಿಯಾ ಗಾಂಧಿ..ಹೀಗೆ ಎಲ್ಲರನ್ನೂ ಭೇಟಿ ಮಾಡಿ ರಾಜಕೀಯ ಐಕ್ಯತೆ ಸೃಷ್ಟಿಸಲು ಶ್ರಮಿಸಿದ್ದರು.

ಬಿಜೆಪಿಗೆ ಬಹಿರಂಗ ಬೆಂಬಲ ಘೋಷಿಸಿದ್ದ ರಜಿನಿಕಾಂತ್..!

ಇದು ಸಂಭವಿಸಿದ್ದು 2004ರ ಚುನಾವಣೆಯಲ್ಲಿ ಅದಕ್ಕೆ ಕಾರಣ, ನದಿ ಜೋಡಣೆ ವಿಚಾರದಲ್ಲಿ ವಾಜಪೇಯಿ ಅವರಿಗಿದ್ದ ಕನಸು. ಅದೇ ಕಾರಣಕ್ಕೆ ನಾನು ಬಿಜೆಪಿಗೆ ವೋಟ್ ಹಾಕುತ್ತೇನೆ ಎಂದಿದ್ದರು ರಜಿನಿಕಾಂತ್. ಆದರೆ, ನನ್ನ ಅಭಿಮಾನಿಗಳಿಗೆ ಯಾವ ಕರೆಯನ್ನೂ ಕೊಡುವುದಿಲ್ಲ. ಅವರು ತಮಗಿಷ್ಟ ಬಂದವರಿಗೆ ವೋಟು ಹಾಕಬಹುದು. ಆದರೆ, ಯೋಚಿಸಿ ವೋಟ್ ಹಾಕಿ ಎಂದಷ್ಟೇ ನಾನು ಹೇಳಬಲ್ಲೆ ಎಂದಿದ್ದರು ರಜಿನಿ. ಆಗ, ರಜಿನಿಕಾಂತ್ ವಿರುದ್ಧ ಪಿಎಂಕೆ ಹಿಂಸಾತ್ಮಕ ಪ್ರತಿಭಟನೆಗಿಳಿದಿತ್ತು. ರಜಿನಿ ಅಭಿಮಾನಿಗಳು ಪಿಎಂಕೆ ವಿರುದ್ಧ ರೊಚ್ಚಿಗೆದ್ದರು. ಆ ಗಲಾಟೆಯನ್ನು ನಿಯಂತ್ರಿಸುವಷ್ಟರಲ್ಲಿ ಸರ್ಕಾರ ಒದ್ದಾಡಿ ಹೋಗಿತ್ತು. ರಜಿನಿಯೇ ಬಂದು ತಮ್ಮ ಅಭಿಮಾನಿಗಳನ್ನು ಶಾಂತಗೊಳಿಸುವವರೆಗೆ ಗಲಭೆ ನಿಂತಿರಲಿಲ್ಲ.

2008ರಲ್ಲೂ ಅಷ್ಟೆ...ಸಮಯ ಬಂದಾಗ ನೋಡೋಣ ಎಂದಿದ್ದರು ರಜಿನಿಕಾಂತ್. ಆದರೆ, 2014ರಲ್ಲಿ ಹಾಗಾಗಿರಲಿಲ್ಲ. ಏನೊಂದು ಮಾತನಾಡದೆ ರಜಿನಿಕಾಂತ್ ರಾಜಕೀಯ ಸಂದೇಶ ಸಾರಿದ್ದರು. ಅದಕ್ಕೆ ಕಾರಣವಾಗಿದ್ದು ಪ್ರಧಾನಿ ನರೇಂದ್ರ ಮೋದಿ...

ಪಡಿಯಪ್ಪ...ಅದು ರಜಿನಿಕಾಂತ್​ರ ಸೂಪರ್ ಹಿಟ್ ಸಿನಿಮಾಗಳಲ್ಲೇ ಸೂಪರ್ ಡ್ಯೂಪರ್ ಹಿಟ್ ಸಿನಿಮಾ. ಆ ಚಿತ್ರದಲ್ಲಿ ರಜಿನಿ ಎದುರು ಖಳನಾಯಕಿಯಾಗಿದ್ದವರು ರಮ್ಯಕೃಷ್ಣ. ಆ ನೀಲಾಂಬರಿ ಪಾತ್ರವನ್ನ ಜಯಲಲಿತಾಗೆ ಹೋಲಿಸಿದ್ದರು ಅಭಿಮಾನಿಗಳು. ಅದು ಜಯಲಲಿತಾಗೆ ರಜಿನಿ ಕೊಟ್ಟ ಸಂದೇಶ ಎಂದೇ ನಂಬಿದ್ದರು. ಅದು ಸತ್ಯವಾಗಿದ್ದರೆ, ರಜಿನಿ ಇಷ್ಟೊತ್ತಿಗೆ ರಾಜಕೀಯಕ್ಕೆ ಬಂದು ಯಾವುದೋ ಕಾಲವಾಗುತ್ತಿತ್ತು. ರಜಿನಿಕಾಂತ್ ಬರಲಿಲ್ಲ. ಅದೇ ಜಯಲಲಿತಾ ಜೊತೆ ಉತ್ತಮ ಸಂಬಂಧ ಇಟ್ಟುಕೊಂಡರು ರಜಿನಿಕಾಂತ್. ಅದು ಅವರ ಅಂತ್ಯಕ್ರಿಯೆಯಲ್ಲೂ ಕಾಣಿಸಿತು. ಅದರಲ್ಲಿ ವಿಶೇಷವೇನಿರಲಿಲ್ಲ.

ಈಗ ಅದೇ ವಾದ ಸ್ವಲ್ಪ ಬದಲಾಗಿದೆ. ಜಯಲಲಿತಾ ಇದ್ದ ಕಾರಣಕ್ಕಾಗಿಯೇ ರಜನಿ ರಾಜಕೀಯಕ್ಕೆ ಬರಲಿಲ್ಲ. ಈಗ ಬರುತ್ತಾರೆ ಎಂಬ ಮಾತು ಕೇಳಿ ಬರ್ತಾ ಇದೆ. ಆದರೆ, ರಜಿನಿಕಾಂತ್ ಆಯ್ಕೆ ದ್ರಾವಿಡ ಪಕ್ಷಗಳಲ್ಲ. ಅರ್ಥಾತ್, ಅವರು ಡಿಎಂಕೆಗೂ ಹೋಗಲ್ಲ..ಅಣ್ಣಾಡಿಎಂಕೆಗೂ ಹೋಗಲ್ಲ. ಬದಲಿಗೆ ಬಿಜೆಪಿಗೆ ಬರುತ್ತಾರೆ ಎಂಬ ಮಾತು ಹರಿದಾಡುತ್ತಿದೆ. ಅದಕ್ಕೆ ಕಾರಣ, ಮೋದಿ ಜೊತೆ ಇರುವ ರಜಿನಿ ಸಂಬಂಧ.

ಪ್ರಧಾನಿ ಮೋದಿ, ಲೋಕಸಭೆ ಚುನಾವಣೆಗೂ ಮುನ್ನ ಕೂಡಾ ರಜನಿ ಜೊತೆ ಕಾಣಿಸಿಕೊಂಡಿದ್ದರು. ಅದಾದ ಮೇಲೂ ರಜನಿ ಜೊತೆ ಗುರುತಿಸಿಕೊಂಡಿದ್ದಾರೆ. ನಿಮಗೆ ಗೊತ್ತಿರಲಿ..ರಜಿನಿಕಾಂತ್ ಟ್ವಿಟರ್​ನಲ್ಲಿ ಇದ್ದರೂ, ಌಕ್ಟಿವ್ ಇಲ್ಲ. ಅವರಿಗೆ ಬೇಕು ಎನ್ನಿಸಿದಾಗ, ಒಂದು ಟ್ವೀಟ್ ಮಾಡಿ ಸುಮ್ಮನಾಗಿ ಬಿಡುತ್ತಾರೆ. ಅಂಥಾ ರಜಿನಿಕಾಂತ್, ನವೆಂಬರ್ 8ರಂದು ಪ್ರಧಾನಿ ಮೋದಿ ಹಳೆ ನೋಟು ನಿಷೇಧ ಮಾಡಿದ ತಕ್ಷಣ ' ಹ್ಯಾಟ್ಸಾಫ್ @ ನರೇಂದ್ರ ಮೋದಿಜಿ, ನವಭಾರತದ ಉದಯವಾಗುತ್ತಿದೆ #ಜೈಹಿಂದ್' ಎಂದು ಟ್ವೀಟ್ ಮಾಡಿದ್ದರು.

ಎಂಟ್ರಿಗೆ ರೆಡಿಯಾಗುತ್ತಿದ್ದಾರೆ

ಈಗ ತಮಿಳುನಾಡಿನಲ್ಲಿ ರಜಿನಿ ರಾಜಕೀಯಕ್ಕೆ ಬರಬಹುದಾದ ವಾತಾವರಣ ಸೃಷ್ಟಿಯಾಗಿದೆ. ಅಣ್ಣಾಡಿಎಂಕೆಯಲ್ಲಿ ಜಯಲಲಿತಾ ಬಿಟ್ಟು ಹೋದ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಪ್ರತಿಷ್ಠಾಪನೆಯಾಗಲು ಶಶಿಕಲಾ ಹರಸಾಹಸ ಬೀಳುತ್ತಿದ್ದಾರೆ. ಪನ್ನೀರ್ ಸೆಲ್ವಂ ಮುಖ್ಯಮಂತ್ರಿ ಹುದ್ದೆಯಲ್ಲಿ ಭದ್ರವಾಗಿ ಕೂರಲು ಸಾಹಸ ಬೀಳುತ್ತಿದ್ದಾರೆ. ಆದರೆ, ಒಳಗಿನ ಮರ್ಮ ಬೇರೆಯೇ ಇದೆ. ಅಣ್ಣಾಡಿಎಂಕೆಯಲ್ಲಿ ಇವಱರೂ ಜಯಲಲಿತಾ ರೀತಿ ಸರ್ವಸಮ್ಮತ ನಾಯಕರಾಗೋಕೆ ಸಾಧ್ಯವಿಲ್ಲ. ಪಕ್ಷದ ಶಾಸಕರಲ್ಲೇ ಈ ಬಗ್ಗೆ ಒಮ್ಮತವಿಲ್ಲ. ಹೀಗಾಗಿಯೇ ಬಿಜೆಪಿ ತಮಿಳುನಾಡಿನಲ್ಲಿ ಬೇರು ಬಿಡುವ ಕನಸು ಕಾಣುತ್ತಿದೆ.

2014ರಲ್ಲಿ 7 ಲೋಕಸಭಾ ಸ್ಥಾನಗಳಿಗೆ ಸ್ಪರ್ಧಿಸಿದ್ದ ಬಿಜೆಪಿ, ಮೋದಿ ಅಲೆಯಲ್ಲಿ ಕನ್ಯಾಕುಮಾರಿಯಲ್ಲಿ ಗೆದ್ದು, ಗೆಲುವಿನ ಖಾತೆ ತೆರೆದಿತ್ತು. 6 ಕ್ಷೇತ್ರಗಳಲ್ಲಿ 2ನೇ ಸ್ಥಾನ ಪಡೆದಿತ್ತು. ಆದರೆ, 2016ರ ವಿಧಾನಸಭಾ ಚುನಾವಣೆಯಲ್ಲಿ ಒಂದೂ ಸ್ಥಾನ ಗೆಲ್ಲಲು ವಿಫಲವಾಗಿತ್ತು.ಹೀಗಾಗಿಯೇ ಬಿಜೆಪಿ ಹೊಸ ನಾಯಕನ ಹುಡುಕಾಟದಲ್ಲಿದೆ. ಆ ನಾಯಕ ರಜಿನಿಕಾಂತ್ ಆಗುತ್ತಾರಾ ಎಂಬ ನಿರೀಕ್ಷೆಯೂ ಇದೆ. ಈ ಹಿಂದೆ ಮೋದಿ ಚೆನ್ನೈಗೆ ಹೋಗಿ ರಜಿನಿಕಾಂತ್​ರನ್ನು ಭೇಟಿ ಮಾಡಿದ್ದಾಗ, ಅದೊಂದು ಸೌಹಾರ್ಧ ಭೇಟಿಯಷ್ಟೇ ಎಂದಿದ್ದರು ರಜಿನಿಕಾಂತ್.

ಆದರೆ, ಈಗ ಸಮಯ ಬದಲಾಗಿದೆ. ಕಾಲಚಕ್ರ ತಿರುಗಿದೆ. ರಾಜಕೀಯದಲ್ಲಿ ರಜಿನಿಯೇ ಹೇಳುವಂತೆ ಕಾಲಕ್ಕೆ ತುಂಬಾ ಬೆಲೆಯಿದೆ. ಎಂಟ್ರಿ ಕೊಡುವುದು ಮುಖ್ಯವಲ್ಲ. ಯಾವಾಗ ಎಂಟ್ರಿ ಕೊಡುತ್ತೇವೆ ಅನ್ನುವುದು ಮುಖ್ಯ. ಅಂಥಾದ್ದೊಂದು ಸಮಯ ಈಗ ಹತ್ತಿರ ಬಂದಿದೆ ಅನ್ನೋ ಲೆಕ್ಕಾಚಾರ ಬಿಜೆಪಿಯದ್ದು. ತಮಿಳುನಾಡಿನ ಬಿಜೆಪಿ ಅಧ್ಯಕ್ಷೆ ತಮಿಳಿನ ಸೌಂದರ್ ರಾಜನ್ ಈಗಾಗಲೇ ಎರಡು ಬಾರಿ ರಜಿನಿ ಮನೆಗೆ ಹೋಗಿ ಬಂದಿದ್ದಾಗಿದೆ. ದ್ರಾವಿಡ ಪಕ್ಷಗಳ ಹಿಡಿತ ಸಡಿಲಗೊಳ್ಳುತ್ತಿರುವ ಈ ಸಮಯದಲ್ಲಿ, ಕಾಂಗ್ರೆಸ್ ಹೋರಾಟದ ಶಕ್ತಿಯನ್ನೇ ಕಳೆದುಕೊಂಡಿರುವ ಹೊತ್ತಿನಲ್ಲಿ, ಪ್ರತಿಪಕ್ಷವೂ ಪ್ರಾಬಲ್ಯ ಕಳೆದುಕೊಂಡಿರುವ ಈ ಸಮಯಕ್ಕಿಂತ ಇನ್ನೊಂದು ಶುಭ ಸಂದರ್ಭ ಬರಲಾರದು ಎಂಬುದೇ ರಾಜಕೀಯ ವಿಶ್ಲೇಷಕರ ಲೆಕ್ಕಾಚಾರ. ರಜಿನಿ ರಾಜಕೀಯಕ್ಕೆ ಬರುತ್ತಾರಾ..?

ವರದಿ: ಶೇಖರ್ ಪೂಜಾ