ಬೆಂಗಳೂರು :  ರಾಜ್ಯದ ಪದವಿ ಮತ್ತು ವಿಶ್ವವಿದ್ಯಾಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಯುಜಿಸಿ ನಿಗದಿಪಡಿಸಿರುವ ವೇತನ ಮತ್ತು ಸೇವಾ ಭದ್ರತೆ ನೀಡುವುದಾಗಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಭರವಸೆ ನೀಡಿದರು.

ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯ ಬೋಧಕ ಮತ್ತು ಬೋಧಕೇತರ ಕುಂದು ಕೊರತೆಗಳು ಮತ್ತು ಇಲಾಖೆಯ ಆಡಳಿತಾತ್ಮಕ ವಿಷಯಗಳ ಕುರಿತು ಮಂಗಳವಾರ ಉನ್ನತ ಶಿಕ್ಷಣ ಪರಿಷತ್ತಿನಲ್ಲಿ ವಿಧಾನ ಪರಿಷತ್‌ ಸದಸ್ಯರೊಂದಿಗೆ ನಡೆಸಿದ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಮಾತ್ರ ಅತಿಥಿ ಉಪನ್ಯಾಸಕರಿಗೆ 25 ಸಾವಿರ ರು. ವೇತನ ನೀಡಲಾಗುತ್ತಿದೆ. ಉಳಿದ ವಿವಿಗಳಲ್ಲಿ 11ರಿಂದ 14 ಸಾವಿರ ವೇತನ ನೀಡಲಾಗುತ್ತಿದೆ. ಸೇವಾ ಭದ್ರತೆ ಕೂಡ ಇಲ್ಲದಂತಾಗಿದೆ ಎಂಬ ವಿಧಾನ ಪರಿಷತ್‌ ಸದಸ್ಯರ ಮಾತಿಗೆ ಪ್ರತಿಕ್ರಿಯಿಸಿದ ಸಚಿವರು, ಸೇವಾ ಹಿರಿತನ ಪರಿಗಣಿಸಿ ಕನಿಷ್ಠ 25 ಸಾವಿರ ರು. ವೇತನ ನೀಡುವುದರ ಬಗ್ಗೆ ಸರ್ಕಾರದಿಂದ ಪ್ರಸ್ತಾವನೆ ಪಡೆದು ಅನುಷ್ಠಾನ ಮಾಡುವುದಾಗಿ ಹೇಳಿದರು.

ಪದವಿ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಾಧ್ಯಾಪಕರಿಗೆ ಕೇಂದ್ರ ಏಳನೇ ವೇತನ ಅನುಷ್ಠಾನ ಮಾಡಬೇಕು ಮತ್ತು ಆರನೇ ವೇತನ ಆಯೋಗದ ಹಿಂಬಾಕಿ ನೀಡಬೇಕೆಂದು ಪದವಿ ಕಾಲೇಜುಗಳ ಪ್ರಾಧ್ಯಾಪಕರ ಒಕ್ಕೂಟ ಸಚಿವರ ಬಳಿ ಮನವಿ ಮಾಡಿತು. ಈ ವಿಚಾರವಾಗಿ ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಚರ್ಚಿಸಲಾಗುವುದು ಎಂದರು.

ನಮಗೆ ಬೆಲೆಯೇ ಇಲ್ಲವೇ:  ಉನ್ನತ ಶಿಕ್ಷಣ ಕಚೇರಿಗಳಲ್ಲಿ ಶಾಸಕರು, ವಿಧಾನ ಪರಿಷತ್ತಿನ ಸದಸ್ಯರಿಗೆ ಬೆಲೆಯೇ ಇಲ್ಲದಂತಾಗಿದೆ. ಕೆಲಸದ ಮೇಲೆ ಕಚೇರಿಗೆ ತೆರಳಿದರೆ, ಕುರ್ಚಿ ಹಾಕುವಷ್ಟುಸೌಜನ್ಯ ಅಧಿಕಾರಿಗಳಿಗಿಲ್ಲ. ಹಣ ಇಲ್ಲದೆ ಯಾವುದೇ ಕೆಲಸವಾಗುತ್ತಿಲ್ಲ. ಶಿಕ್ಷಣ ಇಲಾಖೆಯಲ್ಲಿ ಅತಿ ಹೆಚ್ಚಿನ ಭ್ರಷ್ಟಾಚಾರ ನಡೆಯುತ್ತಿದೆ ಎಂದು ವಿಧಾನ ಪರಿಷತ್ತಿನ ಸದಸ್ಯರೊಬ್ಬರು ಆರೋಪಿಸಿದರು. ಇದಕ್ಕೆ ಇತರೆ ಸದಸ್ಯರು ಕೂಡ ಧ್ವನಿಗೂಡಿಸಿದರು. ಇದು ಹೆಚ್ಚಿನ ಚರ್ಚೆಗೆ ಗ್ರಾಸವಾಯಿತು. ಸಭೆಯಲ್ಲಿ ಉಪನ್ಯಾಸಕರ ವರ್ಗಾವಣೆ, ನಿಯೋಜನೆ, ಅನುದಾನಿತ ಕಾಲೇಜುಗಳಲ್ಲಿ ಖಾಲಿ ಇರುವ ಉಪನ್ಯಾಸಕರ ಭರ್ತಿ, ಕಾಲ್ಪನಿಕ ವೇತನ ಬಡ್ತಿ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು.

ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ, ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಎನ್‌. ನಾಗಾಂಬಿಕಾ ದೇವಿ, ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕ ಎಚ್‌.ಯು. ತಳವಾರ, ವಿಧಾನ ಪರಿಷತ್ತಿನ ಸದಸ್ಯರಾದ ಪುಟ್ಟಣ್ಣ, ಅರುಣ್‌ ಶಹಾಪೂರ, ಕೆ.ಟಿ. ಶ್ರೀಕಂಠೇಗೌಡ, ಮರಿತಿಬ್ಬೇಗೌಡ, ನಿರಾಣಿ ಹಣಮಂತ ರುದ್ರಪ್ಪ, ಎಸ್‌.ಎಲ್‌.ಭೋಜೇಗೌಡ ಪಾಲ್ಗೊಂಡಿದ್ದರು.