ಶೀಘ್ರವೇ ಕರ್ನಾಟಕ ಕ್ಯಾಬಿನೆಟ್ ವಿಸ್ತರಣೆಯಾಗಲಿದ್ದು ಸೆಪ್ಟೆಂಬರ್ ಮೂರನೇ ವಾರದಲ್ಲೇ ಆಗುವ ಸಾಧ್ಯತೆ ಇದೆ. ಇನ್ನು ನಿಗಮ ಮಂಡಳಿಗಳಿಗೂ ಶೀಘ್ರವೇ ನೇಮಕಾತಿ ಮಾಡಲು ತೀರ್ಮಾನ ಮಾಡಲಾಗಿದೆ. 

ಬೆಂಗಳೂರು :  ಕಡೆಗೂ ಸಚಿವ ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿ ಅಧ್ಯಕ್ಷ -ಉಪಾಧ್ಯಕ್ಷ ನೇಮಕಕ್ಕೆ ಸಮಯ ನಿಗದಿಯಾಗಿದ್ದು, ಸೆಪ್ಟೆಂಬರ್‌ ಮೂರನೇ ವಾರದಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸುವ ಮಹತ್ವದ ತೀರ್ಮಾನವನ್ನು ಶುಕ್ರವಾರ ಸಂಜೆ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಕೈಗೊಳ್ಳಲಾಗಿದೆ.

ಇದಲ್ಲದೆ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಫ್ರೆಂಡ್ಲಿ ಫೈಟ್‌ ಮಾಡಿದ್ದರೂ, ಫಲಿತಾಂಶ ಅತಂತ್ರವಾಗಿರುವ ಕಡೆ ಜೆಡಿಎಸ್‌-ಕಾಂಗ್ರೆಸ್‌ ಜತೆಗೂಡಿ ಅಧಿಕಾರ ಹಿಡಿಯಲು ಹಾಗೂ ವಿಧಾನಪರಿಷತ್ತಿನ ಆರು ಸ್ಥಾನಗಳು (ಮೂರು ನಾಮನಿರ್ದೇಶನ ಹಾಗೂ ಮೂರು ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ಚುನಾವಣೆ ಮೂಲಕ ಆಯ್ಕೆ) ಭರ್ತಿಗೆ ಅರ್ಹರನ್ನು ಆಯ್ಕೆ ಮಾಡುವ ತೀರ್ಮಾನವನ್ನು ಸಭೆ ಕೈಗೊಂಡಿತು.

ಸಮನ್ವಯ ಸಮಿತಿ ಸಭೆಯ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು, ಕಾಂಗ್ರೆಸ್‌ನಿಂದ ಆರು ಹಾಗೂ ಜೆಡಿಎಸ್‌ನಿಂದ ಒಬ್ಬರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವುದು ಬಾಕಿಯಿದೆ. ಸೆಪ್ಟೆಂಬರ್‌ ಮೂರನೇ ವಾರದಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ಇದೇ ಸಂದರ್ಭದಲ್ಲಿ ನಿಗಮ ಮಂಡಳಿಗಳ ನೇಮಕಾತಿಯನ್ನು ನಡೆಸಲಾಗುವುದು ಎಂದು ಪ್ರಕಟಿಸಿದರು.

ಕಾಂಗ್ರೆಸ್‌ನಿಂದ 20 ಹಾಗೂ ಜೆಡಿಎಸ್‌ನಿಂದ 10 ಸೇರಿದಂತೆ ಒಟ್ಟು 30 ನಿಗಮ-ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲು ಸಮನ್ವಯ ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಮೊದಲ ಹಂತದಲ್ಲಿ ಶಾಸಕರನ್ನು ನಿಗಮ ಮಂಡಳಿಗಳಿಗೆ ನೇಮಕ ಮಾಡಿಕೊಳ್ಳಲಾಗುವುದು. ಏಕೆಂದರೆ, ಕಾಂಗ್ರೆಸ್‌ನಲ್ಲಿ ಸಚಿವ ಸಂಪುಟ ಸೇರ್ಪಡೆಯಾಗುವ ಅರ್ಹತೆ ಹೊಂದಿರುವ ಶಾಸಕರ ಸಂಖ್ಯೆ ಹೆಚ್ಚಿದೆ. ಆದರೆ, ಎಲ್ಲರಿಗೂ ಸಂಪುಟದಲ್ಲಿ ಅವಕಾಶ ನೀಡಲು ಸಾಧ್ಯವಿಲ್ಲ. ಹೀಗಾಗಿ ಮೊದಲ ಹಂತದಲ್ಲಿ ಶಾಸಕರಿಗೆ ಅವಕಾಶ ನೀಡಿ, ಎರಡನೇ ಹಂತದಲ್ಲಿ ಕಾರ್ಯಕರ್ತರಿಗೆ ಆದ್ಯತೆ ನೀಡಲಾಗುವುದು ಎಂದರು.

ಎಂಎಲ್‌ಸಿ ಸ್ಥಾನಗಳ ಹಂಚಿಕೆ ಬಗ್ಗೆ ಚರ್ಚೆ: ವಿಧಾನಪರಿಷತ್‌ಗೆ ನಾಮನಿರ್ದೇಶನ ಹಾಗೂ ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಸದಸ್ಯರ ನೇಮಕದ ಬಗ್ಗೆ ಗಂಭೀರ ಚರ್ಚೆ ನಡೆದಿದೆ. ವಿಧಾನಸಭೆಯಿಂದ ನೇಮಕಗೊಂಡ ವಿ.ಸೋಮಣ್ಣ, ಕೆ.ಎಸ್‌. ಈಶ್ವರಪ್ಪ ಹಾಗೂ ಡಾ.ಜಿ.ಪರಮೇಶ್ವರ್‌ ಅವರ ಅವಧಿ ಮುಗಿಯುವ ಮೊದಲೇ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಸೋಮಣ್ಣ ಅವರ ಅವಧಿ 4 ವರ್ಷ, ಪರಮೇಶ್ವರ್‌ ಅವಧಿ 2 ವರ್ಷ ಹಾಗೂ ಈಶ್ವರಪ್ಪ ಅವರ ಅವಧಿ 2 ವರ್ಷ ಬಾಕಿ ಇದೆ. ಜತೆಗೆ ಸರ್ಕಾರದಿಂದ ನಾಮನಿರ್ದೇಶನ ಮಾಡಬೇಕಾದ ಸದಸ್ಯರ ಬಗ್ಗೆಯೂ ಚರ್ಚೆ ನಡೆದಿದೆ. ಆದರೆ, ಜೆಡಿಎಸ್‌ ಹಾಗೂ ಕಾಂಗ್ರೆಸ್‌ ನಡುವೆ ಎಷ್ಟುಸ್ಥಾನಗಳು ಹಂಚಿಕೆಯಾಗಬೇಕು ಎಂಬ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಬಡ್ತಿ ಮೀಸಲು- ತೀರ್ಪು ಬಳಿಕ ಕ್ರಮ:  ಬಡ್ತಿ ಮೀಸಲಾತಿ ಬಗ್ಗೆಯೂ ಸಮನ್ವಯ ಸಮಿತಿ ಸಭೆಯಲ್ಲಿ ಗಂಭೀರವಾಗಿ ಚರ್ಚೆ ನಡೆದಿದೆ. ಬಡ್ತಿ ಮೀಸಲಾತಿಯನ್ನು ಮುಂದುವರೆಸಬೇಕು ಎಂದು ಕಾಂಗ್ರೆಸ್‌ ಪಟ್ಟು ಹಿಡಿದಿದ್ದು, ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಸೆ.5ರಂದು ಸುಪ್ರೀಂಕೋರ್ಟ್‌ ಬಡ್ತಿ ಮೀಸಲಾತಿ ಕುರಿತು ತೀರ್ಪು ನೀಡಲಿದೆ. ಆ ಬಳಿಕ ತೀರ್ಮಾನ ಮಾಡೋಣ ಎಂದು ಹೇಳಿದರು. ಈ ವೇಳೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಬಡ್ತಿ ಮೀಸಲಾತಿ ತೀರ್ಪು ಬಂದ ಕೂಡಲೇ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು ಎಂದು ತಿಳಿದುಬಂದಿದೆ.

ಸರ್ಕಾರದ ವಿರುದ್ಧದ ಹೇಳಿಕೆಗಳಿಗೆ ಬ್ರೇಕ್‌?:

ಶಾಸಕರು ಸರ್ಕಾರದ ಬಗ್ಗೆ ಗೊಂದಲಮಯ ಹೇಳಿಕೆ ನೀಡುವುದರಿಂದ ಸರ್ಕಾರದ ವರ್ಚಸ್ಸಿಗೆ ಪೆಟ್ಟು ಬೀಳುತ್ತಿದೆ. ಹೀಗಾಗಿ ಶಾಸಕರ ಇಂತಹ ಹೇಳಿಕೆಗಳನ್ನು ನಿಭಾಯಿಸುವ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು. ಜೆಡಿಎಸ್‌ ಹಾಗೂ ಕಾಂಗ್ರೆಸ್‌ ನಡುವೆ 5 ವರ್ಷ ಸರ್ಕಾರಕ್ಕೆ ಬೆಂಬಲ ನೀಡುವುದಾಗಿ ಲಿಖಿತ ಒಪ್ಪಂದ ಆಗಿದೆ. ಅಲ್ಲದೆ, ಎರಡೂ ಪಕ್ಷಗಳ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ಸರ್ಕಾರ ಜಾರಿಗೆ ತರುತ್ತಿದೆ. ಆದರೂ, ಸರ್ಕಾರ ಅಸ್ಥಿರಗೊಳಿಸುವಂತಹ ಹೇಳಿಕೆ ನೀಡಲಾಗುತ್ತಿದೆ. ಈ ಬಗ್ಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು. ಈ ಹಿನ್ನೆಲೆಯಲ್ಲಿ ಕೆ.ಸಿ. ವೇಣುಗೋಪಾಲ್‌ ಕಾಂಗ್ರೆಸ್‌ನಿಂದ ಇಂತಹ ಹೇಳಿಕೆಗಳು ಮರುಕಳಿಸಿದಂತೆ ಎಚ್ಚರವಹಿಸುವುದಾಗಿ ಭರವಸೆ ನೀಡಿದರು ಎಂದು ತಿಳಿದುಬಂದಿದೆ.

ಜೆಡಿಎಸ್‌ ರಾಜ್ಯಾಧ್ಯಕ್ಷರಾದ ಎಚ್‌. ವಿಶ್ವನಾಥ್‌ ಹಾಗೂ ಕಾಂಗ್ರೆಸ್‌ ರಾಜ್ಯಾಧ್ಯಕ್ಷರಾದ ದಿನೇಶ್‌ ಗುಂಡೂರಾವ್‌ ಇಬ್ಬರೂ ಸಮನ್ವಯ ಸಮಿತಿಯಲ್ಲಿ ಸ್ಥಾನ ಪಡೆದಿಲ್ಲ. ಹೀಗಾಗಿ ಸಮನ್ವಯ ಸಮಿತಿಗೆ ಹೊಸ ಸದಸ್ಯರನ್ನು ಸೇರ್ಪಡೆ ಮಾಡಿಕೊಳ್ಳುವ ಬಗ್ಗೆಯೂ ಚರ್ಚೆ ನಡೆಯಿತು. ಆದರೆ, ಸದ್ಯಕ್ಕೆ ಈ ಬಗ್ಗೆ ಯಾವುದೇ ತೀರ್ಮಾನಕ್ಕೆ ಬರುವುದು ಬೇಡ ಎಂದು ವಿಷಯ ಮುಂದೂಡಿದರು ಎಂದು ಮೂಲಗಳು ತಿಳಿಸಿವೆ.

ಇನ್ನು ಕೊಡಗು ಜಿಲ್ಲೆಯಲ್ಲಿ ಆಗಿರುವ ಅನಾಹುತದ ಬಗ್ಗೆ ಸಮರೋಪಾದಿಯಲ್ಲಿ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್‌ ಸಲಹೆ ನೀಡಿದೆ. ಅತಿವೃಷ್ಟಿಯಿಂದ ತೀವ್ರ ನಷ್ಟಉಂಟಾಗಿದೆ. ಹೀಗಾಗಿ ಕೊಡಗು ಪುನರ್‌ ನಿರ್ಮಾಣಕ್ಕೆ ಆದ್ಯತೆ ನೀಡಿ ಕೆಲಸ ಮಾಡಬೇಕು. ಈಗಾಗಲೇ ಪರಿಹಾರ ಹಾಗೂ ಅನುದಾನ ಬಿಡುಗಡೆ ಮಾಡಲಾಗಿದೆ. ಆದರೂ, ಮತ್ತಷ್ಟುಆದ್ಯತೆ ನೀಡಿ ಕೊಡಗು ಪುನರ್‌ ನಿರ್ಮಾಣಕ್ಕೆ ಕೆಲಸ ಮಾಡಬೇಕು ಎಂಬುದನ್ನು ಗಮನಕ್ಕೆ ತಂದಿದ್ದೇವೆ ಎಂದರು.

ಶುಕ್ರವಾರ ಸಂಜೆ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌, ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಹಾಗೂ ಜೆಡಿಎಸ್‌ ಮುಖಂಡ ಡ್ಯಾನಿಶ್‌ ಅಲಿ ಅವರು ಒಂದೂವರೆ ಗಂಟೆ ಕಾಲ ಚರ್ಚೆ ನಡೆಸಿದರು.

ಇತರೆ ನಿರ್ಧಾರಗಳು

1. ಅತಂತ್ರ ಫಲಿತಾಂಶ ಬಂದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ

2. ಸುಪ್ರೀಂಕೋರ್ಟ್‌ ಆದೇಶ ಬಂದ ಬಳಿಕ ಅಧಿಕಾರಿಗಳ ಬಡ್ತಿ ಮೀಸಲಾತಿ ಬಗ್ಗೆ ಕ್ರಮ

3. ಸರ್ಕಾರದ ಬಗ್ಗೆ ಶಾಸಕರ ಗೊಂದಲಕಾರಿ ಹೇಳಿಕೆಗಳಿಗೆ ಬ್ರೇಕ್‌: ಕಾಂಗ್ರೆಸ್‌ ಭರವಸೆ

4. ಸಮನ್ವಯ ಸಮಿತಿಗೆ ರಾಜ್ಯಾಧ್ಯಕ್ಷರ ನೇಮಕ ಬಗ್ಗೆ ಚರ್ಚೆ, ನಿರ್ಧಾರ ಮುಂದೂಡಿಕೆ

5. ಎಂಎಲ್‌ಸಿ ನಾಮನಿರ್ದೇಶನ, ನೇಮಕ ಕುರಿತೂ ಮಾತುಕತೆ. ಹಂಚಿಕೆ ಇನ್ನೂ ಇಲ್ಲ

ಅನ್ನಭಾಗ್ಯ ಅಕ್ಕಿ 7 ಕೇಜಿಗೇರಿಕೆ

ಸಭೆಯಲ್ಲಿ ಹಿಂದಿನ ಸರ್ಕಾರದಲ್ಲಿ ಪ್ರತಿ ವ್ಯಕ್ತಿಗೆ ಅನ್ನಭಾಗ್ಯ ಯೋಜನೆಯಡಿ ನೀಡುತ್ತಿದ್ದ 7 ಕೆ.ಜಿ. ಅಕ್ಕಿ ಪ್ರಮಾಣವನ್ನು 5 ಕೆ.ಜಿ.ಗೆ ಇಳಿಕೆ ಮಾಡಿರುವ ಬಗ್ಗೆ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪರಿಣಾಮ ಪಡಿತರ ಅಕ್ಕಿಯನ್ನು 7 ಕೆ.ಜಿ.ಗೆ ಹೆಚ್ಚಳ ಮಾಡಲು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಒಪ್ಪಿಗೆ ನೀಡಿದ್ದು, ಕೂಡಲೇ ಅನುಷ್ಠಾನಗೊಳಿಸುವುದಾಗಿ ಭರವಸೆ ನೀಡಿದರು.