ಮುಂಬೈ (ಫೆ. 16):  ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ದೇಶವೇ ಕಂಬನಿ ಮಿಡಿಯುತ್ತದೆ. ಪ್ರತಿಯೊಬ್ಬ ಭಾರತೀಯನ ಹೃದಯವೂ ಭಾರವಾಗಿದೆ. ಇಡೀ ದೇಶ ಶೋಕ ಸಾಗರದಲ್ಲಿ ಮುಳುಗಿದೆ. 

ಈ ಸಂದರ್ಭದಲ್ಲಿ ಗಾಯಕ ಸೋನು ನಿಗಂ ಜಾತ್ಯಾತೀತರು, ಪ್ರಗತಿಪರರ ಕಾಲೆಳೆದಿದ್ದಾರೆ. 

"44 ಮಂದಿ ಸಿಆರ್ ಪಿಎಫ್ ಯೋಧರ ಸಾವಿಗೆ ನೀವ್ಯಾಕೆ ಇಷ್ಟೊಂದು ದುಃಖಪಡುತ್ತಿದ್ದೀರಿ? ಇದರಲ್ಲಿ ದುಃಖದ ಮಾತೇನಿದೆ? ಈ ದೇಶದಲ್ಲಿ ಜಾತ್ಯಾತೀತರು ಏನು ಮಾಡುತ್ತಾರೋ ನೀವು ಅದನ್ನೇ ಮಾಡಿ" ಎಂದು ವ್ಯಂಗ್ಯವಾಡಿದ್ದಾರೆ. 

" ನಮ್ಮ ಯೋಧರ ಸಾವಿನ ದುಃಖವನ್ನು ಆರ್ ಎಸ್ ಎಸ್, ಬಿಜೆಪಿ, ರಾಷ್ಟ್ರವಾದಿ ಸನಾತನ ಸಂಸ್ಥೆಗೆ ಬಿಟ್ಟು ಬಿಡಿ. ಇಲ್ಲಿನ ಸೆಕ್ಯುಲರ್ ಮಂದಿ ಏನು ಮಾಡುತ್ತಿದ್ದಾರೋ ನೀವು ಅದನ್ನೇ ಮಾಡಿ. ನೀವು ಭಾರತದಲ್ಲಿರಬೇಕೆಂದರೆ ಭಾರತ್ ತೇರೆ ಟುಕ್ಡೇ ಟುಕ್ಡೆ ಹೋಂಗೆ, ಅಫ್ಜಲ್ ಹಮ್ ಶರ್ಮಿಂದಾ ಹೈ ಈ ರೀತಿಯ ಸೆಕ್ಯುಲರ್ ಚಿಂತನೆಗಳನ್ನು ಅಳವಡಿಸಿಕೊಳ್ಳಿ" ಎಂದು ಸೆಕ್ಯುಲರ್ ಗಳಿಗೆ ತಿವಿದಿದ್ದಾರೆ. 

ಇನ್ನೂ ಮುಂದುವರೆದು ಮಾತನಾಡುತ್ತಾ, "ವಂದೇ ಮಾತರಂ, ಜೈ ಹಿಂದ್ ನಮ್ಮ ಜಾತ್ಯಾತೀತ ರಾಷ್ಟ್ರಕ್ಕೆ ಹೊಂದುವುದಿಲ್ಲ. ಯಾರೂ ವಂದೇ ಮಾತರಂ ಎನ್ನಬೇಡಿ. ಇಲ್ಲಿ ಅವೆಲ್ಲಾ ತಪ್ಪು. ವೀರ ಯೋಧರಿಗಾಗಿ ದುಃಖಪಡಬೇಡಿ. ಸಿಆರ್ ಪಿಎಫ್ ಯೋಧರು ತಾನೇ? ಇದರಲ್ಲಿ ದೊಡ್ಡ ಮಾತೇನೂ ಇಲ್ಲ" ಎಂದು ವಿಡಂಬನಾತ್ಮಕವಾಗಿ ಹೇಳಿದ್ದಾರೆ.