Asianet Suvarna News

ರೈಲ್ವೆ ನೌಕರನ ಮಗನಿಗೆ ಒಲಿದ ಉನ್ನತ ಹುದ್ದೆ!

ರೈಲ್ವೆ ನೌಕರನ ಮಗನಿಗೆ ಒಲಿದು ಬಂದ ಮಂತ್ರಿಗಿರಿ| 40 ವರ್ಷಗಳ ಬಳಿಕ ಧಾರವಾಡ ಲೋಕಸಭಾ ಸಂಸದರಿಗೆ ಮಂತ್ರಿ ಸ್ಥಾನ| ಧಾರವಾಡ ಸಂಸದ ಪ್ರಹ್ಲಾದ ಜೋಶಿ ತಂದೆ ರೈಲ್ವೆ ಇಲಾಖೆ ನೌಕರರಾಗಿದ್ದವರು| ಈದ್ಗಾ ಮೈದಾನದ ಹೋರಾಟದಿಂದ ಮುಂಚೂಣಿಗೆ ಬಂದ ಜೋಶಿ

Son Of Railway Staff and Fourth time Dharwad MP Pralhad Joshi a New Face in Modi Cabinet
Author
Bangalore, First Published May 31, 2019, 8:47 AM IST
  • Facebook
  • Twitter
  • Whatsapp

ಶಿವಾನಂದ ಗೊಂಬಿ, ಕನ್ನಡಪ್ರಭ

ಹುಬ್ಬಳ್ಳಿ[ಮೇ.31]: ಸಾಮಾನ್ಯರೈಲ್ವೆ ನೌಕರನ ಮಗನಾಗಿ ಹುಟ್ಟಿ, ಈದ್ಗಾ ಹೋರಾಟದಿಂದ ಮುಂಚೂಣಿಗೆ ಬಂದು ಸತತ ನಾಲ್ಕು ಬಾರಿ ಸಂಸದರಾಗಿ ಸೋಲಿಲ್ಲದ ಸರದಾರ ಎನಿಸಿಕೊಂಡಿವವರು ಪ್ರಹ್ಲಾದ ಜೋಶಿ. ಸರಳ, ಸಜ್ಜನಿಕೆಯ, ಉತ್ತಮ ವಾಗ್ಮಿಯೂ ಆಗಿರುವ ಜೋಶಿ ವಿಜಯಪುರದಲ್ಲಿ ಹುಟ್ಟಿ, ಹುಬ್ಬಳ್ಳಿಯಲ್ಲಿ ಬೆಳೆದು ಇದೇ ಊರನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ರಾಜಕಾರಣಿಯಾಗಿ ಲೋಕಸಭೆ ಪ್ರವೇಶಿಸಿ, ಈಗ ಮಂತ್ರಿಸ್ಥಾನವನ್ನೂ ಗಿಟ್ಟಿಸಿಕೊಂಡಿದ್ದಾರೆ.

ರೈಲ್ವೆ ನೌಕರರಾಗಿದ್ದ ತಂದೆ ವೆಂಕಟೇಶ ಜೋಶಿ ಇಲ್ಲಿನ ಎಂಟಿಎಸ್‌ ಕಾಲನಿಯಲ್ಲಿ ನೆಲೆಸಿದ್ದವರು. ತಂದೆ ವೆಂಕಟೇಶ ಹಾಗೂ ತಾಯಿ ಮಾಲತಿಬಾಯಿ ದಂಪತಿಯ ನಾಲ್ಕು ಮಕ್ಕಳಲ್ಲಿ ಪ್ರಹ್ಲಾದ ಜೋಶಿ ಒಬ್ಬರು. ಪ್ರಹ್ಲಾದ ಜೋಶಿ 1962ರ ನ.27ರಂದು ಜನಿಸಿದವರು. 1992ರಲ್ಲಿ ಬಾಗಲಕೋಟೆಯ ಐಹೊಳೆಯ ಜ್ಯೋತಿ ಅವರನ್ನು ಬಾಳಸಂಗಾತಿಯನ್ನಾಗಿ ಸ್ವೀಕರಿಸಿದ ಜೋಶಿ ಅವರಿಗೆ ಮೂವರು ಮಕ್ಕಳಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ರೈಲ್ವೆ ಶಾಲೆಯಲ್ಲಿ ಪೂರೈಸಿದ ಪ್ರಹ್ಲಾದ ಜೋಶಿ, ಪ್ರೌಢಶಿಕ್ಷಣವನ್ನು ನ್ಯೂ ಇಂಗ್ಲಿಷ್‌ ಸ್ಕೂಲಿನಲ್ಲಿ ಪೂರೈಸಿದವರು. ಕಾಡಸಿದ್ದೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಪಿಯುಸಿ ಹಾಗೂ ಬಿಎ ಪದವಿ ಪೂರೈಸಿದ್ದಾರೆ. ಚಿಕ್ಕಂದಿನಲ್ಲೇ ಜೋಶಿ ಅವರಿಗೆ ಆರ್‌ಎಸ್‌ಎಸ್‌ ನಂಟು ಹೊಂದಿದ್ದರು. ಆರ್‌ಎಸ್‌ಎಸ್‌ನಲ್ಲಿ ಹುಬ್ಬಳ್ಳಿ ನಗರದ ಸಹ ಕಾರ್ಯವಾಹ ಸೇರಿ ವಿವಿಧ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದರು.

ರಾಜಕೀಯ ಎಂಟ್ರಿ: 2004ರ ಲೋಕಸಭೆ ಚುನಾವಣೆ ವೇಳೆ ಆಗಿನ ಬಿಜೆಪಿ ಸಂಸದ ವಿಜಯ್‌ ಸಂಕೇಶ್ವರ ಪಕ್ಷ ತೊರೆದು ‘ಕನ್ನಡನಾಡು’ ಎಂಬ ಪ್ರಾದೇಶಿಕ ಪಕ್ಷ ಹುಟ್ಟುಹಾಕಿದ್ದರು. ಈ ಕಾರಣದಿಂದಾಗಿ ಧಾರವಾಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಪ್ರಹ್ಲಾದ ಜೋಶಿ ಅವರಿಗೆ ಅವಕಾಶ ದೊರೆಯಿತು. ಆ ಬಳಿಕ ನಿರ್ಮಾಣವಾಗಿದ್ದು ಇತಿಹಾಸ. ಜೋಶಿ ಸಲೀಸಾಗಿ ಕಾಂಗ್ರೆಸ್‌ ವಿರುದ್ಧ ಗೆದ್ದರು. ಅಂದಿನಿಂದ ಮತ್ತೆ ಜೋಶಿ ಹಿಂದಿರುಗಿ ನೋಡಲೇ ಇಲ್ಲ. ಸತತವಾಗಿ ನಾಲ್ಕು ಬಾರಿ ನಿರಾಯಾಸವಾಗಿ ಗೆಲುವು ಸಾಧಿಸಿದ ಕೀರ್ತಿ ಜೋಶಿ ಅವರಿಗೆ ಸಲ್ಲುತ್ತದೆ. ಈ ಸಲವಂತೂ ಬರೋಬ್ಬರಿ 2.05 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಪಕ್ಷ ಸಂಕಷ್ಟದಲ್ಲಿದ್ದಾಗ ರಾಜ್ಯಾಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಿದ ಅನುಭವ ಇವರಿಗಿದೆ.

ಇದರೊಂದಿಗೆ ರೈಲ್ವೆ ಇಲಾಖೆಗೆ ಸಂಬಂಧಿಸಿದ ಸ್ಥಾಯಿ ಸಮಿತಿ ಸದಸ್ಯರಾಗಿ, ನಗರಾಭಿವೃದ್ಧಿ ಇಲಾಖೆಯ ಸಲಹಾ ಸಮಿತಿ ಸದಸ್ಯರಾಗಿ, ತಂಬಾಕು ಮಂಡಳಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಕಳೆದ ಬಾರಿ ಕೇಂದ್ರದಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆಗೆ ಸಂಬಂಧಿಸಿದ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ, ಲೋಕಸಭಾ ಸಭಾಧ್ಯಕ್ಷರ ನಿರ್ವಹಣೆ ತಂಡದಲ್ಲಿ ಸದಸ್ಯರಾಗಿ ಹಾಗೂ ಕಲಾಪಗಗಳ ನಿರ್ವಹಣಾ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಈಗ ಕೇಂದ್ರದಲ್ಲಿ ಮಂತ್ರಿ ಸ್ಥಾನ ಅವರ ಮುಡಿಗೇರಿದೆ.

40 ವರ್ಷಗಳ ಬಳಿಕ ಮಂತ್ರಿಗಿರಿ

ಜೋಶಿ ಮೂಲಕ ಧಾರವಾಡ ಲೋಕಸಭಾ ಕ್ಷೇತ್ರಕ್ಕೆ 4 ದಶಕದ ಬಳಿಕ ಮಂತ್ರಿ ಗಿರಿ ಒಲಿದು ಬಂದಂತಾಗಿದೆ. 1971-76ರಲ್ಲಿ ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿ ಸರ್ಕಾರದಲ್ಲಿ ಆಗಿನ ಸದಸ್ಯೆ ಸರೋಜಿನಿ ಮಹಿಷಿ ಮಂತ್ರಿಯಾಗಿದ್ದರು. ಅದಾದ ಬಳಿಕ ಯಾರೊಬ್ಬರಿಗೂ ಮಂತ್ರಿಗಿರಿ ಒಲಿದಿರಲಿಲ್ಲ, ಇದೀಗ ಪ್ರಹ್ಲಾದ ಜೋಶಿ ಮಂತ್ರಿಯಾಗುತ್ತಿದ್ದಾರೆ.

Follow Us:
Download App:
  • android
  • ios