ಮುಂಬೈ (ಸೆ. 11): ಶಂಕಿತ ಗ್ಯಾಂಗ್‌ಸ್ಟರ್‌ ಸೊಹ್ರಾಬುದ್ದೀನ್‌ ಶೇಖ್‌ ಎನ್‌ಕೌಂಟರ್‌ ಪ್ರಕರಣದ ವಿಚಾರಣೆಯಿಂದ ಗುಜರಾತ್‌ನ ಮಾಜಿ ಎಟಿಎಸ್‌ ಮುಖ್ಯಸ್ಥ ಡಿ.ಜಿ. ವಂಜಾರಾ, ಕರ್ನಾಟಕದ ಮಾಜಿ ಐಪಿಎಸ್‌ ಅಧಿಕಾರಿ ಕೆಂಪಯ್ಯ ಅವರ ಅಳಿಯನೂ ಆದ ರಾಜಸ್ಥಾನ ಐಪಿಎಸ್‌ ಅಧಿಕಾರಿ ಎಂ.ಎನ್‌. ದಿನೇಶ್‌ ಹಾಗೂ ಇತರರನ್ನು ಕೈಬಿಟ್ಟಿದ್ದ ವಿಚಾರಣಾಧೀನ ಕೋರ್ಟ್‌ ತೀರ್ಪನ್ನು ಬಾಂಬೆ ಹೈಕೋರ್ಟ್‌ ಎತ್ತಿಹಿಡಿದಿದೆ. ಪ್ರಕರಣದ ಮೇಲ್ಮನವಿಯು ಅನರ್ಹ ಎಂದು ಕೋರ್ಟ್‌ ಅಭಿಪ್ರಾಯ ಪಟ್ಟಿದೆ.

ಸೊಹ್ರಾಬುದ್ದೀನ್‌ ಮತ್ತು ಆತನ ಪತ್ನಿ ಕೌಸರ್‌ ಬೀ, ಸಹಾಯಕ ತುಳಸಿರಾಮ್‌ ಪ್ರಜಾಪತಿ ಎನ್‌ಕೌಂಟರ್‌ಗೆ ಸಂಬಂಧಿಸಿದ ಪ್ರಕರಣ ಇದು.

ಪ್ರಕರಣದ ಸಹ ಆರೋಪಿಗಳಾದ ಗುಜರಾತ್‌ ಪೊಲೀಸ್‌ನ ಅಧಿಕಾರಿ ವಿಪುಲ್‌ ಅಗರ್‌ವಾಲ್‌ ಅವರನ್ನೂ ಪ್ರಕರಣದಿಂದ ಕೈಬಿಡಲು ನ್ಯಾ.ಎ.ಎಂ. ಬದರ್‌ ನ್ಯಾಯಪೀಠ ಸಮ್ಮತಿಸಿದೆ. ಅಗರ್ವಾಲ್‌ರ ಅರ್ಜಿ ಈ ಹಿಂದೆ ವಿಚಾರಣಾಧೀನ ಕೋರ್ಟ್‌ನಲ್ಲಿ ತಿರಸ್ಕರಿಸಲ್ಪಟ್ಟಿತ್ತು, ಹೀಗಾಗಿ ಅವರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ವಂಜಾರಾ ಮತ್ತಿತರರನ್ನು ಕೈಬಿಟ್ಟಿದ್ದನ್ನು ಪ್ರಶ್ನಿಸಿ ಸೊಹ್ರಾಬುದ್ದೀನ್‌ರ ಸಹೋದರ ರುಬಾವುದ್ದೀನ್‌ ಮೇಲ್ಮನವಿ ಸಲ್ಲಿಸಿದ್ದರು. ಗುಜರಾತ್‌ ಪೊಲೀಸ್‌ ಇಲಾಖೆಯ ಡಿ.ಜಿ. ವಂಜಾರಾ, ರಾಜ್‌ಕುಮಾರ್‌ ಪಾಂಡ್ಯನ್‌, ಎನ್‌.ಕೆ. ಅಮೀನ್‌ ಮತ್ತು ರಾಜಸ್ಥಾನ ಪೊಲೀಸ್‌ನ ದಿನೇಶ್‌ ಎಂ.ಎನ್‌., ದಲ್ಪತ್‌ ಸಿಂಗ್‌ ರಾಥೋಡ್‌ರನ್ನು ಪ್ರಕರಣದಿಂದ ಕೈಬಿಟ್ಟಿರುವುದನ್ನು ಕೋರ್ಟ್‌ ಎತ್ತಿಹಿಡಿದಿದೆ.