ತುಮಕೂರು(ನ. 05): ಬಿಜೆಪಿ ಪರಿವರ್ತನಾ ರ್ಯಾಲಿಗೆ ಆರಂಭದಲ್ಲೇ ಅಪಸ್ವರ ಕೇಳಿ ಬಂದಿದ್ದು, ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಸೊಗಡು ಶಿವಣ್ಣ ಅವರು ಪಕ್ಷದ ಮುಖಂಡರ ವಿರುದ್ಧ ಹರಿಹಾಯ್ದಿದ್ದಾರೆ. ಇಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ತುಮಕೂರಿನಲ್ಲಿ ಬಿಜೆಪಿ ಪರಿವರ್ತನಾ ರ್ಯಾಲಿಗೆ ಹಣಕೊಟ್ಟು ಜನರನ್ನು ಕರೆದುಕೊಂಡು ಬರಲಾಗಿದೆ ಎಂದು ಆರೋಪಿಸಿದ್ದಾರೆ.

"ಯಡಿಯೂರಪ್ಪ ನೇತೃತ್ವದ ಬಿಜೆಪಿ ಪರಿವರ್ತನಾ ರ್ಯಾಲಿ ಸಂಪೂಣ ವಿಫಲವಾಗಿದೆ. ಯಾತ್ರೆಯಲ್ಲಿ ಪಾಲ್ಗೊಂಡವರು ಬಿಜೆಪಿ ಕಾರ್ಯಕರ್ತರಲ್ಲ, ಕೆಲಸಗಾರರು. ಐನ್ನೂರು, ಸಾವಿರ ರೂಪಾಯಿ ಹಣ ಕೊಟ್ಟು ಜನರನ್ನು ಕರೆದುಕೊಂಡು ಬರಲಾಗಿದೆ," ಎಂದು ಸೊಗಡು ಶಿವಣ್ಣ ಟೀಕಿಸಿದ್ದಾರೆ.

ತುಮಕೂರು ಜಿಲ್ಲೆಯಲ್ಲಿ ಬಿಜೆಪಿ ಅಪ್ಪ ಮಕ್ಕಳ ಪಕ್ಷವಾಗಿ ಮಾರ್ಪಟ್ಟಿದೆ. ಇಲ್ಲಿ ಅಪ್ಪ-ಮಕ್ಕಳ ಸೇಡು ಅತಿಯಾಗಿದೆ. ಮೂಲ ಕಾರ್ಯಕರ್ತರಿಗೆ ಬೆಲೆ ನೀಡುತ್ತಿಲ್ಲ. ಕೆಜೆಪಿ ಮತ್ತು ಬಿಜೆಪಿ ಎಂದು ವಿಘಟನೆ ಮಾಡಲಾಗುತ್ತಿದೆ. ಯಡಿಯೂರಪ್ಪಗೆ ಬಿಜೆಪಿ ಕಂಡರೆ ದ್ವೇಷ ಮತ್ತು ಕೆಜೆಪಿ ಕಂಡರೆ ಪ್ರೀತಿ ಎಂಬಂತಾಗಿದೆ. ತುಮಕೂರಿನಲ್ಲಿ ನಡೆಯುತ್ತಿರುವುದು ಪರಿವರ್ತನಾ ಯಾತ್ರೆಯಲ್ಲ, ಕೆಜೆಪಿ ಯಾತ್ರೆ ಎಂದು ಯಡಿಯೂರಪ್ಪ ವಿರುದ್ಧ ಶಿವಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.