ನವದೆಹಲಿ: ಭಾರೀ ಪ್ರವಾಹ ಇಳಿಮುಖವಾಗುತ್ತಿದ್ದಂತೆ ನಿರಾಳವಾಗಿದ್ದೇವೆ ಎಂದುಕೊಂಡ ಕೇರಳದ ನೆರೆ ಸಂತ್ರಸ್ತರಿಗೆ ಇದೀಗ ಹೊಸ ಭೀತಿ ಶುರುವಾಗಿದೆ. ಭಾರೀ ಪ್ರವಾಹದ ನೀರಿನಲ್ಲಿ ತೇಲಿಕೊಂಡು ಬಂದಿರುವ ಹಾವುಗಳು, ಇತರ ವಿಷಜಂತುಗಳು ಹಾಗೂ ಕ್ರಿಮಿಕೀಟಗಳು ಸಂತ್ರಸ್ತರು ಬಿಟ್ಟು ಹೋಗಿದ್ದ ಮನೆಗಳಲ್ಲಿ ಸೇರಿಕೊಂಡಿವೆ. 

ಹಾಗಾಗಿ, ಪರಿಹಾರ ಕೇಂದ್ರಗಳಿಂದ ಇದೀಗ ಮನೆಗಳತ್ತ ಮುಖ ಮಾಡಿರುವ ಸಂತ್ರಸ್ತರಿಗೆ, ಮನೆಗಳಲ್ಲಿ ಅಡಗಿಕೊಂಡಿರಬಹುದಾದ ಹಾವುಗಳ ಬಗ್ಗೆ ಎಚ್ಚರದಿಂದ ಇರುವಂತೆ ಸೂಚಿಸಲಾಗಿದೆ.

ಮನೆಗಳಲ್ಲಿರುವ ಕಪಾಟುಗಳು, ಕಾರ್ಪೆಟ್‌ಗಳ ಕೆಳಗೆ, ಬಟ್ಟೆಬರೆಗಳಲ್ಲಿ, ವಾಷಿಂಗ್‌ ಮಿಷನ್‌, ರೆಫ್ರಿಜರೇಟರ್‌ ಸೇರಿದಂತೆ ಇತರ ವಸ್ತುಗಳಲ್ಲಿ ಹಾವುಗಳ ಸೇರಿಕೊಂಡಿರಬಹುದಾದ ಸಾಧ್ಯತೆಯಿದೆ. ಈ ಬಗ್ಗೆ ಹೆಚ್ಚು ಕ್ರಿಯಾಶೀಲರಾಗಿರುವಂತೆ ರಾಜ್ಯ ಸರ್ಕಾರದ ವಕ್ತಾರರು ತಿಳಿಸಿದ್ದಾರೆ.

ಅಲ್ಲದೆ, ಹಾವು ಕಡಿತಕ್ಕೊಳಗಾದ ಸಂತ್ರಸ್ತರಿಗೆ ತಕ್ಷಣವೇ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಎಲ್ಲ ಆಸ್ಪತ್ರೆಗಳಿಗೂ ಹಾವಿನ ವಿಷ ತೆಗೆಯಲು ಅಗತ್ಯವಿರುವ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ.