ಪ್ರತೀ ವರ್ಷ ನಡೆಯುವ ಇಂಟೆಲ್ ಇಂಟರ್ನ್ಯಾಷನಲ್ ಸೈನ್ಸ್ ಅಂಡ್ ಎಂಜಿನಿಯರಿಂಗ್ ಫೇರ್ ಸ್ಪರ್ಧೆಯಲ್ಲಿ ಈಕೆ ಪಾಲ್ಗೊಳ್ಳುತ್ತಾಳೆ. ಪರಿಸರ ವಿಜ್ಞಾನ ವಿಭಾಗದಲ್ಲಿ ಸ್ಪರ್ಧಿಸುವ ಈಕೆ ಎರಡನೇ ಸ್ಥಾನ ಪಡೆಯುತ್ತಾಳೆ. ಅಷ್ಟೇ ಅಲ್ಲ, ಮೂರು ವಿಶೇಷ ಪ್ರಶಸ್ತಿಗಳೂ ಈಕೆಗೆ ಸಿಗುತ್ತವೆ.
ಬೆಂಗಳೂರು: ಮಿಲ್ಕಿ ವೇ ಗೆಲಾಕ್ಸಿಯಲ್ಲಿರುವ ಒಂದು ಪುಟ್ಟ ಗ್ರಹಕ್ಕೆ ಸಾಹಿತಿ ಪಿಂಗಳಿ ಎಂದಿಡಲಾಗಿದೆ. ವಿಶೇಷವೆಂದರೆ, ಈ ಸಾಹಿತಿ ಪಿಂಗಳಿ ಎಂಬುದು ಬೆಂಗಳೂರಿನ 16 ವರ್ಷದ ಹುಡುಗಿಯೊಬ್ಬಳ ಹೆಸರು. ಈ ಗ್ರಹಕ್ಕೂ ಬೆಂಗಳೂರಿನ ಈ ಹುಡುಗಿಯೂ ಏನು ಸಂಬಂಧ? ದೂರದರ್ಶಕದಲ್ಲಿ ಈ ಗ್ರಹವನ್ನು ಪತ್ತೆ ಮಾಡಿದ್ದು ಈಕೆಯೋ? ಎಂಬ ಪ್ರಶ್ನೆಗಳು ಮತ್ತು ಅನುಮಾನಗಳು ಏಳಬಹುದು. ಆದರೆ, ಗ್ರಹಕ್ಕೆ ಈ ಹುಡುಗಿಯ ಹೆಸರಿಡಲು ಕಾರಣ ಈ ಹುಡುಗಿಯ ಸಾಧನೆ. ಬೆಂಗಳೂರಷ್ಟೇ ಅಲ್ಲ ಇಡೀ ದೇಶವೇ ಹೆಮ್ಮೆ ಪಡಬಹುದಾದ ಸಾಧನೆ ಈ ಹುಡುಗಿಯದ್ದು.
ಸಾಹಿತಿ ಪಿಂಗಳಿ ಸಾಧನೆ ಏನು?
ಬೆಳತ್ತೂರು ಕೆರೆ ಸೇರಿದಂತೆ ಬೆಂಗಳೂರಿನ ಕೆರೆಗಳು ಎಷ್ಟು ಕಲುಷಿತಗೊಂಡು ಗಬ್ಬೆದ್ದು ನಾರುತ್ತಿರುವುದು ನಮಗೆಲ್ಲರಿಗೂ ಗೊತ್ತಿದೆ. ಪರಿಸರದ ಬಗ್ಗೆ ಅಪರಿಮಿತ ಕಾಳಜಿ ಹೊಂದಿರುವ ಸಾಹಿತಿ ಪಿಂಗಳಿ ತನ್ನದೇ ರೀತಿಯಲ್ಲಿ ಈ ಸಮಸ್ಯೆ ನಿವಾರಣೆಗೆ ಒಂದು ಪುಟ್ಟ ಹೆಜ್ಜೆಯನ್ನಿಟ್ಟಿದ್ದಾಳೆ. ನೀರು ಎಷ್ಟು ಕಲುಷಿತಗೊಂಡಿದೆ ಎಂದು ಪರೀಕ್ಷಿಸುವಂಥ ಆ್ಯಪನ್ನು ಈಕೆ ಅಭಿವೃದ್ಧಿಪಡಿಸಿದ್ದಾಳೆ. ಇದು ಮಾಮೂಲಿಯ ಮಾಹಿತಿ ನೀಡುವ ಅಪ್ಲಿಕೇಶನ್ ಅಲ್ಲ. ನೀರಿನ ಗುಣಮಟ್ಟವನ್ನು ಬಹುತೇಕ ಕರಾರುವಾಕ್ಕಾಗಿ ಇದು ಪರೀಕ್ಷಿಸಿ ಫಲಿತಾಂಶ ನೀಡುತ್ತದೆ.
ಎಂಟು ವರ್ಷದ ಹಿಂದೆ ಅಮೆರಿಕದಿಂದ ಬೆಂಗಳೂರಿಗೆ ಬಂದ ಈಕೆ ನಮ್ಮ ನಗರದ ಬಗ್ಗೆ ಅದಮ್ಯ ಪ್ರೀತಿ ಇಟ್ಟುಕೊಂಡಿದ್ದಾಳೆ. ಕೆರೆಗಳನ್ನು ಉಳಿಸಿ ನಗರವನ್ನು ಕಾಪಾಡಬೇಕೆನ್ನವು ಈಕೆಯ ಆಸೆಗೆ ನೀರೆರೆದವರು ಈಕೆ ತಂದೆ ಗೋಪಾಲ್ ಪಿಂಗಳಿ. ಐಬಿಎಂ ಗ್ಲೋಬಲ್ ಟೆಕ್ನಾಲಜಿ ಸರ್ವಿಸಸ್ ಲ್ಯಾಬ್ಸ್ ಸಂಸ್ಥೆಯ ವೈಸ್-ಪ್ರೆಸಿಡೆಂಟ್ ಆಗಿರುವ ಈಕೆ ತಂದೆ ಕೂಡ ಮಗಳ ಸಾಧನೆಯನ್ನು ಮೆಚ್ಚಿಕೊಂಡಿದ್ದಾರೆ.
ಐಎಸ್'ಇಎಫ್ ಸ್ಪರ್ಧೆ:
ಪ್ರತೀ ವರ್ಷ ನಡೆಯುವ ಇಂಟೆಲ್ ಇಂಟರ್ನ್ಯಾಷನಲ್ ಸೈನ್ಸ್ ಅಂಡ್ ಎಂಜಿನಿಯರಿಂಗ್ ಫೇರ್ ಸ್ಪರ್ಧೆಯಲ್ಲಿ ಈಕೆ ಪಾಲ್ಗೊಳ್ಳುತ್ತಾಳೆ. ಪರಿಸರ ವಿಜ್ಞಾನ ವಿಭಾಗದಲ್ಲಿ ಸ್ಪರ್ಧಿಸುವ ಈಕೆ ಎರಡನೇ ಸ್ಥಾನ ಪಡೆಯುತ್ತಾಳೆ. ಅಷ್ಟೇ ಅಲ್ಲ, ಮೂರು ವಿಶೇಷ ಪ್ರಶಸ್ತಿಗಳೂ ಈಕೆಗೆ ಸಿಗುತ್ತವೆ. ಕೆರೆ ಪುನರುಜ್ಜೀವನಕ್ಕೆ ಸಹಾಯಕವಾಗುವಂಥ ಆ್ಯಪ್'ನ್ನು ಡೆವಲಪ್ ಮಾಡಿದ್ದಕ್ಕೆ ಆಕೆಗೆ ಈ ಗೌರವ ಸಿಗುತ್ತದೆ. ಸಾಹಿತಿ ಪಿಂಗಳಿಯಂತೆ ವಿಶ್ವಾದ್ಯಂತ 2 ಸಾವಿರ ವ್ಯಕ್ತಿಗಳನ್ನು ಇಂಥ ಗೌರವಕ್ಕೆ ಆಯ್ಕೆ ಮಾಡಲಾಯಿತು.
ಪ್ರತಿಷ್ಠಿತ ಮಸಾಚುಸೆಟ್ಸ್ ಇನ್ಸ್'ಟಿಟ್ಯೂಟ್ ಆಫ್ ಟೆಕ್ನಾಲಜಿಯ ಲಿಂಕನ್ ಲ್ಯಾಬೊರೇಟರಿ ಸಂಸ್ಥೆಯು ಸಾಹಿತಿ ಪಿಂಗಳಿಯವರ ಹೆಸರನ್ನು ಹಲವು ಜ್ಯೋತಿರ್ವಷದಷ್ಟು ದೂರದಲ್ಲಿರುವ ಪುಟ್ಟ ಗ್ರಹವೊಂದಕ್ಕೆ ಇಡಲು ನಿರ್ಧರಿಸಿದೆ. ಇಂಥ ಸಣ್ಣ ಗ್ರಹಗಳಿಗೆ ನಾಮಕರಣ ಮಾಡುವ ಹಕ್ಕು ಎಂಐಟಿ ಸಂಸ್ಥೆ ಇದೆ. ವಿಶ್ವಾದ್ಯಂತ ಸುಮಾರು 15 ಸಾವಿರ ಜನರಿಗೆ ಇಂಥ ಸೌಭಾಗ್ಯ ಪ್ರಾಪ್ತವಾಗಿದೆ. ಅವರಲ್ಲಿ ನಮ್ಮ ಬೆಂಗಳೂರಿನ ಹುಡುಗಿ ಸಾಹಿತಿಯೂ ಒಬ್ಬಳು ಎಂಬುದು ನಮಗೆ ಹೆಮ್ಮೆಯ ವಿಷಯ.
