ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ರಾಜಕಾರಣಿ ಎಸ್‌.ಎಂ. ಕೃಷ್ಣ ಅವರು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ ಬೆನ್ನಲ್ಲೇ ಅವರ ಮೊಮ್ಮಗ ಡಾ. ನಿರಂತರ ಗಣೇಶ್‌ ಬುಧವಾರ ಬೆಳಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಅಧಿಕೃತವಾಗಿ ಕಾಂಗ್ರೆಸ್‌ ಸೇರ್ಪಡೆಯಾಗಲಿದ್ದಾರೆ.

ಬೆಂಗಳೂರು(ಎ.19): ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ರಾಜಕಾರಣಿ ಎಸ್‌.ಎಂ. ಕೃಷ್ಣ ಅವರು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ ಬೆನ್ನಲ್ಲೇ ಅವರ ಮೊಮ್ಮಗ ಡಾ. ನಿರಂತರ ಗಣೇಶ್‌ ಬುಧವಾರ ಬೆಳಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಅಧಿಕೃತವಾಗಿ ಕಾಂಗ್ರೆಸ್‌ ಸೇರ್ಪಡೆಯಾಗಲಿದ್ದಾರೆ.

ಎಸ್‌.ಎಂ. ಕೃಷ್ಣ ಅವರ ಸಹೋದರಿ ಸುನೀತಾ ಅವರ ಪುತ್ರಿಯ ಮಗ ನಿರಂತರ ಗಣೇಶ್‌ ಮೂಲತಃ ವೈದ್ಯರು. ಎಂ.ಎಸ್‌. ರಾಮಯ್ಯ ಆಸ್ಪತ್ರೆಯಲ್ಲಿ ಆರ್ಥೊ ಸರ್ಜನ್‌ ಆಗಿ ಸೇವೆ ಸಲ್ಲಿಸುತ್ತಿದ್ದ ನಿರಂತರ ಗಣೇಶ್‌ ಕಳೆದ ಎರಡು ವರ್ಷಗಳಿಂದ ಕಡೂರು ಕ್ಷೇತ್ರದ ರಾಜಕೀಯ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರೊಂದಿಗೆ ಉತ್ತಮ ಸ್ನೇಹ ಸಂಬಂಧ ಹೊಂದಿರುವ ನಿರಂತರ ಗಣೇಶ್‌ ಅವರನ್ನು ಪಕ್ಷಕ್ಕೆ ಕರೆತಂದು ಎಸ್‌.ಎಂ. ಕೃಷ್ಣಗೆ ಟಾಂಗ್‌ ನೀಡಲು ಕಾಂಗ್ರೆಸ್‌ ವೇದಿಕೆ ಸಜ್ಜುಗೊಳಿಸಿದೆ. ಬುಧವಾರ ಬೆಳಗ್ಗೆ 11.30ಗೆ ಬೆಂಗಳೂರಿನ ಕೆಪಿಸಿಸಿ ಕೇಂದ್ರ ಕಚೇರಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ 35 ಮಂದಿ ವೈದ್ಯರೊಂದಿಗೆ ಡಾ. ನಿರಂತರ ಗಣೇಶ್‌ ಪಕ್ಷದ ಬಾವುಟ ಹಿಡಿಯಲಿದ್ದಾರೆ. ಕಡೂರು ಕ್ಷೇತ್ರದಾದ್ಯಂತ ಉಚಿತ ಚಿಕಿತ್ಸಾ ಶಿಬಿರ, ಅಗತ್ಯವಿರುವವರಿಗೆ ಎಂ.ಎಸ್‌. ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವುದು, ಉಚಿತ ಕುಡಿಯುವ ನೀರು ಪೂರೈಕೆ, ಮಕ್ಕಳಿಗೆ ಉಚಿತ ಪಠ್ಯ ಪುಸ್ತಕ ವಿತರಣೆ, ಕಾಂಗ್ರೆಸ್‌ ಕಾರ್ಯಕ್ರಮಗಳಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆ ಮೂಲಕ ಕಳೆದ ಎರಡು ವರ್ಷಗಳಿಂದ ಕ್ಷೇತ್ರದ ಜನರಿಗೆ ಹತ್ತಿರುವಾಗುವ ಪ್ರಯತ್ನದಲ್ಲಿದ್ದಾರೆ. ಅಲ್ಲದೆ 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಕಡೂರು ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯೂ ಆಗಿರುವುದಾಗಿ ನಿರಂತರ ಗಣೇಶ್‌ ಹೇಳಿಕೊಂಡಿದ್ದಾರೆ.

ನಮ್ಮ ಅಜ್ಜ (ಎಸ್.ಎಂ.ಕೃಷ್ಣ) ಬಿಜೆಪಿಯಿಂ ದಲೇ ರಾಜಕಾರಣದಲ್ಲಿ ತೊಡಗಲು ಸಲಹೆ ನೀಡಿದ್ದರು. ಆದರೆ, ಸಂಬಂಧಗಳು ಬೇರೆ, ವೈಯಕ್ತಿಕ ನಿರ್ಧಾರಗಳು ಬೇರೆ. ಮೊದಲಿನಿಂದಲೂ ಕಾಂಗ್ರೆಸ್ ಬಗ್ಗೆ ನನಗೆ ಒಲವು ಹೆಚ್ಚು. ಹೀಗಾಗಿ ಕಾಂಗ್ರೆಸ್ ಸಿದ್ಧಾಂತ ಹಾಗೂ ಸಿದ್ದರಾಮಯ್ಯ ಅವರ ಜನಪರ ಕಾರ್ಯಕ್ರಮ ನೆಚ್ಚಿ ಕಾಂಗ್ರೆಸ್ನಲ್ಲೇ ಮುಂದುವರಿಯಲು ನಿರ್ಧರಿಸಿದ್ದೇನೆ. ಎರಡು ವರ್ಷದಿಂದ ಸತತವಾಗಿ ಕಡೂರು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು ಪಕ್ಷ ಹಾಗೂ ಜನ ಒಪ್ಪಿದರೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧ.

-ನಿರಂತರ ಗಣೇಶ್, ಎಸ್.ಎಂ. ಕೃಷ್ಣ ಮೊಮ್ಮಗ