ಪ್ರಕರಣದ ತನಿಖೆಯನ್ನು ನಡೆಸಿ ಮೂರು ತಿಂಗಳೊಳಗೆ ವರದಿ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಮಾರ್ಚ್ 28ರಂದು ಎಸ್'ಐಟಿಗೆ ಆದೇಶ ನೀಡಿತ್ತು. ಐಜಿಪಿ ಚರಣ್ ರೆಡ್ಡಿ ಮತ್ತು ಎಸ್'ಪಿ ಮಂಜುನಾಥ್ ಅಣ್ಣಿಗೇರಿ ನೇತೃತ್ವದಲ್ಲಿ ಎಸ್'ಐಟಿ ತಂಡವು ತನಿಖೆ ನಡೆಸುತ್ತಿದೆ.

ನವದೆಹಲಿ(ಜೂನ್ 22): ಜಂತಕಲ್ ಮೈನಿಂಗ್ ಅಕ್ರಮ ನವೀಕರಣ ಪ್ರಕರಣದಲ್ಲಿ ವಿಶೇಷ ತನಿಖಾ ತಂಡವು ಸುಪ್ರೀಂಕೋರ್ಟ್'ಗೆ ಇಂದು ಗುರುವಾರ ಮಧ್ಯಂತರ ವರದಿ ಸಲ್ಲಿಸಿದೆ. ಜಂತಕಲ್ ಮೈನಿಂಗ್ ಸಂಸ್ಥೆಯ ಪರವಾನಗಿಯ ನವೀಕರಣಕ್ಕೆ ಅಧಿಕಾರಿ ಗಂಗಾರಾಮ್ ಬಡೇರಿಯಾ ಲಂಚ ಸ್ವೀಕರಿಸಿರುವುದು ಸತ್ಯ ಎಂದು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೇ, ತನಿಖೆಯನ್ನು ಪೂರ್ಣಗೊಳಿಸಲು ಇನ್ನಷ್ಟು ಕಾಲಾವಕಾಶ ಬೇಕೆಂದು ಎಸ್'ಐಟಿ ಈ ವೇಳೆ ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿಯನ್ನೂ ಮಾಡಿಕೊಂಡಿದೆ.

ಪ್ರಕರಣದ ತನಿಖೆಯನ್ನು ನಡೆಸಿ ಮೂರು ತಿಂಗಳೊಳಗೆ ವರದಿ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಮಾರ್ಚ್ 28ರಂದು ಎಸ್'ಐಟಿಗೆ ಆದೇಶ ನೀಡಿತ್ತು. ಐಜಿಪಿ ಚರಣ್ ರೆಡ್ಡಿ ಮತ್ತು ಎಸ್'ಪಿ ಮಂಜುನಾಥ್ ಅಣ್ಣಿಗೇರಿ ನೇತೃತ್ವದಲ್ಲಿ ಎಸ್'ಐಟಿ ತಂಡವು ತನಿಖೆ ನಡೆಸುತ್ತಿದೆ. ಮಾಜಿ ಸಿಎಂ ಕುಮಾರಸ್ವಾಮಿ, ಐಎಎಸ್ ಅಧಿಕಾರಿಗಳಾದ ಗಂಗಾರಾಮ್ ಬಡೇರಿಯಾ ಮತ್ತು ಮಹೇಂದ್ರ ಜೈನ್, ನಿವೃತ್ತ ಐಎಎಸ್ ಅಧಿಕಾರಿಗಳಾದ ಪೆರುಮಾಳ್, ವಿ.ಉಮೇಶ್, ಶಂಕರಲಿಂಗಯ್ಯ, ಶ್ರೀನಿವಾಸ್ ಸೇರಿದಂತೆ ಪ್ರಕರಣದ ಹಲವು ಆರೋಪಿಗಳನ್ನು ಎಸ್'ಐಟಿ ತಂಡವು ವಿಚಾರಣೆ ನಡೆಸಿದೆ. ಈ ವಿಚಾರಣೆಯಲ್ಲಿ ಸಿಕ್ಕ ಅಂಶಗಳು ಹಾಗೂ ಸಾಕ್ಷಿಗಳ ಹೇಳಿಕೆಗಳನ್ನು ಎಸ್'ಐಟಿ ತಂಡ ತನ್ನ ಮಧ್ಯಂತರ ವರದಿಯಲ್ಲಿ ಉಲ್ಲೇಖಿಸಿದೆ.

ಮೂರು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಲು ಸಾಧ್ಯವಿಲ್ಲ. ಹೀಗಾಗಿ, ತನಗೆ ಹೆಚ್ಚಿನ ಕಾಲಾವಕಾಶ ಬೇಕು ಎಂದು ತನಿಖಾ ತಂಡವು ಸುಪ್ರೀಂಕೋರ್ಟ್'ಗೆ ಮನವಿ ಮಾಡಿಕೊಂಡಿದೆ.

ಎಚ್'ಡಿಕೆಗೆ ಹೇಗೆ ಲಿಂಕ್?
ಜಂತಕಲ್ ಮೈನಿಂಗ್ ಕಂಪನಿಯ ಗಣಿ ಲೈಸೆನ್ಸ್ ನವೀಕರಣದ ಆರೋಪಿತ ಅಕ್ರಮ ನಡೆದದ್ದು ಎಚ್'ಡಿಕೆ ಸಿಎಂ ಆಗಿದ್ದ ಅವಧಿಯಲ್ಲೇ. ತಾನು ಸಿಎಂ ಕಚೇರಿ ಸೂಚನೆ ಮೇರೆಗೆ ನವೀಕರಣ ಮಾಡಿದೆ ಎಂದು ಆಗಿನ ಐಎಎಸ್ ಅಧಿಕಾರಿ ಗಂಗಾರಾಮ್ ಬಡೇರಿಯಾ ಹೇಳಿದ್ದಾರೆ.