ರಾಷ್ಟ್ರದಾದ್ಯಂತ ಸುದ್ದಿಯಾಗಿದ್ದ ಪತ್ರಕರ್ತೆ, ಚಿಂತಕಿ ಗೌರಿ ಲಂಕೇಶ್ ಅವರ ಹತ್ಯೆಗೆ ಈ ಪ್ರಕರಣದ ಆರೋಪಿ ಜಯಪುರ ಜಿಲ್ಲೆ ಸಿಂದಗಿಯ ಪರಶುರಾಮ್ ವಾಗ್ಮೋರೆ ಪಡೆದಿದ್ದು ಕೇವಲ 13 ಸಾವಿರ ರು. ಮಾತ್ರ!
ಬೆಂಗಳೂರು : ರಾಷ್ಟ್ರದಾದ್ಯಂತ ಸುದ್ದಿಯಾಗಿದ್ದ ಪತ್ರಕರ್ತೆ, ಚಿಂತಕಿ ಗೌರಿ ಲಂಕೇಶ್ ಅವರ ಹತ್ಯೆಗೆ ಈ ಪ್ರಕರಣದ ಆರೋಪಿ ಜಯಪುರ ಜಿಲ್ಲೆ ಸಿಂದಗಿಯ ಪರಶುರಾಮ್ ವಾಗ್ಮೋರೆ ಪಡೆದಿದ್ದು ಕೇವಲ 13 ಸಾವಿರ ರು. ಮಾತ್ರ! ಗೌರಿ ಲಂಕೇಶ್ ಅವರಿಗೆ ಗುಂಡಿಕ್ಕಿದ ಆರೋಪದಡಿ ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ಬಂಧನಕ್ಕೆ ಒಳಗಾಗಿರುವ ಪರಶುರಾಮ್ ವಾಗ್ಮೋರೆ ಹೀಗೆಂದು ತನಿಖಾಧಿಕಾರಿಗಳ ಬಳಿ ಬಾಯ್ಬಿಟ್ಟಿದ್ದಾನೆ.
ಹಣಕ್ಕಾಗಿ ನಾನು ಗೌರಿ ಅವರ ಹತ್ಯೆಗೆ ಒಪ್ಪಿರಲಿಲ್ಲ. ಗೌರಿ ಲಂಕೇಶ್ ಅವರ ಹಿಂದು ವಿರೋಧಿ ಧೋರಣೆ ಸಹಿಸಲಾರದೆ ಹತ್ಯೆಗೆ ಒಪ್ಪಿಕೊಂಡಿದ್ದೆ ಎಂದು ಆರೋಪಿ ಪರಶುರಾಮ್ ಹೇಳಿಕೆ ನೀಡಿದ್ದಾನೆ ಎಂದು ವಿಶೇಷ ತನಿಖಾ ತಂಡದ ವಿಶ್ವಸನೀಯ ಮೂಲಗಳು ಕನ್ನಡಪ್ರಭಕ್ಕೆ ತಿಳಿಸಿವೆ.
ಸಿಂದಗಿಯಲ್ಲಿ ಭೇಟಿಯಾಗಿದ್ದ ವ್ಯಕ್ತಿ ಗೌರಿ ಲಂಕೇಶ್ ಅವರ ಹತ್ಯೆಗೆ ಒಪ್ಪುವುದಾದರೆ ನಿನ್ನ ಬೆಂಬಲಕ್ಕೆ ನಿಲ್ಲುತ್ತೇನೆ ಎಂದು ಹೇಳಿದ್ದ. ಈ ವೇಳೆ ಯಾವುದೇ ಹಣಕಾಸಿನ ವಿಚಾರವಾಗಿ ಚರ್ಚೆ ನಡೆಸಿರಲಿಲ್ಲ. ಗೌರಿ ಅವರ ಕೊಲೆಗೆ ಬೇಕಾದ ಎಲ್ಲ ತಯಾರಿ ಆದ ಬಳಿಕ ಬೆಂಗಳೂರಿನಲ್ಲಿರುವ ಗೌರಿ ಅವರ ಮನೆಯನ್ನು ನೋಡಲು ಶಿಕಾರಿಪುರದ ಕಪ್ಪನಹಳ್ಳಿಯ ಸುಜೀತ್ ಕುಮಾರ್ ಅಲಿಯಾಸ್ ಪ್ರವೀಣ್ ಜತೆ ನಗರಕ್ಕೆ ಬಂದಿದ್ದೆ.
ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ಲೇಔಟ್‌ನಲ್ಲಿರುವ ಗೌರಿ ಅವರ ಮನೆ ಹಾಗೂ ಅಲ್ಲಿನ ಸ್ಥಳ ನೋಡಿದ ಬಳಿಕ 2017ರ ಜುಲೈ 1 ರಂದು ನನ್ನ ಪ್ರಯಾಣ, ಊಟ ಹಾಗೂ ಇನ್ನಿತರ ಖರ್ಚಿಗಾಗಿ ಮೊದಲ ಹಂತದಲ್ಲಿ ಮೂರು ಸಾವಿರ ರು. ಹಣ ನೀಡಿದ್ದರು. ಎರಡು ತಿಂಗಳ ಬಳಿಕ ಅಂದರೆ 2017 ರ ಸೆ. 5ರಂದು ಗೌರಿ ಲಂಕೇಶ್ ಅವರನ್ನು ಮನೆ ಬಳಿ ಹತ್ಯೆ ಮಾಡಲಾಯಿತು. ಕೃತ್ಯ ಎಸಗಿದ ಬಳಿಕ ತಂಡದ ಓರ್ವ ಸದಸ್ಯ ನನಗೆ ಹತ್ತು ಸಾವಿರ ರು. ಹಣ ತಲುಪಿಸಿದ್ದ.
ಆದರೆ ಹಣ ನೀಡಿದ ವ್ಯಕ್ತಿಯ ಪರಿಚಯ ನನಗೆ ಇಲ್ಲ. ಈ ಹಣ ತೆಗೆದುಕೊಂಡು ಹೋಗು, ನಿನ್ನ ಖರ್ಚಿಗೆ ಇಟ್ಟುಕೋ ಎಂದು ಹೇಳಿದ. ಬಳಿಕ, ನಿನ್ನ ಕುಟುಂಬಕ್ಕೆ ಸಿಗಬೇಕಿರುವುದನ್ನು ತಲುಪಿಸುತ್ತೇವೆ ಎಂದು ಹೇಳಿದ್ದ. ನಾನು ಪ್ರಯಾಣ, ಊಟಕ್ಕಾಗಿ ಈ ಹಣವನ್ನು ಬಳಸಿಕೊಂಡಿದ್ದೆ. ಆದಾದ ಬಳಿಕ ನನ್ನನ್ನು ಯಾರೊಬ್ಬರೂ ಸಂಪರ್ಕ ಮಾಡಲಿಲ್ಲ. ಯಾವುದೇ ಹಣದ ಆಮಿಷಕ್ಕೆ ಒಳಗಾಗಿ ಕೊಲೆ ಮಾಡಲು ನಾನು ಒಪ್ಪಲಿಲ್ಲ. ಓರ್ವ ಹಿಂದುತ್ವವಾದಿಯಾಗಿ ಗೌರಿ ಅವರು ಹಿಂದುತ್ವ ವಿರೋಧಿ ಹೇಳಿಕೆ ನೀಡುತ್ತಿದ್ದುದನ್ನು ಕಂಡು ಅವರ ಹತ್ಯೆಗೆ ಒಪ್ಪಿಕೊಂಡಿದ್ದೆ ಎಂದು ಪರಶುರಾಮ್ ಹೇಳಿಕೆ ನೀಡಿದ್ದಾನೆ ಎಂದು ಎಸ್‌ಐಟಿಯ ಉನ್ನತ ಮೂಲಗಳು ಹೇಳಿವೆ.
ಹತ್ಯೆ ಬಳಿಕ ಕೆಲಸಕ್ಕೆ ಹೋಗ್ತಿರಲಿಲ್ಲ: ಸೆ.5 ರಂದು ಗೌರಿ ಲಂಕೇಶ್ ಅವರಿಗೆ ಗುಂಡಿಕ್ಕಿ ಹತ್ಯೆ ಮಾಡಿದ ಬಳಿಕ ಪರಶುರಾಮ್ ವಾಗ್ಮೋರೆ ವಿಜಯಪುರ ಜಿಲ್ಲೆಯ ಸಿಂದಗಿಯ ತನ್ನ ಸ್ವಗ್ರಾಮಕ್ಕೆ ತೆರಳಿದ್ದ. ಕುಟುಂಬಸ್ಥರು ಮತ್ತು ಸ್ನೇಹಿತರ ಬಳಿ ಎಲ್ಲಿಯೂ ಅನುಮಾನ ಬಾರದಂತೆ ನಡೆದುಕೊಂಡಿದ್ದ. ಎಂದಿನಂತೆ ಜೀವನ ಸಾಗಿಸುತ್ತಿದ್ದ. ಆದರೆ ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ಗೌರಿ ಹತ್ಯೆ ಬಳಿಕ ವಿಜಯಪುರದಲ್ಲಿ ಏರ್ಪಡಿಸಿದ್ದ ಹಿಂದೂ ಧರ್ಮದ ಸಮಾವೇಶವೊಂದರ ನೇತೃತ್ವವನ್ನು ಪರಶುರಾಮ್ ವಹಿಸಿಕೊಂಡಿದ್ದ.
ಆರೋಪಿಗೆ ಪೋಷಕರ ಮೇಲೆ ಹೆಚ್ಚು ಪ್ರೀತಿ. ಎಲ್ಲೂ ಕೂಡ ತನ್ನ ಕೃತ್ಯದ ಬಗ್ಗೆ ಅನುಮಾನ ಬರುವಂತೆ ನಡೆದುಕೊಂಡಿರಲಿಲ್ಲ ಎಂದು ಎಸ್‌ಐಟಿ ಉನ್ನತ ಮೂಲಗಳು ಕನ್ನಡಪ್ರಭಕ್ಕೆ ಮಾಹಿತಿ ನೀಡಿವೆ. ಪರಶುರಾಮ್ ತನಿಖೆಗೆ ಸಂಪೂರ್ಣವಾಗಿ ಸಹಕರಿಸುತ್ತಿದ್ದಾನೆ. ಪಿಸ್ತೂಲ್ ಕೊಟ್ಟವರ ಪರಿಚಯ ಪರಶುರಾಮ್‌ಗೆ ಇಲ್ಲ. ಆ ಮೂವರು ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಮೂಲಗಳು ತಿಳಿಸಿವೆ.
