ಎನ್.ಲಕ್ಷ್ಮಣ್

ಬೆಂಗಳೂರು : ನನಗೆ ಏನೂ ಮಾಡಬೇಡಿ... ನೀವು ಫೋಟೋದಲ್ಲಿ ತೋರಿಸಿದ ವ್ಯಕ್ತಿ (ಅಮೋಲ್ ಕಾಳೆ) ಸೇರಿ ಮೂವರೂ ನನಗೆ ಪರಿಚಿತರು. ನನಗೆ ಶೂಟಿಂಗ್ ತರಬೇತಿ ನೀಡಿದ್ದೇ ಅಮೋಲ್ ಕಾಳೆ..! ರಾಷ್ಟ್ರದೆಲ್ಲೆಡೆ ಸುದ್ದಿಯಾಗಿದ್ದ ಗೌರಿ ಲಂಕೇಶ್  ಹತ್ಯೆ ಪ್ರಕರಣದಲ್ಲಿ ಗೌರಿಗೆ ಗುಂಡಿಕ್ಕಿದ ಆರೋಪದಡಿ ವಿಶೇಷ ತನಿಖಾ ತಂಡ (ಎಸ್ಐಟಿ)ದಿಂದ ಬಂಧನಕ್ಕೆ ಒಳಗಾಗಿರುವ ಶಂಕಿತ ಶೂಟರ್ ವಿಜಯಪುರ ಜಿಲ್ಲೆ ಸಿಂದಗಿಯ ಪರಶುರಾಮ್ ವಾಗ್ಮೋರೆ ಹೀಗೆಂದು ತನಿಖಾಧಿಕಾರಿಗಳ ಬಳಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ.
 
ಇಷ್ಟು ದಿನ ಮಹಾರಾಷ್ಟ್ರದ ಅಮೋಲ್ ಕಾಳೆ ಅಲಿಯಾಸ್ ಬಾಯ್‌ಸಾಬ್, ಶಿಕಾರಿಪುರದ ಕಪ್ಪನಹಳ್ಳಿ ಗ್ರಾಮದ ಸುಜಿತ್ ಕುಮಾರ್ ಅಲಿಯಾಸ್ ಪ್ರವೀಣ್ ಹಾಗೂ ಮನೋಹರ್ ಯಡವೆ ಅವರ ಪರಿಚಯ ತನಗೆ ಇಲ್ಲ ಎಂದು ಹೇಳುತ್ತಿದ್ದ ವಾಗ್ಮೋರೆ ಎಸ್‌ಐಟಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿ ಸೂಕ್ತ ಸಾಕ್ಷ್ಯಧಾರಗಳನ್ನು ಮುಂದಿಡುತ್ತಿದ್ದಂತೆ ತಪ್ಪೊಪ್ಪಿಕೊಂಡಿದ್ದಾನೆಂದು ಎಸ್‌ಐಟಿ ಮೂಲಗಳು ಕನ್ನಡಪ್ರಭಕ್ಕೆ ತಿಳಿಸಿವೆ.

ಮನೋಹರ್ ಯಡವೆ ನೀಡಿದ ಮಾಹಿತಿ ಮೇರೆಗೆ ಜೂ.11ರಂದು ಪರಶು ರಾಮ್ ವಾಗ್ಮೋರೆಯನ್ನು ಬಂಧಿಸಿ ನಗರಕ್ಕೆ ಕರೆ ತರಲಾಗಿತ್ತು. ಅವನಿಗೆ ಅಮೋಲ್ ಕಾಳೆಯ ಫೋಟೋ ತೋರಿಸುತ್ತಿ ದ್ದಂತೆ, ನನಗೆ ಏನೂ ಮಾಡಬೇಡಿ. ಎಲ್ಲವೂ ಹೇಳುತ್ತೇನೆ. ಫೋಟೋದಲ್ಲಿ ಇರುವ ವ್ಯಕ್ತಿಯ ಪರಿಚಯ ಇದೆ. ಆದರೆ ಆತನ ಹೆಸರು ಗೊತ್ತಿಲ್ಲ. ಆತನ ಜತೆಗಿದ್ದವರು ಬಾಯ್‌ಸಾಬ್ ಎಂದು ಕರೆಯುತ್ತಿದ್ದರು. ಆದರೆ ಕೆ.ಟಿ.ನವೀನ್ ಕುಮಾರ್ ಮತ್ತು ಪುಣೆಯ ಅಮಿತ್ ದೇಗ್ವೇಕರ್ ಪರಿಚಯ ನನಗೆ ಇಲ್ಲ ಎಂದು ಹೇಳಿದ್ದಾನೆ ಎಂದು ಎಸ್‌ಐಟಿಯ ನಂಬಲರ್ಹ ಮೂಲಗಳು ಮಾಹಿತಿ ನೀಡಿವೆ.

2017 ರ ಆಗಸ್ಟ್ ಬಳಿಕ ಪರಿಚಯ: ವಿಜಯಪುರ ಜಿಲ್ಲೆಯಲ್ಲಿ ಸಂಘಟನೆಯಲ್ಲಿ ತೊಡಗಿದ್ದ ನನ್ನನ್ನು ಮೊದಲು 2017ರ ಆಗಸ್ಟ್ ನಲ್ಲಿ ಶಿಕಾರಿಪುರದ ಸುಜಿತ್ ಸಂಪರ್ಕ ಮಾಡಿದ್ದ. ಆ ಬಳಿಕ ಪುಣೆಯ ಅಮೋಲ್ ಕಾಳೆಯ ಸಂಪರ್ಕಕ್ಕೆ ಬಂದಿದ್ದೆ. ಪರಿಚಯವಾದ ಸುಜೀತ್ ಹಿಂದೂ ಧರ್ಮದ ಉಳಿವಿಗೆ ನಿನ್ನಿಂದ ಒಂದು ಕೆಲಸವಾಗಬೇಕಿದೆ ಎಂದು ಹೇಳಿ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಬೇಕೆಂದು ಹೇಳಿದ್ದ. ಇದಕ್ಕೆ ಒಪ್ಪುವುದಾದರೆ ಯೋಚಿಸಿ ಹೇಳುವಂತೆ ಸೂಚಿಸಿದ್ದ. ಇದಕ್ಕೆ ನಾನು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ನಂತರ ಅಮೋಲ್ ಕಾಳೆ ಸಿಂದಗಿಯಲ್ಲೇ ಭೇಟಿಯಾಗಿ ಸಂಚಿನ ಬಗ್ಗೆ ಮಾಹಿತಿ ನೀಡಿದ್ದ. ಅಮೋಲ್ ಕಾಳೆಯ ನೇರ ಭೇಟಿಯ ನಂತರ ಗೌರಿ ಲಂಕೇಶ್ ಬಗ್ಗೆ ತಿಳಿದುಕೊಂಡು ಹತ್ಯೆಗೆ ಒಪ್ಪಿದೆ. ಮರಾಠಿ ಭಾಷಿಕನಾಗಿದ್ದ ಕಾರಣ ಅಮೋಲ್ ಜತೆ ಮರಾಠಿಯಲ್ಲೇ ಮಾತನಾಡುತ್ತಿದ್ದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ. 

ಅಮೋಲ್ ತರಬೇತಿ ನೀಡಿದ್ದ: ನಾನು ಹತ್ಯೆಗೆ ಒಪ್ಪಿದ ಬಳಿಕ ಪುಣೆ ಮತ್ತು ಬೆಳಗಾವಿ ಗಡಿ ಜಿಲ್ಲೆಯಲ್ಲಿ ಶೂಟಿಂಗ್ ತರಬೇತಿ ನೀಡಲಾಗಿತ್ತು. ಅಮೋಲ್ ಕಾಳೆಯೇ ನನಗೆ ತರಬೇತಿ ನೀಡಿದ್ದ. ಈ ವೇಳೆ ಜತೆಗೆ ಸುಜಿತ್ ಹಾಗೂ ಮನೋಹರ್ ಯಡವೆ ಕೂಡ ಇದ್ದರು ಎಂದೂ ಪರಶುರಾಮ್ ಮಾಹಿತಿ ನೀಡಿದ್ದಾನೆ. 

ಎಸ್‌ಐಟಿ ತನಿಖಾಧಿಕಾರಿಗಳ ತಂಡ ಅಮೋಲ್ ಕಾಳೆ ಬಳಿ ವಾಗ್ಮೋರೆಯನ್ನು ಕರೆದುಕೊಂಡು ಹೋಗಿ ನಿಲ್ಲಿಸಿದಾಗ ಆತಂಕಗೊಂಡ ಅಮೋಲ್ ಕಾಳೆ, ಎಲ್ಲವೂ ಬಯಲಾಯಿತು ಎಂದು ತಲೆ ಚಚ್ಚಿಕೊಳ್ಳಲು ಯತ್ನಿಸಿದ. ಕೂಡಲೇ ಆತನನ್ನು ಸಿಬ್ಬಂದಿ ಹಿಡಿದು ಸಮಾಧಾನಪಡಿಸಿದರು ಎಂದು ಅಧಿಕಾರಿ ಮಾಹಿತಿ ನೀಡಿದರು.

ಹಣ ಕೊಟ್ಟವ ವಕೀಲನಂತಿದ್ದ!: ಹತ್ಯೆ ಬಳಿಕ ನನ್ನನ್ನು ಊರಿನಲ್ಲಿ ಇಬ್ಬರು ಭೇಟಿಯಾಗಿ 10 ಸಾವಿರ ಹಣ ನೀಡಿದ್ದರು. ಯಾರಿಗೂ ಸಿಗಬೇಡ. ಯಾರಾದರೂ ಕೇಳಿದರೆ ನನಗೆ ಏನೂ ಗೊತ್ತಿಲ್ಲ ಎಂದು ಹೇಳು. ನಿನ್ನ ಹಾಗೂ ಕುಟುಂಬವನ್ನು ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದರು. ಹಣ ಕೊಟ್ಟ ವ್ಯಕ್ತಿ ಎತ್ತರವಾಗಿದ್ದು, ವಕೀಲನಂತೆ ಇದ್ದ. ಹಣ ಕೊಟ್ಟ ವ್ಯಕ್ತಿಯನ್ನು ಆತನ ಜತೆಗಿದ್ದವ ದಾದಾ ಎಂದು ಕರೆಯುತ್ತಿದ್ದ ಎಂದು ಪರಶುರಾಮ್ ವಾಗ್ಮೋರೆ ಹೇಳಿಕೆ ನೀಡಿದ್ದಾನೆ. ದಾದಾ ಎನ್ನುವ ವ್ಯಕ್ತಿಯೇ ನಿಹಾಲ್ ಎನ್ನಲಾಗಿದೆ.  ಹೀಗಾಗಿ ಬೈಕ್‌ನಲ್ಲಿ ಕರೆ ತಂದಿದ್ದ ಹಾಗೂ ಹಣ ಕೊಟ್ಟವರು ಸೇರಿ ಎಸ್‌ಐಟಿ ಮೂವರಿಗಾಗಿ ಬಲೆ ಬೀಸಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಕನ್ನಡಪ್ರಭಕ್ಕೆ ಹೇಳಿದ್ದಾರೆ.

ಸುಳ್ಳು ಹೇಳಬೇಕೇ?: ಆರೋಪಿ ಪರಶುರಾಮ್‌ನನ್ನು ತನಿಖಾಧಿಕಾರಿಗಳು ಚಿಂತಕ ಪ್ರೊ.ಎಂ.ಎಂ.ಕಲ್ಬುರ್ಗಿ ಅವರ ಬಗ್ಗೆ ಪ್ರಶ್ನಿಸಿದರೆ ಆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾನೆ. ತೀವ್ರ ವಿಚಾರಣೆ ನಡೆಸಿದಾಗ ಗೌರಿ ಹತ್ಯೆಯಲ್ಲಿ ತನ್ನ ಪಾತ್ರದ ಬಗ್ಗೆ ಹಾಗೂ ತಾನು ಮಾಡಿರುವ ಕೃತ್ಯದ ಬಗ್ಗೆ ಸಂಪೂರ್ಣ ಹೇಳಿಕೆ ನೀಡಿದ್ದಾನೆ. ಬೇರೆ ಏನೂ ಗೊತ್ತಿಲ್ಲ, ಸುಳ್ಳು ಹೇಳಬೇಕೇ ಎಂದು ತನಿಖಾಧಿಕಾರಿಗಳ ಬಳಿ ಮುಗ್ಧನ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.