Asianet Suvarna News Asianet Suvarna News

ಏಕಾಂಗಿಯಾಗಿ 60 ಅಡಿ ಬಾವಿ ತೋಡಿದ ಮಹಿಳೆ!

ಜೀವಜಲಕ್ಕಾಗಿ ಶಿರಸಿಯ ಗೌರಕ್ಕನ ಅಪ್ರತಿಮ ಸಾಧನೆ | 150 ಅಡಕೆ, 20 ತೆಂಗಿನ ಮರ ಉಳಿಸಲು ಶ್ರಮಿಸಿದ ದಿಟ್ಟನಾರಿ

sirsi lady gowri chandrashekhara nayaka digs well alone

ಶಿರಸಿ: ಜೀವನಕ್ಕೆ ಆಸರೆಗಾಗಿ ತಾನೇ ನೆಟ್ಟಬಾಳೆ, ತೆಂಗು, ಅಡಕೆ ಗಿಡಗಳು ನೀರಿನ ಕೊರತೆಯಿಂದ ಒಣಗುತ್ತಿರುವುದನ್ನು ನೋಡಲಾರದೆ ಮಹಿಳೆಯೊಬ್ಬರು ಏಕಾಂಗಿಯಾಗಿ 8 ಅಡಿ ಅಗಲ, 60 ಅಡಿ ಆಳದ ಬಾವಿ ತೋಡಿ ದಿಟ್ಟತನ ಮೆರೆದಿದ್ದಾರೆ. 2 ತಿಂಗಳಿಂದ ಮನೆಯ ಹಿಂಬದಿಯ ತೋಟದಲ್ಲಿ ಯಾರಿಗೂ ತಿಳಿಯದಂತೆ ಬಾವಿ ತೋಡುವ ಕಾರ್ಯದಲ್ಲಿ ತೊಡಗಿಕೊಂಡ ಉತ್ತರ ಕನ್ನಡ ಜಿಲ್ಲೆ ಶಿರಸಿ ಪಟ್ಟಣದ ಗಣೇಶನಗರ ನಿವಾಸಿ 51ರ ಹರೆಯದ ಗೌರಿ ಚಂದ್ರಶೇಖರ ನಾಯ್ಕ, ಕೊನೆಯ ನಾಲ್ಕು ದಿನದ ಹೊರತಾಗಿ ಯಾರ ಸಹಾಯವನ್ನೂ ಚಾಚದೆ ಒಬ್ಬರೇ ಬಾವಿ ತೋಡಿ ಮುಗಿಸಿದ್ದಾರೆ. ಮಗ ಬಯ್ಯುತ್ತಾನೆ ಎಂದು ಯಾರಿಗೂ ಹೇಳದೆ ಬಾವಿ ತೆಗೆಯುವ ಕಾರ್ಯ ಮುಗಿಸಿ ಮಗನ ಮುಖದಲ್ಲೂ ಅಚ್ಚರಿ ಮೂಡಿಸಿದ್ದಾರೆ.

ತವರು ಮನೆಯಾದ ಗಣೇಶನಗರದಲ್ಲಿ ಗೌರಿ ನೆಲೆಸಿ 45 ವರ್ಷಗಳಾದವು. ಹತ್ತಿರದ ಗ್ರಾಮೀಣ ಭಾಗಕ್ಕೆ ತೆರಳಿ ಕೂಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿರುವ ಇವರು, ತಮ್ಮ ಮನೆಯ ಸುತ್ತ ಇರುವ ಜಾಗದಲ್ಲಿ ಅಕ್ಕರೆಯಿಂದ ನೆಟ್ಟ150 ಅಡಕೆ ಹಾಗೂ 20 ತೆಂಗಿನ ಸಸಿಗಳು ಬಿಸಿಲಿನ ಹೊಡೆತಕ್ಕೆ ತತ್ತರಿಸಿದ್ದವು. ಅವುಗಳನ್ನು ರಕ್ಷಿಸುವ ದೃಢ ವಿಶ್ವಾಸದಿಂದ ಬಾವಿ ಕಾರ್ಯ ಆರಂಭಿಸಿದ್ದರು. ಕಲ್ಲು ಮಿಶ್ರಿತ ಮಣ್ಣಿನಿಂದ ಕೂಡಿದ ಬಾವಿಯಲ್ಲಿ 8 ಅಡಿ ಅಗಲದಲ್ಲಿ ದಿನಕ್ಕೆ 3 ಅಡಿ ಮಣ್ಣನ್ನು ಬಾವಿಯಿಂದ ತೆಗೆಯಲು ಗೌರಕ್ಕ ಗುದ್ದಲಿ, ಹಾರೆ, ಚಾಣ, ಸುತ್ತಿಗೆ, ಪಿಕಾಸು, 2 ಕಬ್ಬಿಣದ ಬಕೇಟ್‌ ಬಳಕೆ ಮಾಡಿದ್ದಾರೆ. ಗೌರಿ ಅವರ 2 ತಿಂಗಳ ಬೆವರ ಹನಿಯ ಪ್ರತಿಫಲವಾಗಿ 60 ಅಡಿ ಆಳದ ಬಾವಿ ತೆಗೆದಿದ್ದು, 7 ಅಡಿ ಜೀವಜಲ ತುಂಬಿದೆ. ವಿಚಿತ್ರೆವೆಂದರೆ ಗಣೇಶ ನಗರ ಸುತ್ತಮುತ್ತಲು 10ಕ್ಕೂ ಹೆಚ್ಚಿನ ಬಾವಿಗಳನ್ನು ತೋಡಿದ್ದರೂ ನೀರಿನ ಸೆಲೆ ಕಾಣಿಸಿರಲಿಲ್ಲ.

ದಿನಕ್ಕೆ 200ಕ್ಕೂ ಹೆಚ್ಚು ಸಲ ಹತ್ತಿಳಿದೆ: ಸಾಮಾನ್ಯವಾಗಿ ಬಾವಿ ತೆಗೆಯುವುದಕ್ಕೆ 3ರಿಂದ 4 ಜನ ಬೇಕಾಗುತ್ತದೆ. ಇಬ್ಬರು ಬಾವಿಯ ಮಣ್ಣೆತ್ತಲು ಹಾಗೂ ಇನ್ನಿಬ್ಬರು ಬಾವಿ ತೋಡುವ ಕಾರ್ಯದಲ್ಲಿ ತೊಡಗುತ್ತಾರೆ. ಆದರೆ ಗೌರಕ್ಕ ದಿನದಲ್ಲಿ 200ಕ್ಕೂ ಹೆಚ್ಚು ಬಾರಿ ಬಾವಿ ಹತ್ತಿಳಿಯುತ್ತಲೆ ಬಾವಿ ತೋಡಿದ್ದರು ಎಂದರೆ ನಂಬಲು ಅಸಾಧ್ಯವಾದರೂ ಸತ್ಯ! ಇವರಿಗೆ ಬಾವಿ ಹತ್ತಿಳಿಯಲು ಕೇವಲ 2 ನಿಮಿಷ ಸಾಕು!

200 ಸಲ ಹತ್ತಿಳಿದೆ:
ಪ್ರೀತಿಯಿಂದ ಅಡಕೆ ಹಾಗೂ ತೆಂಗಿನ ಗಿಡಗಳನ್ನು ನೆಟ್ಟಿದ್ದೇನೆ. ಇನ್ನೆರಡು ವರ್ಷದಲ್ಲಿ ಫಲ ಬರುವ ಹಂತದಲ್ಲಿದ್ದ ಗಿಡಗಳು ನೀರಿಲ್ಲದೆ ಸಾಯುವುದನ್ನು ನೋಡಲಾಗಲಿಲ್ಲ. ಅದಕ್ಕೆ ಧೈರ‍್ಯ ಮಾಡಿ ಒಬ್ಬಳೆ ಬಾವಿ ತೋಡಿದ್ದೇನೆ. ದಿನಕ್ಕೆ ಅಂದಾಜು 200 ಸಲ ಇಳಿದು, ಹತ್ತಿದ್ದೇನೆ. ಆರಾಧ್ಯ ದೇವಿ ಮಾರಿಕಾಂಬೆಯ ಆಶೀರ್ವಾದ ನನಗಿತ್ತು.
- ಗೌರಿ,  ಬಾವಿ ತೋಡಿದ ಮಹಿಳೆ

ಕನ್ನಡಪ್ರಭ ವಾರ್ತೆ
epaper.kannadaprabha.in