ತೆರಿಗೆ ಹಣವನ್ನು ಜನರಿಗೆ ವಾಪಸ್ ಕೊಟ್ಟ ಸರ್ಕಾರ

First Published 21, Feb 2018, 7:15 AM IST
Singapore to Pay Bonus to all Citizens after Surplus budget
Highlights

ಅಪರೂಪದ ವಿದ್ಯಮಾನವೊಂದರಲ್ಲಿ ಸಿಂಗಾಪುರ ಸರ್ಕಾರ ತನ್ನ ಬಜೆಟ್‌ನಲ್ಲಿ ಉಳಿದ ಹಣವನ್ನು ಜನರ ಖಾತೆಗೆ ಜಮೆ ಮಾಡಲು ನಿರ್ಧರಿಸಿದೆ.

ನವದೆಹಲಿ: ಅಪರೂಪದ ವಿದ್ಯಮಾನವೊಂದರಲ್ಲಿ ಸಿಂಗಾಪುರ ಸರ್ಕಾರ ತನ್ನ ಬಜೆಟ್‌ನಲ್ಲಿ ಉಳಿದ ಹಣವನ್ನು ಜನರ ಖಾತೆಗೆ ಜಮೆ ಮಾಡಲು ನಿರ್ಧರಿಸಿದೆ. ಸುಮಾರು 56 ಲಕ್ಷ ಜನಸಂಖ್ಯೆಯಿರುವ ಸಿಂಗಾಪುರದಲ್ಲಿ 27 ಲಕ್ಷ ಜನರ ಖಾತೆಗೆ ತಲಾ 300ಸಿಂಗಾಪುರ ಡಾಲರ್ (ಸುಮಾರು 15000 ರು.) ಹಣ ಜಮೆಯಾಗಲಿದೆ. 21 ವರ್ಷಕ್ಕಿಂತ ಹೆಚ್ಚು ವಯಸ್ಸಿನ, ಕಳೆದ ವರ್ಷ 14 ಲಕ್ಷ ರು.ಗಿಂತ ಕಡಿಮೆ ಆದಾಯ (28000 ಸಿಂಗಾಪುರ ಡಾಲರ್) ಕಡಿಮೆ ಆದಾಯವಿರುವ ಜನರಿಗೆ 15000ರು.ವರೆಗೆ ಹಣ ಸಿಗಲಿದೆ ಎಂದು ದೇಶದ ಹಣಕಾಸು ಸಚಿವ ಹೆಂಗ್ ಸ್ವೀ ಕೀಟ್ ಬಜೆಟ್‌ನಲ್ಲಿ ಪ್ರಕಟಿಸಿದ್ದಾರೆ.

14ಲಕ್ಷ ರು.ನಿಂದ 50 ಲಕ್ಷ ರು.ವರೆಗೆ ಆದಾಯ ಹೊಂದಿದವರಿಗೆ ಅಂದಾಜು 10000 ರು. (200 ಸಿಂಗಾಪುರ ಡಾಲರ್) ಹಾಗೂ 50 ಲಕ್ಷ ರು. ಮೇಲ್ಪಟ್ಟ ಆದಾಯ ಅಥವಾ ಒಂದಕ್ಕಿಂತ ಹೆಚ್ಚು ಆಸ್ತಿ ಹೊಂದಿದವರಿಗೆ 5000 ರು. (100 ಸಿಂಗಾಪುರ ಡಾಲರ್) ಹಣ ಸಿಗಲಿದೆ. ಈ ವರ್ಷ ಬಜೆಟ್ ಮಂಡನೆ ಬಳಿಕ ಸರ್ಕಾರದ ಬಳಿ ಅಂದಾಜು 50000 ರು. ಕೋಟಿ ಹೆಚ್ಚುವರಿಯಾಗಿ ಉಳಿದಿದೆ.

ಈ ಪೈಕಿ ಇದೀಗ ಅಂದಾಜು 3500  ಕೋಟಿ ರು.ಗಳನ್ನು ಬೋನಸ್ ನೀಡಲು ಬಳಸಲು ಸರ್ಕಾರ ನಿರ್ಧರಿಸಿದೆ. 2011ರಲ್ಲಿ ಕಡೆಯ ಬಾರಿಗೆ ಸರ್ಕಾರ, ಹೀಗೆ ಜನರಿಗೆ ಬೋನಸ್ ವಿತರಿಸಿತ್ತು. ಆಗ ಚುನಾವಣಾ ವರ್ಷವಾಗಿತ್ತು. ಅದಾದ ಬಳಿಕ ಇದೀಗ ಸರ್ಕಾರ ಮತ್ತೊಮ್ಮೆ ಇದೀಗ ಜನರಿಗೆ ಹೀಗೆ ಬೋನಸ್ ಘೋಷಣೆ ಮಾಡಿದೆ. ಭಾರತದಲ್ಲಿ ಕಳೆದ ಲೋಕಸಭೆ ಚುನಾವಣೆಗೂ ಮುನ್ನ ಮೋದಿಯವರು ಕಪ್ಪು ಹಣವನ್ನು ಭಾರತಕ್ಕೆ ವಾಪಸ್ ತಂದ ನಂತರ ಜನರ ಖಾತೆಗೆ ಜಮೆ ಮಾಡುವುದಾಗಿ ಹೇಳಿದ್ದರು ಎಂಬ ಸುದ್ದಿ ಹರಡಿತ್ತು.

loader