ರಾಯಚೂರು (ಸೆ. 02): ಸೆ.7 ರಂದು ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ ಕಚೇರಿಯಲ್ಲಿ ಚಂದ್ರನ ಅಂಗಳದಲ್ಲಿ ಚಂದ್ರಯಾನ-2 ನೌಕೆ ಇಳಿಯುವುದನ್ನು ಪ್ರಧಾನಿ ನರೇಂದ್ರ ಮೋದಿ ಜತೆಗೆ ವೀಕ್ಷಿಸಲು ರಾಯಚೂರು ಜಿಲ್ಲೆ ಸಿಂಧನೂರು ನಗರದ ಡಾಫಡಿಲ್ಸ್‌ ಕಾನ್ಸೆಫ್ಟ್‌ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಜಿ.ವೈಷ್ಣವಿ ನಾಗರಾಜ ಆಯ್ಕೆಯಾಗಿದ್ದಾರೆ.

ಆನ್‌ಲೈನ್‌ನಲ್ಲಿ ಆ.25 ರಂದು ರಸಪ್ರಶ್ನೆ ನಡೆಸಲಾಗಿತ್ತು. ಎಲ್ಲಾ ರಾಜ್ಯದ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. 20 ಪ್ರಶ್ನೆಗಳನ್ನು 10 ನಿಮಿಷದಲ್ಲಿ ಉತ್ತರಿಸಲು ಹೇಳಲಾಗಿತ್ತು. ಜಿ.ವೈಷ್ಣವಿ 5 ನಿಮಿಷದಲ್ಲಿ ಉತ್ತರಿಸುವ ಮೂಲಕ ಆಯ್ಕೆಯಾಗಿದ್ದಾರೆ.

ಒಂದೊಂದು ರಾಜ್ಯದಿಂದ ಒಬ್ಬ ವಿದ್ಯಾರ್ಥಿಯನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಈ ಬಗ್ಗೆ ವಿದ್ಯಾರ್ಥಿನಿ ಜಿ.ವೈಷ್ಣವಿ ಸಂತಸ ವ್ಯಕ್ತಪಡಿಸಿ, ನನಗೆ ಶಾಲೆಯಲ್ಲಿ ಎಲ್ಲ ರೀತಿಯ ಮಾರ್ಗದರ್ಶನ ಸಿಕ್ಕಿದ್ದರಿಂದ ಈ ಸಾಧನೆ ಸಾಧ್ಯವಾಗಿದೆ. ಪಿಸಿಆರ್‌ಎ ಸ್ಪರ್ಧೆಯು ನನಗೆ ಸ್ಫೂರ್ತಿಯಾಯಿತು. ನಾನು ಮುಂದೆ ಇಸ್ರೋದಲ್ಲಿ ಎಂಜಿನಿಯರಿಂಗ್‌ ಮಾಡಬೇಕೆಂಬ ಮಹಾದಾಸೆ ಹೊಂದಿದ್ದೇನೆಂದು ಸಂತಸ ಹಂಚಿಕೊಂಡರು.