ಶಿವಮೊಗ್ಗದ ನಕ್ಸಲ್ ಪೀಡಿತ ಪ್ರದೇಶದಲ್ಲಿ ಮೈ ಜುಮ್ಮೆನಿಸುವ ಸಿಡಿ ಉತ್ಸವ

SIDI Festival Celebrated At Naxal Affected Area
Highlights

ನಕ್ಸಲ್ ಪೀಡಿತ ಪ್ರದೇಶದಲ್ಲಿ ಎಲ್ಲರು ಒಟ್ಟಾಗುವುದೇ ಕಡಿಮೆ. ಕಾರಣ ಇಲ್ಲಿ ಯಾವತ್ತು ಭಯದ  ವಾತಾವರಣ ಇರುತ್ತೆ. ಆದರೆ ಶಿವಮೊಗ್ಗ ಜಿಲ್ಲೆಯ ನಕ್ಸಲ್​ ಪೀಡಿತ ಪ್ರದೇಶದ ತಲ್ಲೂರಂಗಡಿಯ ಜನರು ಗ್ರಾಮ ದೇವತೆಯ ಉತ್ಸವವನ್ನ ಅದ್ಧೂರಿಯಾಗಿ ಆಚರಿಸಿದ್ದಾರೆ.

ಶಿವಮೊಗ್ಗ(ಜೂನ್.6):  ನಕ್ಸಲ್ ಪೀಡಿತ ಪ್ರದೇಶವಾಗಿ ಗುರುತಿಸಿಕೊಂಡಿರುವ ಶಿವಮೊಗ್ಗ ಜಿಲ್ಲೆಯ ತಲ್ಲೂರಂಗಡಿಯ ಜನರು ಗ್ರಾಮ ದೇವತೆಯ ವಾರ್ಷಿಕ ಉತ್ಸವವನ್ನ ಅದ್ಧೂರಿಯಾಗಿ ಆಚರಿಸಿದರು. ತಮ್ಮ ಗ್ರಾಮದ ಗುತ್ಯಮ್ಮ ಮಾತ್ಯಂಗಮ್ಮ ದೇವಿಯ ಎದುರು ವಿಶಿಷ್ಟ ರೀತಿಯ ಸಿಡಿ ಹರಕೆಯನ್ನು ಸಲ್ಲಿಸಿ ಉತ್ಸವ ಆಚರಿಸಿದ್ದಾರೆ.

ತಮ್ಮ ಇಷ್ಟಾರ್ಥಗಳು ಈಡೇರಿದ ಸಂದರ್ಭದಲ್ಲಿ ಪ್ರತಿ ವರ್ಷದ  ಮೇ ಅಂತ್ಯದಲ್ಲಿ ಅಥವಾ ಜೂನ್ ಮೊದಲ ವಾರದೊಳಗೆ ದೇವಿಯ ಜಾತ್ರೆ ನಡೆಸಲಾಗುತ್ತದೆ. ದೇವಿಗೆ ಹರಕೆ ಹೊತ್ತವರ ಬೆನ್ನಿನ ಚರ್ಮಕ್ಕೆ ಸರಳಿನ ಹುಕ್ಕನ್ನು ಚುಚ್ಚಲಾಗುತ್ತದೆ. ನಂತರ ಭಾರಿ ಎತ್ತರ ಕಂಬಕ್ಕೆ ಕಟ್ಟಿರುವ ತಿರುಗುವ ಉದ್ದನೆಯ ಕೋಲಿಗೆ ಹುಕ್ಕನ್ನು ನೇತು ಹಾಕಲಾಗುತ್ತದೆ. ಚರ್ಮಕ್ಕೆ ಚುಚ್ಚಿದ 2 ಹುಕ್ಕಿನ ಆಧಾರದ ಮೇಲೆ ಇಡಿ ದೇಹ ತೂಗಾಡುತ್ತಿರುತ್ತದೆ. ಈ ಕೋಲು ಮೇಲಿಂದ ಕೆಳಗೆ ತಿರುಗುತ್ತಾ 2 ಬದಿಯಲ್ಲಿ ಹರಕೆ ಹೊತ್ತವರ ದೇಹ ತಿರುಗುತ್ತಿದ್ದರೆ ನೋಡುಗರ ಮೈಜುಮ್ಮೆನ್ನಿಸುತ್ತದೆ.

ಗುತ್ಯಮ್ಮ ಮಾತ್ಯಂಗಮ್ಮ ದೇವಸ್ಥಾನಕ್ಕೆ ಸುಮಾರು 800 ವರ್ಷಗಳ ಇತಿಹಾಸವಿದೆಯೆಂದು ಹೇಳಲಾಗಿದೆ.  ಆಕಳೊಂದು ಹುತ್ತದ ಮೇಲೆ ನಿತ್ಯ ಹಾಲು ಸುರಿಸುತ್ತಿದ್ದದ್ದನ್ನು ತಿಳಿದ ಗ್ರಾಮಸ್ಥರು ಆ ಸ್ಥಳದಲ್ಲಿಯೇ​ ದೇವಸ್ಥಾನ ನಿರ್ಮಿಸಿದ್ದಾರೆ. ಪ್ರತಿವರ್ಷ ಯಾರಾದರೂ ಹರಕೆ ಹೇಳಿಕೊಂಡಿರುತ್ತಾರೆ. ಇಲ್ಲದಿದ್ದಲ್ಲಿ ದೇವರನ್ನೆ ಸಿಡಿಗೆ ಏರಿಸಿ ಪೂಜೆ ಮಾಡಲಾಗುತ್ತದೆ. ಇದೀಗ ಇಲ್ಲಿನ ಗ್ರಾಮಸ್ಥರು ಸಿಡಿ ಉತ್ಸವನ್ನ ಅದ್ಧೂರಿಯಾಗಿ ಆಚರಿಸಿ ಗ್ರಾಮ ದೇವತೆಯ ದರ್ಶನ ಪಡೆದಿದ್ದಾರೆ.
 

loader