ನವದೆಹಲಿ(ಡಿ.11): ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ದೇಶವನ್ನಾಳುವ ಕಾಲ ಸನ್ನಿಹಿತವಾಗಿದೆ, ಬಿಜೆಪಿ ಅವನತಿ ಪ್ರಾರಂಭವಾಗಿದ್ದು, ರಾಹುಲ್ ಹೊಸ ಬಾಹುಬಲಿ ಎಂದು ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಹೇಳಿದ್ದಾರೆ.

ರಾಜಸ್ಥಾನ, ಮಧ್ಯಪ್ರದೇಶ ಸೇರಿ ಪಂಚರಾಜ್ಯಗಳ ಚುನಾವಣೆ ಫಲಿತಾಂಶದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಿಧು, ಪ್ರಜಾಪ್ರಭುತ್ವದಲ್ಲಿ ನಿರ್ಧಾರ ತೆಗೆದುಕೊಳ್ಳಲು ಜನರಿಗೆ ಅಧಿಕಾರವಿದೆ, ಅವರ ಧ್ವನಿಯೇ ದೇವರ ಧ್ವನಿ ಎಂದು ಹೇಳಿದ್ದಾರೆ.

ಜನರ ಧ್ವನಿ ಇದೀಗ ಬಿಜೆಪಿಗೆ ಭೀತಿಯನ್ನುಂಟು ಮಾಡಿದ್ದು, ರಾಹುಲ್ ಗಾಂಧಿ ದೇಶದ ಹೊಸ ಬಾಹುಬಲಿ ಆಗಿದ್ದಾರೆ ಎಂದು ಸಿಧು ಮಾರ್ಮಿಕವಾಗಿ ಹೇಳಿದರು.

ಬುರೇ ದಿನ್ (ಕೆಟ್ಟ ದಿನಗಳು) ಕಳೆಯಲಿದ್ದು, ದೇಶದ ರಾಜಕೀಯಕ್ಕೆ ರಾಹುಲ್ ಆಗಮನವಾಗಲಿದೆ. ಸಹನೆ ಹಾಗೂ ಪರಿಶ್ರಮದ ಫಲ ಸಿಹಿಯಾಗಿರಲಿದೆ. ರಾಹುಲ್ ನಾಯಕತ್ವದಲ್ಲಿ ನಾವೀಗ ಇದೇ ಫಲ ಕಾಣುತ್ತೇವೆ ಎಂದು ಸಿಧು ಭರವಸೆ ವ್ಯಕ್ತಪಡಿಸಿದ್ದಾರೆ.

2019ರಲ್ಲಿ ರಾಹುಲ್ ಗಾಂಧಿ ಪ್ರಧಾನಿಯಾಗಿ ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಿಸಲಿದ್ದಾರೆ ಎಂದು ಸಿಧು ಭವಿಷ್ಯ ನುಡಿದರು.