ಕೃಷ್ಣಾ ನದಿ ಬ್ಯಾರೇಜ್‌ಗೆ ಸಿದ್ದು ನ್ಯಾಮಗೌಡ ಹೆಸರು

Siddu Nyame Gowda name put for Krishna River barrage for memory of him
Highlights

-ಕೃಷ್ಣಾ ನದಿ ಬ್ಯಾರೇಜ್‌ಗೆ ಸಿದ್ದು ನ್ಯಾಮಗೌಡ ಹೆಸರು

- ಸರ್ಕಾರದ ನೆರವಿಲ್ಲದೆ ರೈತರ ಸಹಕಾರದಿಂದಲೇ ಬ್ಯಾರೇಜ್‌ ನಿರ್ಮಿಸಿದ್ದ ನ್ಯಾಮಗೌಡ

- ಇತ್ತೀಚೆಗೆ ಕಾರು ಅಪಘಾತದಲ್ಲಿ ಮರಣ: ಸ್ಮರಣಾರ್ಥ ಬ್ಯಾರೇಜ್‌ಗೆ ನಾಮಕರಣ 
 

ಬೆಂಗಳೂರು (ಜು. 03):  ಜಮಖಂಡಿ ಶಾಸಕ ಸಿದ್ದು ಬಿ. ನ್ಯಾಮಗೌಡ ಅವರು ರೈತರ ಸಹಕಾರದಿಂದ ನಿರ್ಮಿಸಿದ್ದ ಬ್ಯಾರೇಜ್‌ಗೆ ‘ಸಿದ್ದು ಬಿ. ನ್ಯಾಮಗೌಡ ಬ್ಯಾರೇಜ್‌’ ಎಂದು ನಾಮಕರಣ ಮಾಡುವುದಾಗಿ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಘೋಷಣೆ ಮಾಡಿದ್ದಾರೆ.

ಸಿದ್ದು ನ್ಯಾಮಗೌಡ ಸೇರಿ ಇತ್ತೀಚೆಗೆ ನಿಧನ ಹೊಂದಿದ ಹನ್ನೊಂದು ಮಂದಿ ವಿಧಾನಸಭೆಯ ಹಾಲಿ ಸದಸ್ಯರು ಹಾಗೂ ಮಾಜಿ ಸದಸ್ಯರಿಗೆ 15ನೇ ವಿಧಾನಸಭೆ ಮೊದಲ ಅಧಿವೇಶನ ಪ್ರಾರಂಭದ ದಿನವಾದ ಸೋಮವಾರ ಸಂತಾಪ ಸೂಚಿಸಲಾಯಿತು. ಮಾಜಿ ಶಾಸಕರಾದ ವೈ.ಎನ್‌. ರುದ್ರೇಶಗೌಡ, ಬಿ.ಎನ್‌. ವಿಜಯಕುಮಾರ್‌, ಎಚ್‌.ಬಿ. ದ್ಯಾವೀರಪ್ಪ, ಮಹಾದೇವಪ್ಪ ಶಿವಬಸಪ್ಪ ಪಟ್ಟಣ, ಬಿ.ಮುನಿಯಪ್ಪ, ಸದಾಶಿವಪ್ಪ ಪಾಟೀಲ, ಕೆ.ಎಚ್‌. ಹನುಮೇಗೌಡ, ಡಾ.ವೈ.ಸಿ. ವಿಶ್ವನಾಥ್‌, ಎಚ್‌. ಗಂಗಾಧರನ್‌, ಬಿ.ಎಸ್‌. ಪಾಟೀಲ್‌ ಸಾಸನೂರ ಅವರಿಗೆ ಸದನ ಸಂತಾಪ ಸಲ್ಲಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್‌, ಮೇ 28ರಂದು ಕಾರು ಅಪಘಾತದಲ್ಲಿ ಮೃತಪಟ್ಟಸಿದ್ದು ನ್ಯಾಮಗೌಡ ಅವರು ರೈತರನ್ನು ಒಗ್ಗೂಡಿಸಿ ಸರ್ಕಾರದ ಸಹಾಯವಿಲ್ಲದೆ 30 ವರ್ಷದ ಹಿಂದೆ 50 ಲಕ್ಷ ರು. ವೆಚ್ಚ ಮಾಡಿ ಕೃಷ್ಣಾ ನದಿಗೆ ಬ್ಯಾರೇಜ್‌ ನಿರ್ಮಾಣ ಮಾಡಿದ್ದರು. ಅದರಿಂದ ಸಾವಿರಾರು ರೈತ ಕುಟುಂಬಗಳ ಬದುಕು ಹಸನಾಗಿದೆ. ಹೀಗಾಗಿ ಅವರ ಗೌರವಾರ್ಥ ಬ್ಯಾರೇಜ್‌ಗೆ ಅವರ ಹೆಸರು ನಾಮಕರಣ ಮಾಡಲು ಮುಖ್ಯಮಂತ್ರಿ ಹಾಗೂ ಶಾಸಕಾಂಗ ಪಕ್ಷದ ಅನುಮತಿ ಪಡೆಯಲಾಗಿದೆ. ಸದ್ಯದಲ್ಲೇ ನಾಮಕರಣ ಮಾಡಲಾಗುವುದು ಎಂದು ಘೋಷಿಸಿದರು.

ಇದೇ ವೇಳೆ ಉಳಿದ ಹತ್ತು ಮಂದಿಯ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ ಅವರು, ಸಜ್ಜನರು ಕಡಿಮೆ ವಯಸ್ಸಿನಲ್ಲಿಯೇ ಮೃತಪಡುತ್ತಿರುವುದು ನೋಡುತ್ತಿದ್ದರೆ ದೇವರು ಇದ್ದಾರೋ ಇಲ್ಲವೋ ಎಂಬ ಅನುಮಾನ ಹುಟ್ಟುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇದಕ್ಕೂ ಮೊದಲು ಮಾತನಾಡಿದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಸಿದ್ದು ನ್ಯಾಮಗೌಡ ಮೇ 4ರಂದು ನಮ್ಮ ಜತೆಗೆ ದೆಹಲಿಯಲ್ಲಿದ್ದರು. ಮೇ 5ರಂದು ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಬ್ಯಾರೇಜ್‌ ಮೂಲಕ ಅವರು 26 ಸಾವಿರ ಎಕರೆ ಜಮೀನಿಗೆ ಹಾಗೂ ಜಮಖಂಡಿಯ 3 ಲಕ್ಷ ಜನರಿಗೆ ನೀರೊದಗಿಸಿದ್ದರು. ಈ ಜನಪ್ರಿಯತೆಯಿಂದಲೇ 1991ರಲ್ಲಿ ಬಾಗಲಕೋಟೆ ಲೋಕಸಭೆಗೆ ರಾಮಕೃಷ್ಣ ಹೆಗಡೆ ಅವರನ್ನು ಸೋಲಿಸಿ ಆಯ್ಕೆಯಾಗಿದ್ದರು ಎಂದು ನೆನೆದರು.

ವಿಧಿ ಆಟವೋ ಪ್ರಕೃತಿ ನಿಯಮವೋ:

ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಮಾತನಾಡಿ, 11 ಮಹನೀಯರನ್ನು ಕಳೆದುಕೊಂಡು ನಾವು ಬಡವಾಗಿದ್ದೇವೆ. ಸಿದ್ದು ನ್ಯಾಮಗೌಡ ಅವರು ಆವತ್ತು ದೆಹಲಿಯಲ್ಲಿ ನಮ್ಮ ಜತೆಗಿದ್ದರು. ಅಲ್ಲಿಂದ ಬಾಗಲಕೋಟೆಗೆ ವಾಪಸು ಹೋಗಲು ಬೆಂಗಳೂರಿಗೆ ಬಂದು ಹೋಗಬೇಕಿತ್ತು. ದೆಹಲಿಯಿಂದ ಬೆಂಗಳೂರಿಗೆ ಆ ದಿನ 60 ಸಾವಿರ ರು. ವಿಮಾನ ಟಿಕೆಟ್‌ ದರ ಇತ್ತು. ಅಷ್ಟುಹಣ ಕೊಡಲು ಮನಸ್ಸಿಲ್ಲದೆ 10 ಸಾವಿರ ರು. ಕೊಟ್ಟು ಗೋವಾಗೆ ಹೋಗಿ ಅಲ್ಲಿಂದ ಬಾಗಲಕೋಟೆಗೆ ಹೋಗಲು ನಿರ್ಧರಿಸಿದ್ದರು. ಬೆಂಗಳೂರಿಗೆ ಬಂದು ಹೋಗಿದ್ದರೆ ಬಹುಶಃ ಉಳಿಯುತ್ತಿದ್ದರೇನೋ ಎಂದರು.

ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಗೋವಿಂದ ಕಾರಜೋಳ, ಎ.ಎಸ್‌.ನಡಹಳ್ಳಿ, ಡಿ.ಕೆ. ಶಿವಕುಮಾರ್‌, ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವರು ಸಂತಾಪ ಸೂಚಿಸಿದರು. ಸಿದ್ದು ನ್ಯಾಮಗೌಡ ಚುನಾವಣೆ ಗೆದ್ದ ಮೇಲೆ ಮನೆಗೆ ಹೋಗಲೇ ಇರಲಿಲ್ಲ. ಇದು ಬಹಳ ನೋವಿನ ಸಂಗತಿ ಎಂದು ಗೋವಿಂದ ಕಾರಜೋಳ ಬೇಸರ ವ್ಯಕ್ತಪಡಿಸಿದರು.

ಅವರು ಸ್ವರ್ಗಕ್ಕೆ ತಲುಪಲಿ, ಕುಳಿತುಕೊಳ್ಳಿ!

ಸಂತಾಪ ಸೂಚನೆ ಭಾಷಣದ ವೇಳೆ ಮಾತನಾಡುತ್ತಿದ್ದ ಹಾಗೂ ಓಡಾಡುತ್ತಿದ್ದ ಶಾಸಕರಿಗೆ ಸ್ಪೀಕರ್‌ ರಮೇಶ್‌ಕುಮಾರ್‌ ಕಟ್ಟುನಿಟ್ಟಿನ ಸೂಚನೆ ನೀಡಿ ಶಿಸ್ತಿನಿಂದ ಕುಳಿತುಕೊಳ್ಳುವಂತೆ ತಾಕೀತು ಮಾಡಿದರು. ಶಾಸಕ ಶಿವರಾಮ್‌ ಹೆಬ್ಬಾರ್‌ ಬೇರೊಬ್ಬ ಶಾಸಕರ ಬಳಿ ಮಾತನಾಡುವಾಗ, ‘ಸಂತಾಪ ಸೂಚನೆ ವೇಳೆ ಮಾತನಾಡಬೇಡಿ. ಅವರು ಸ್ವರ್ಗ ತಲುಪಲಿ. ನೀವು ಮಾತನಾಡಿದರೆ ಅವರು ಅರ್ಧದಲ್ಲೇ ನಿಂತುಬಿಡುತ್ತಾರೆ’ ಎಂದು ಕಿಚಾಯಿಸಿದರು.

loader