Asianet Suvarna News Asianet Suvarna News

ರಾತ್ರಿ ಮನೆಗೆ ಕರೆಸಿ ಚಲುವರಾಯ ಸ್ವಾಮಿಗೆ ಸಿದ್ದರಾಮಯ್ಯ ವಾರ್ನಿಂಗ್

ಕಾಂಗ್ರೆಸ್ ಮುಖಂಡ ಚಲುವರಾಯಸ್ವಾಮಿ ಅವರನ್ನು ಮನೆಗೆ ಕರೆಸಿಕೊಂಡು ಸಿದ್ದರಾಮಯ್ಯ ಖಡಕ್ ವಾರ್ನಿಂಗ್ ನೀಡಿದ್ದಾರೆ.

Siddaramaiah Warning to Cheluvarayaswamy Over His Statement
Author
Bengaluru, First Published May 10, 2019, 9:08 AM IST

ಬೆಂಗಳೂರು :  ಮೈತ್ರಿ ಸರ್ಕಾರ ಹಾಗೂ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ಬಹಿರಂಗ ಹೇಳಿಕೆ ನೀಡುತ್ತಿರುವ ಮಾಜಿ ಸಚಿವ ಎನ್‌. ಚಲುವರಾಯಸ್ವಾಮಿ ಅವರನ್ನು ಗುರುವಾರ ತಮ್ಮ ನಿವಾಸಕ್ಕೆ ಕರೆಸಿಕೊಂಡ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರದ ಬಗ್ಗೆ ಬಹಿರಂಗ ಹೇಳಿಕೆ ನೀಡದಂತೆ ತಾಕೀತು ಮಾಡಿದ್ದಾರೆ.

ಗುರುವಾರ ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಚಲುವರಾಯಸ್ವಾಮಿ, ಐದು ವರ್ಷ ಮುಖ್ಯಮಂತ್ರಿ ಆಗಿರುವುದು ಹಾಗೂ ಮಧ್ಯಂತರ ಚುನಾವಣೆ ಘೋಷಣೆಯಾಗುವುದು ಎಲ್ಲವೂ ಕುಮಾರಸ್ವಾಮಿ ಅವರ ನಡವಳಿಕೆಯಲ್ಲಿಯೇ ಇದೆ. ಯಾವುದೇ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಗಳ ಈ ರೀತಿಯ ನಡವಳಿಕೆ ನೋಡಿಲ್ಲ ಎಂದು ಹರಿಹಾಯ್ದಿದ್ದರು.

ಈ ಬಗ್ಗೆ ಜೆಡಿಎಸ್‌ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಗುರುವಾರ ರಾತ್ರಿ 8.30 ಗಂಟೆಗೆ ಸಿದ್ದರಾಮಯ್ಯ ಅವರು ತಮ್ಮ ಕಾವೇರಿ ನಿವಾಸಕ್ಕೆ ಚಲುವರಾಯಸ್ವಾಮಿ ಅವರನ್ನು ಕರೆಸಿಕೊಂಡು ಚರ್ಚೆ ನಡೆಸಿ ಬುದ್ಧಿವಾದ ಹೇಳಿದ್ದಾರೆ. ಲೋಕಸಭೆ ಚುನಾವಣೆ ನಂತರ ಸಮ್ಮಿಶ್ರ ಸರ್ಕಾರ ಹಾಗೂ ಮುಖ್ಯಮಂತ್ರಿಗಳ ವಿರುದ್ಧ ಹೇಳಿಕೆ ನೀಡುತ್ತಿರುವುದು ಹೆಚ್ಚಾಗಿದೆ. ಹೈಕಮಾಂಡ್‌ ನಿರ್ಧಾರದಂತೆ ರಚನೆಯಾಗಿರುವ ಸಮ್ಮಿಶ್ರ ಸರ್ಕಾರಕ್ಕೆ ಅಗೌರವ ತೋರುವುದು ತಪ್ಪು. ಪಕ್ಷದ ಸೂಚನೆ ಹಾಗೂ ಶಿಸ್ತು ಪಾಲನೆ ದೃಷ್ಟಿಯಿಂದ ಇನ್ನು ಮುಂದೆ ಈ ರೀತಿ ಬಹಿರಂಗ ಹೇಳಿಕೆ ನೀಡಬೇಡಿ ಎಂದು ಚಲುವರಾಯಸ್ವಾಮಿ ಅವರಿಗೆ ತಾಕೀತು ಮಾಡಿದರು ಎಂದು ಮೂಲಗಳು ತಿಳಿಸಿವೆ.

ಇದೇ ವೇಳೆ ಚಲುವರಾಯಸ್ವಾಮಿ ಅವರು, ಮಂಡ್ಯ ಜಿಲ್ಲೆಯಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಗ್ಗೆ ಮಾಹಿತಿ ನೀಡಿದರು. ಜತೆಗೆ ರಾಜ್ಯದ ಎಲ್ಲಾ ಹಾಲು ಒಕ್ಕೂಟಗಳಿಗೂ ಚುನಾವಣೆ ನಡೆಯುವಂತೆ ಮಂಡ್ಯದ ಮನ್‌ಮುಲ್‌ಗೂ ಚುನಾವಣೆ ನಡೆಯಬೇಕಿತ್ತು. ಮಂಡ್ಯ ಮನ್‌ಮುಲ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್‌ನ ನಿರ್ದೇಶಕರಿದ್ದಾರೆ ಎಂಬ ಕಾರಣಕ್ಕೆ ಚುನಾವಣೆ ಮುಂದೂಡಿದ್ದಾರೆ. ಈ ರೀತಿ ಪ್ರತಿ ಹಂತದಲ್ಲೂ ಕಾಂಗ್ರೆಸ್‌ ನಾಯಕರಿಗೆ ಕಿರುಕುಳ ನೀಡುತ್ತಿದ್ದಾರೆ. ಹೀಗಾಗಿ ಸರ್ಕಾರ ನಡೆಸುವವರು ಸಹಾಯ ಮಾಡಿರುವವರ ಬಗ್ಗೆ ಕೃತಜ್ಞತೆ ಭಾವನೆ ಇಟ್ಟುಕೊಳ್ಳಬೇಕು ಎಂದು ಹೇಳಿದ್ದೇನೆ ಎಂದು ಸ್ಪಷ್ಟನೆ ನೀಡಿದರು.

ಆದರೆ ಇದಕ್ಕೆ ಒಪ್ಪದ ಸಿದ್ದರಾಮಯ್ಯ, ಈ ಹಂತದಲ್ಲಿ ನಿಮ್ಮ ಸಮಸ್ಯೆಗಳನ್ನು ಬಹಿರಂಗವಾಗಿ ಹೇಳಿಕೊಂಡರೆ ಸಮ್ಮಿಶ್ರ ಸರ್ಕಾರದ ಬಗ್ಗೆ ಜನರಲ್ಲಿ ಅಪನಂಬಿಕೆ ಮೂಡುತ್ತದೆ. ಮೈತ್ರಿ ಧರ್ಮ ಪಾಲನೆಯಾಗುತ್ತಿಲ್ಲ ಎಂದಾದರೆ ಪಕ್ಷದ ವೇದಿಕೆಯಲ್ಲಿ ಚರ್ಚೆ ನಡೆಸಬೇಕು. ಮುಂದಿನ ದಿನಗಳಲ್ಲಿ ನಿಮ್ಮ ಸಮಸ್ಯೆಗಳನ್ನು ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆಗೆ ತಂದು ಬಗೆಹರಿಸಲು ಯತ್ನಿಸುತ್ತೇವೆ. ಆದರೆ ಯಾವುದೇ ಕಾರಣಕ್ಕೂ ಇಂತಹ ಹೇಳಿಕೆಗಳಿಂದ ಪಕ್ಷ ಹಾಗೂ ಸಮ್ಮಿಶ್ರ ಸರ್ಕಾರಕ್ಕೆ ಧಕ್ಕೆ ಉಂಟು ಮಾಡಬೇಡಿ ಎಂದು ಸೂಚನೆ ನೀಡಿದರು ಎಂದು ತಿಳಿದುಬಂದಿದೆ.

ಮುದ್ದ ಹನುಮೇಗೌಡ, ವೆಂಕಟರಮಣಪ್ಪ ಭೇಟಿ :  ಚಲುವರಾಯಸ್ವಾಮಿ ಬೆನ್ನಲ್ಲೇ ತುಮಕೂರು ಸಂಸದ ಮುದ್ದ ಹನುಮೇಗೌಡ ಹಾಗೂ ಸಚಿವ ವೆಂಕಟರಮಣಪ್ಪ ಅವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ತುಮಕೂರು ವ್ಯಾಪ್ತಿಯಲ್ಲಿನ ರಾಜಕೀಯ ಬೆಳವಣಿಗೆಗಳು, ತಮ್ಮ ಮೇಲಿನ ಸುಳ್ಳು ಆರೋಪಗಳ ಬಗ್ಗೆ ಮುದ್ದ ಹನುಮೇಗೌಡ ಸ್ಪಷ್ಟನೆ ನೀಡಿದ್ದಾರೆ. ಜತೆಗೆ ಪಕ್ಷಕ್ಕಾಗಿ ಲೋಕಸಭಾ ಟಿಕೆಟ್‌ ತ್ಯಾಗ ಮಾಡಿರುವ ತಮ್ಮನ್ನು ಗುರುತಿಸಬೇಕು ಎಂದು ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Follow Us:
Download App:
  • android
  • ios