Asianet Suvarna News Asianet Suvarna News

ಸಿದ್ದು ಈಗ ಬಿಸಿತುಪ್ಪ! ಕಾಂಗ್ರೆಸ್‌, ಜೆಡಿಎಸ್‌ಗೆ ನುಂಗಲಾರದ ತುತ್ತು

ಹೀಗಾಗಿಯೇ ಸಿದ್ದರಾಮಯ್ಯ ಅವರನ್ನು ಹೇಗೆ ಸಮಾಧಾನಪಡಿಸಬೇಕು ಎಂಬ ಗೊಂದಲ ಕಾಂಗ್ರೆಸ್‌ ಹೈಕಮಾಂಡ್‌ ಹಾಗೂ ಜೆಡಿಎಸ್‌ ವರಿಷ್ಠರ ಮಟ್ಟದಲ್ಲಿ ಮೂಡಿದೆ ಎಂದು ಹೇಳಲಾಗುತ್ತಿದೆ.

Siddaramaiah unHappy Over Karnataka Politics

ಬೆಂಗಳೂರು :  ರಾಜ್ಯ ಸರ್ಕಾರದ ಅಸ್ತಿತ್ವ ಅಲುಗಾಡಿಸುವ ಮಟ್ಟಮುಟ್ಟಿದೆ ಎಂದೇ ಬಿಂಬಿಸಲಾಗುತ್ತಿರುವ ಸಿದ್ದು ಫ್ಯಾಕ್ಟರ್‌ ಅನ್ನು ನಿಭಾಯಿಸುವುದು ಹೇಗೆ ಎಂಬ ಚಿಂತೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ವರಿಷ್ಠರನ್ನು ಕಾಡುತ್ತಿರುವ ಸ್ಪಷ್ಟ ಲಕ್ಷಣಗಳು ಕಾಣತೊಡಗಿವೆ.

ಇದಕ್ಕೆ ಮುಖ್ಯ ಕಾರಣ ದಕ್ಷಿಣ ಕನ್ನಡ ಜಿಲ್ಲೆ ಧರ್ಮಸ್ಥಳ ಸಮೀಪದ ಉಜಿರೆಯ ಶಾಂತಿವನದಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಲೇ ಪರೋಕ್ಷವಾಗಿ ತಮ್ಮ ಅಸಮಾಧಾನ ಹೊರ ಹಾಕುತ್ತಿದ್ದ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ನ ದೊಡ್ಡ ಶಾಸಕರ ದಂಡು ಭೇಟಿಯಾಗಿರುವುದನ್ನು ಪರೋಕ್ಷ ಶಕ್ತಿ ಪ್ರದರ್ಶನ ಎಂದೇ ರಾಜಕೀಯವಾಗಿ ಪರಿಭಾವಿಸಲಾಗುತ್ತಿದೆ. ಒಂದು ವೇಳೆ ಶಕ್ತಿ ಪ್ರದರ್ಶನ ನಡೆಸುವುದೇ ಈ ಶಾಸಕರ ಪರೇಡ್‌ನ ಉದ್ದೇಶವಾಗಿದ್ದರೆ ಇದು ಮೈತ್ರಿಕೂಟ ಸರ್ಕಾರದಲ್ಲಿ ತಮ್ಮನ್ನು ನಿರ್ಲಕ್ಷಿಸುತ್ತಿರುವುದಕ್ಕೆ ಸಿದ್ದರಾಮಯ್ಯ ತೋರುತ್ತಿರುವ ಪ್ರತಿರೋಧ ಎಂಬುದು ನಿಸ್ಸಂಶಯ.

ಸಿದ್ದರಾಮಯ್ಯ ಅವರು ಇಂತಹ ಮನಸ್ಥಿತಿಗೆ ಮುಟ್ಟಿದ್ದರೆ ಅದು ಸರ್ಕಾರದ ಅಸ್ತಿತ್ವದ ಬಗ್ಗೆ ಪ್ರಶ್ನೆ ಮೂಡುವುದರಲ್ಲಿ ಸಂಶಯವಿಲ್ಲ. ಹೀಗಾಗಿಯೇ ಸಿದ್ದರಾಮಯ್ಯ ಅವರನ್ನು ಹೇಗೆ ಸಮಾಧಾನಪಡಿಸಬೇಕು ಎಂಬ ಗೊಂದಲ ಕಾಂಗ್ರೆಸ್‌ ಹೈಕಮಾಂಡ್‌ ಹಾಗೂ ಜೆಡಿಎಸ್‌ ವರಿಷ್ಠರ ಮಟ್ಟದಲ್ಲಿ ಮೂಡಿದೆ ಎಂದು ಹೇಳಲಾಗುತ್ತಿದೆ.

ನಿರ್ಲಕ್ಷಿಸಿದರೆ ಹುಷಾರು!:  

ಇದಕ್ಕೆ ಪೂರಕವಾಗಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಶಾಸಕರು ಸಹ, ಈ ಸರ್ಕಾರ ಅಸ್ತಿತ್ವಕ್ಕೆ ಬರಲು ಹಾಗೂ ಕಾಂಗ್ರೆಸ್‌ 80ರ ಸಮೀಪದ ಶಾಸಕರನ್ನು ಗೆಲ್ಲಿಸಿಕೊಳ್ಳುವಲ್ಲಿ ಸಿದ್ದರಾಮಯ್ಯ ಅವರ ಪಾತ್ರ ದೊಡ್ಡದಿದೆ. ಅವರು ಇಲ್ಲದಿದ್ದರೆ ಏನೂ ಇಲ್ಲ ಎನ್ನುವ ಮೂಲಕ ಸಿದ್ದರಾಮಯ್ಯ ಅವರನ್ನು ನಿರ್ಲಕ್ಷಿಸಿದರೆ ಏನೇನೂ ಇರುವುದಿಲ್ಲ ಎಂಬ ಸಂದೇಶವನ್ನು ರವಾನಿಸತೊಡಗಿದ್ದಾರೆ. ಇದು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ವರಿಷ್ಠರ ಪಾಲಿಗೆ ನುಂಗಲಾಗದ ತುಪ್ಪವಾಗಿ ಪರಿಣಮಿಸಿದೆ.

ಸಿದ್ದರಾಮಯ್ಯ ಅವರು ನೇರವಾಗಿ ಯಾವುದೇ ಅಧಿಕೃತ ಹೇಳಿಕೆ ನೀಡದಿದ್ದರೂ ಮೈತ್ರಿಕೂಟ ಸರ್ಕಾರದಲ್ಲಿನ ಬೆಳವಣಿಗೆಗಳ ಬಗ್ಗೆ ತಮಗೆ ಸಮಾಧಾನವಿಲ್ಲ ಎಂಬ ಸಂದೇಶವನ್ನು ಸ್ಪಷ್ಟವಾಗಿ ನೀಡಿದ್ದಾರೆ. ಇಂತಹ ಸಂದೇಶ ನೀಡಬಾರದು ಎಂದು ಕಟ್ಟುನಿಟ್ಟಾಗಿ ಅವರಿಗೆ ಹೇಳಲು ಏಕೆ ಮುಂದಾಗುತ್ತಿಲ್ಲ ಎಂಬುದು ಹಲವು ಕುತೂಹಲಗಳಿಗೆ ಕಾರಣವಾಗಿದೆ.

ಸಿದ್ದು ಆಕ್ಷೇಪಕ್ಕೇನು ಕಾರಣ?:

ಮೂಲಗಳ ಪ್ರಕಾರ ಸಿದ್ದರಾಮಯ್ಯ ಪ್ರಮುಖವಾಗಿ ಬಜೆಟ್‌ ಮಂಡನೆಯನ್ನು ಪ್ರಶ್ನಿಸುತ್ತಿದ್ದಾರೆ. ರಾಹುಲ್‌ ಗಾಂಧಿ ಅವರೇ ಬಜೆಟ್‌ ಮಂಡಿಸಲು ಒಪ್ಪಿಗೆ ನೀಡಿದ್ದರೂ ಸಿದ್ದರಾಮಯ್ಯ ಅವರು ಅದರ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸುವುದನ್ನು ನಿಲ್ಲಿಸಿಲ್ಲ. ಬಜೆಟ್‌ ಜತೆಗೆ ಸಾಲ ಮನ್ನಾ ಜಾರಿಗೊಳಿಸುವ ಕುಮಾರಸ್ವಾಮಿ ಅವರ ನಿರ್ಧಾರವನ್ನು, ರಾಜ್ಯದ ಹಣಕಾಸು ಸ್ಥಿತಿ ಹಾಗೂ ಹಿಂದಿನ ಕಾಂಗ್ರೆಸ್‌ ಸರ್ಕಾರ ಜಾರಿಗೊಳಿಸಿದ ಜನಪ್ರಿಯ ಯೋಜನೆಗಳ ಮೇಲೆ ಉಂಟಾಗುವ ಪರಿಣಾಮಗಳನ್ನು ಮುಂದಿಟ್ಟು ಪ್ರಶ್ನಿಸುತ್ತಿದ್ದಾರೆ.

ಅಷ್ಟೇ ಅಲ್ಲ, ತಮ್ಮ ಈ ಅಸಮಾಧಾನಕ್ಕೆ ನಿರ್ದಿಷ್ಟಕಾರಣಗಳನ್ನು ಸಿದ್ದರಾಮಯ್ಯ ನೀಡತೊಡಗಿದ್ದಾರೆ. ಇಂತಹ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಸಮನ್ವಯ ಸಮಿತಿ ಮುಂದೆ ಈ ವಿಚಾರ ಚರ್ಚೆಯಾಗಬೇಕಿತ್ತು ಎಂಬುದು ಸಿದ್ದರಾಮಯ್ಯ ಅವರ ವಾದ ಎನ್ನಲಾಗುತ್ತಿದೆ. ಮೈತ್ರಿಕೂಟ ಸರ್ಕಾರ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸಲು ವೀರಪ್ಪ ಮೊಯ್ಲಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಈ ಸಮಿತಿ ಎರಡು ಪಕ್ಷಗಳ ಪ್ರಣಾಳಿಕೆ ಕ್ರೋಡೀಕರಿಸಿ ವರದಿಯನ್ನು ನೀಡಲು ಸಜ್ಜಾಗಿದೆ. ಅದು ಬರುವವರೆಗೂ ಕಾಯದೇ ಬಜೆಟ್‌ ಹಾಗೂ ಸಾಲಮನ್ನಾ ನಿರ್ಧಾರವನ್ನು ಘೋಷಿಸಿದ ಕುಮಾರಸ್ವಾಮಿ ನಿಲುವು ಪ್ರಶ್ನಾರ್ಹವಲ್ಲವೇ ಎಂದು ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ನಾಯಕರನ್ನು ಪ್ರಶ್ನಿಸುತ್ತಿದ್ದಾರೆ.

ಸಮನ್ವಯ ಸಮಿತಿ ರಚನೆಯಾದ ನಂತರ ಪ್ರಮುಖ ನಿರ್ಧಾರಗಳ ಆ ಸಮಿತಿ ಮುಂದೆ ಚರ್ಚೆಯಾಗಬೇಕು. ಆದರೆ, ಬಹುತೇಕ ನಿರ್ಧಾರಗಳು ಏಕಪಕ್ಷೀಯವಾಗಿ ತೆಗೆದುಕೊಳ್ಳಲಾಗಿದೆ. ಸರ್ಕಾರದ ನಿರ್ಧಾರಗಳು ಮಾಧ್ಯಮದ ಮೂಲಕ ಸಮನ್ವಯ ಸಮಿತಿ ಸದಸ್ಯರಿಗೆ ಅರಿವಾಗುವಂತಹ ಪರಿಸ್ಥಿತಿ ಬಂದಿದೆ. ಅಂದರೆ, ಸಮನ್ವಯ ಸಮಿತಿಯನ್ನು ನಾಮ್‌ಕೇವಾಸ್ತೆ ಮಾಡುವ ಉದ್ದೇಶಪೂರ್ವಕ ಪ್ರಯತ್ನವಿದು. ಇದನ್ನು ಹೇಗೆ ಸಹಿಸುವುದು ಎಂದು ಸಿದ್ದರಾಮಯ್ಯ ಅವರ ಪ್ರಶ್ನೆ.

ಸಿದ್ದು ಸಮಾಧಾನಿಸಲು ಹೈಕಮಾಂಡ್‌ ತೊಳಲಾಟ:

ಬೆಂಗಳೂರು: ಅನೇಕ ಪ್ರಶ್ನೆಗಳನ್ನು ಮುಂದಿಡುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸರ್ಕಾರಕ್ಕೆ ಧಕ್ಕೆ ತರುವಂತೆ ಮಾತನಾಡಬೇಡಿ ಎಂದು ಹೇಗೆ ಹೇಳುವುದು ಎಂಬ ತೊಳಲಾಟ ಕಾಂಗ್ರೆಸ್‌ ಅನ್ನು ಕಾಡುತ್ತಿದೆ. ಆದರೆ, ಸಿದ್ದರಾಮಯ್ಯ ಅವರ ಈ ಪರೋಕ್ಷ ಬಂಡಾಯವನ್ನು ಶಮನ ಮಾಡದಿದ್ದರೆ ಅದು ಬೃಹತ್‌ ಆಗಿ ಬೆಳೆದು ಲೋಕಸಭೆ ಚುನಾವಣೆಗೂ ಮುನ್ನವೇ ವಿಕೋಪ ಮುಟ್ಟುವ ಎಲ್ಲಾ ಸಾಧ್ಯತೆಯಿದೆ ಎಂಬ ಅರಿವು ಕಾಂಗ್ರೆಸ್‌ ಹೈಕಮಾಂಡ್‌ಗೆ ಇದೆ.

ಹೀಗಾಗಿ ಅಸಮಾಧಾನವನ್ನು ಸರಿಪಡಿಸುವುದು ಹೇಗೆ ಎಂಬ ಪ್ರಶ್ನೆ ಕಾಂಗ್ರೆಸ್‌ ವರಿಷ್ಠರನ್ನು ಚಿಂತೆಗೀಡು ಮಾಡಿದೆ. ಮೂಲಗಳ ಪ್ರಕಾರ, ಸಮನ್ವಯ ಸಮಿತಿ ನಿರ್ಲಕ್ಷಿಸಲ್ಪಟ್ಟಿಲ್ಲ. ಅದಕ್ಕೂ ಅಧಿಕಾರವಿದೆ ಎಂಬ ಸಂದೇಶ ರವಾನೆಯಾಗುವಂತಹ ಬೆಳವಣಿಗೆಗಳು ನಡೆದರೆ ಕೆಲಕಾಲದ ಮಟ್ಟಿಗಾದರೂ ಸಿದ್ದರಾಮಯ್ಯ ಅವರನ್ನು ಶಾಂತಗೊಳಿಸಬಹುದು ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜೂ. 30ರಂದು ನಡೆಯಲಿರುವ ಸಮನ್ವಯ ಸಮಿತಿ ಸಭೆ ಅತ್ಯಂತ ಮಹತ್ವ ಪಡೆದುಕೊಂಡಿದೆ.

ಈ ಸಭೆಯಲ್ಲಿ ಬಜೆಟ್‌, ಸಾಲಮನ್ನಾ ಸೇರಿದಂತೆ ಮೈತ್ರಿಕೂಟ ಸರ್ಕಾರವನ್ನು ಕಾಡುತ್ತಿರುವ ಎಲ್ಲಾ ವಿಚಾರಗಳು ಚರ್ಚೆಗೆ ಬರಲಿದ್ದು, ಅಂದು ಹೊರಬೀಳುವ ಜಂಟಿ ಹೇಳಿಕೆ ಸರ್ಕಾರದ ಅಸ್ತಿತ್ವದ ಬಗೆಗೆ ಮೂಡಿರುವ ಪ್ರಶ್ನೆಗಳೆಂಬ ಕಾರ್ಮೋಡವನ್ನು ಕರಗಿಸಬಹುದು ಅಥವಾ ಆ ಕಾರ್ಮೋಡ ಮತ್ತಷ್ಟುದಟ್ಟವಾಗಿಸಲೀಬಹುದು ಎಂದು ಹೇಳಲಾಗುತ್ತಿದೆ.

Follow Us:
Download App:
  • android
  • ios