ತಮಿಳ್ನಾಡಿಗೆ ನೀರು ಬಿಟ್ಟರೆ ಕಾವೇರಿ ಜಲಾನಯನ ಪ್ರದೇಶದ ರೈತರು ಬೆಳೆಯುವ ಒಂದೇ ಒಂದು ಬೆಳೆಗೂ ನೀರಿರುವುದಿಲ್ಲ

ಬೆಂಗಳೂರು(ಸೆ.09): ತಮಿಳ್ನಾಡಿಗೆ ಕಾವೇರಿ ನೀರು ಬಿಡುವಂತೆ ಸುಪ್ರೀಂಕೋರ್ಟ್ ನೀಡಿರುವ ಮಧ್ಯಂತರ ತೀರ್ಪನ್ನು ವಿರೋಧಿಸಿ ರಾಜ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಾಗೂ ಉಂಟಾಗಿರುವ ಅಶಾಂತಿಯ ವಾತಾವರಣದ ಬಗ್ಗೆ ಪ್ರಧಾನಮಂತ್ರಿ ನರೇಂದ್ರಮೋದಿಗೆ ಪತ್ರ ಬರೆದಿರುವ ಸಿಎಂ ಸಿದ್ದರಾಮಯ್ಯ ಪರಿಸ್ಥಿತಿಯ ಮಾಹಿತಿ ನೀಡಿದ್ದಾರೆ.

ಸುಪ್ರೀಂಕೋರ್ಟ್ ‌ನ ತೀರ್ಪಿನಂತೆ ತಮಿಳ್ನಾಡಿಗೆ ನೀರು ಬಿಟ್ಟರೆ ಕಾವೇರಿ ಜಲಾನಯನ ಪ್ರದೇಶದ ರೈತರು ಬೆಳೆಯುವ ಒಂದೇ ಒಂದು ಬೆಳೆಗೂ ನೀರಿರುವುದಿಲ್ಲ, ಅಷ್ಟೇ ಅಲ್ಲ, ಬೆಂಗಳೂರಿನ ಜನರಿಗೆ ಕುಡಿಯಲೂ ನೀರು ಉಳಿಯುವುದಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ನೀರಿನ ಸಮಸ್ಯೆಗಳಿಂದ ನಡೆಯುತ್ತಿರುವ ಧರಣಿಗಳಿಂದ ಜನಸಾಮಾನ್ಯರ ಮೇಲೂ ಪರಿಣಾಮ ಬೀರಲಿದೆ. ಹೀಗಾಗಿ, ಒಕ್ಕೂಟ ವ್ಯವಸ್ಥೆಯ ಮುಖ್ಯಸ್ಥರಾಗಿ 3 ರಾಜ್ಯಗಳ ಸಿಎಂಗಳ ಸಭೆ ಕರೆದು ಸಮಸ್ಯಯೆ ಬಗೆಹರಿಸಬೇಕೆಂದು ಪ್ರಧಾನಿ ಮೋದಿಗೆ ಪತ್ರದಲ್ಲಿ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಪ್ರಧಾನಿಗೆ ಸಿಎಂ ಬರೆದಿರುವ ಪತ್ರದ ಸಾರಾಂಶ:

ಸುಪ್ರೀಂಕೋರ್ಟ್ ತೀರ್ಪಿನಂತೆ ತಮಿಳುನಾಡಿಗೆ ನೀರು ಬಿಟ್ಟರೆ ಕಾವೇರಿ ಜಲಾನಯನ ಪ್ರದೇಶದ ರೈತರು ಬೆಳೆಯುವ ಒಂದೇ ಬೆಳೆಗೂ ನೀರಿರುವುದಿಲ್ಲ. ಅಷ್ಟೇ ಅಲ್ಲ, ಬೆಮಗಳೂರಿನ ಜನರಿಗೆ ಕುಡಿಯಲೂ ನೀರು ಉಳಿಯುವುದಿಲ್ಲ.

ಮೆಟ್ಟೂರು ಡ್ಯಾಂನಲ್ಲಿ ಈಗಿರುವ ನೀರು ಹಾಗೂ ತಮಿಳ್ನಾಡಿಗೆ ಈಬಾರಿಯ ನಾರ್ಥ್ ಈಸ್ಟ್ ಮಳೆಯಿಂದ ಈ ಬಾರಿಯ ಸಾಂಬಾ ಬೆಳೆಗೆ ಹಾಗೂ ಮುಂದೆ ಮಾಡುವ ಬಿತ್ತನೆಗೂ ಈಗ ತಮಿಳ್ನಾಡಿನ ಡ್ಯಾಂನಲ್ಲಿರುವ ನೀರು ಸಾಕಾಗುತ್ತದೆ.

ಇದೇ ಸಪ್ಟೆಂಬರ್ ೬ರಂದು ನಡೆದ ಸರ್ವಪಕ್ಷ ಸಭೆಯಲ್ಲಿ ಬಿಜೆಪಿಯ ನಾಯಕರು ತಮಿಳ್ನಾಡಿಗೆ ನೀರು ಬಿಡದಂತೆ ಒತ್ತಾಯಿಸಿದ್ದರು. ಸುಪ್ರೀಂಕೋರ್ಟ್ ನ ಆದೇಶ ‌ಪಾಲಿಸಕೂಡದು‌ ಅನ್ನೋದು ಬಿಜೆಪಿ‌ ನಾಯಕರ ಅಭಿಪ್ರಾಯವಾಗಿತ್ತು , ಆದರೆ ರಾಜ್ಯದ ಸಾಂವಿಧಾನಿಕ ಮುಖ್ಯ ಕಾರ್ಯನಿರ್ವಾಹಕನಾಗಿ ನಾನು ಸುಪ್ರೀಂಕೋರ್ಟ್ ನ ಆದೇಶ ಪಾಲಿಸುವ ಹೊಣೆ ಹೊತ್ತಿದ್ದೇನೆ, ಈ ಹಿನ್ನೆಲೆಯಲ್ಲಿ ತಮಿಳ್ನಾಡಿಗೆ ನೀರು‌ ಬಿಡುಗಡೆ ಮಾಡಿದ್ದೇವೆ, ಇದರಿಂದ ರಾಜ್ಯದಲ್ಲಿ ಸಾಕಷ್ಟು ಅಸಮಾಧಾನ ಅಶಾಂತಿಯ ವಾತಾವರಣ ಉಂಟಾಗಿದೆ.

ರಾಜ್ಯದಲ್ಲಿ ತಲೆದೋರಿರುವ ಅಶಾಂತಿಯ ವಾತಾವರಣ ಹೀಗೆ ಮುಂದುವರಿದರೆ ರಾಜ್ಯದ ಆರ್ಥಿಕತೆಯ ಮೇಲೆ ಪರಿಣಾಮ ಬೀರಲಿದೆ. ಅಷ್ಟೇ ಅಲ್ಲ, ದೇಶಕ್ಕೆ ಅತೀಹೆಚ್ಚು ಆದಾಯ ತಂದುಕೊಡುವ ಮಾಹಿತಿ ತಂತ್ರಜ್ಞಾನ ದ ಆರ್ಥಿಕತೆಯ ಮೇಲೂ ಪರಿಣಾಮ ಉಂಟಾಗುತ್ತದೆ. ಅಷ್ಟೇ ಅಲ್ಲ, ರಾಜ್ಯದ ಬಹುತೇಕ ಭಾಗಗಳ ಜನಸಾಮಾನ್ಯರ ಜೀವನದ ಮೇಲೂ ಪರಿಣಾಮ ಬೀರಲಿದೆ

ಈ ಹಿನ್ನೆಲೆಯಲ್ಲಿ ತಮ್ಮಲ್ಲಿ ನನ್ನ ಮನವಿ ಏನೆಂದರೆ, ತಾವು ಪ್ರಧಾನಮಂತ್ರಿ ಯಾಗಿ ಅಷ್ಟೇ ಅಲ್ಲ, ಒಕ್ಕೂಟ ವ್ಯವಸ್ಥೆಯ ಮುಖ್ಯಸ್ಥರಾಗಿ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯಿರಿ.

೧೯೯೫ರಲ್ಲಿ ಇಂತಹುದೇ ಸನ್ನಿವೇಶ ಸೃಷ್ಟಿಯಾದಾಗ ಅಂದಿನ‌ ಪ್ರಧಾನಿ ಮಧ್ಯಸ್ಥಿಕೆಯಲ್ಲಿ ಎಲ್ಲ ಪಕ್ಷಗಳಿಗೂ ಸಮಾಧಾನವಾಗುವಂತೆ ವಿವಾದ ಇತ್ಯರ್ಥಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ತಾವು ಟೆಲಿಫೋನ್ ಅಥವಾ ಫ್ಯಾಕ್ಸ್ ಅಥವಾ ಈಮೇಲ್ ಮೂಲಕ ತುರ್ತಾಗಿ ಪ್ರತಿಕ್ರಿಯೆ ನೀಡುತ್ತೀರೆಂದು ನಂಬಿ‌ ಕಾದಿರುತ್ತೇನೆ

- ಸಿದ್ದರಾಮಯ್ಯ, ಸಿಎಂ.