* ಮೈಸೂರಿನಲ್ಲಿ ಎಚ್.ವಿಶ್ವನಾಥ್ ಸುದ್ದಿಗೋಷ್ಠಿ* ಸಿದ್ದರಾಮಯ್ಯನವರಿಂದ ಅಹಿಂದ ನಾಯಕರ ಮೂಲೆಗುಂಪು: ವಿಶ್ವನಾಥ್* ಕೋಮುಭಾವನೆ ಕೆರಳಿ ಲಾಭ ಮಾಡಿಕೊಳ್ಳಲು ಆರೆಸ್ಸೆಸ್ ಜೊತೆ ಸಿದ್ದು ಒಳಒಪ್ಪಂದ: ವಿಶ್ವನಾಥ್ ಆರೋಪ* ನೈತಿಕ ಹೊಣೆ ಹೊತ್ತು ಕೆ.ಜೆ.ಜಾರ್ಜ್ ರಾಜೀನಾಮೆ ಕೊಡಬೇಕೆಂದು ವಿಶ್ವನಾಥ್ ಆಗ್ರಹ

ಮೈಸೂರು(ಅ. 28): ಸಿದ್ದರಾಮಯ್ಯನವರು ಸಂಘಪರಿವಾರದವರನ್ನು ಬಳಸಿಕೊಂಡು ಡ್ರಾಮಾ ಮಾಡುತ್ತಿದ್ದಾರೆಂದು ಮಾಜಿ ಕಾಂಗ್ರೆಸ್ ಮುಖಂಡ ಎಚ್.ವಿಶ್ವನಾಥ್ ನೇರ ಆರೋಪ ಮಾಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಜೆಡಿಎಸ್ ನಾಯಕ ಎಚ್.ವಿಶ್ವನಾಥ್, ಆರೆಸ್ಸೆಸ್ ಜೊತೆ ಸಿದ್ದರಾಮಯ್ಯ ಒಳಒಪ್ಪಂದ ಮಾಡಿಕೊಂಡಿದ್ದಾರೆ ಎಂದೂ ಆಪಾದಿಸಿದ್ದಾರೆ.

"ಆರೆಸ್ಸೆಸ್, ಸಂಘ ಪರಿವಾರ ಮತ್ತು ದಿಲ್ಲಿಯ ಹಿರಿಯ ಬಿಜೆಪಿ ಮುಖಂಡರೊಂದಿಗೆ ಸಿದ್ದರಾಮಯ್ಯ ಇಂಟರ್ನಲ್ ಕನೆಕ್ಷನ್ ಹೊಂದಿದ್ದಾರೆ. ಪ್ರಮೋದ್ ಮುತಾಲಿಕ್, ಕಲ್ಲಡ್ಕ ಪ್ರಭಾಕರ್ ಭಟ್, ಜಗದೀಶ್ ಕಾರಂತ್ ಅವರನ್ನು ಬಳಸಿಕೊಂಡು ಡ್ರಾಮಾ ಮಾಡುತ್ತಿದ್ದಾರೆ. ಇವರೆಲ್ಲಾ ಮುಸ್ಲಿಮ್ ಕೋಮು ಭಾವನೆ ಕೆರಳಿಸುತ್ತಾರೆ. ಅದರಿಂದ ಮುಸ್ಲಿಮರು ಕಾಂಗ್ರೆಸ್ ಪಕ್ಷದ ಆಶ್ರಯ ಬೇಡುತ್ತಾರೆ. ಇದು ಎರಡು ರಾಷ್ಟ್ರೀಯ ಪಕ್ಷಗಳ ಗಿಮಿಕ್ ರಾಜಕೀಯ. ಕೋಮುಭಾವನೆ ವಿಚಾರವೇ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಹಿಡನ್ ಅಜೆಂಡಾ ಆಗಿದೆ," ಎಂದು ಮೈಸೂರಿನ ಹಿರಿಯ ರಾಜಕಾರಣಿಯೂ ಆಗಿರುವ ಎಚ್.ವಿಶ್ವನಾಥ್ ಅಭಿಪ್ರಾಯಪಟ್ಟಿದ್ದಾರೆ.

ಅಹಿಂದ ಹೆಸರಿನ ಎಲ್ಲಾ ನಾಯಕರನ್ನೂ ಸಿದ್ದರಾಮಯ್ಯ ಮೂಲೆಗುಂಪು ಮಾಡಿದ್ದಾರೆ. ಆದರೆ ಅಹಿಂದ ಹೆಸರು ಹೇಳಿಕೊಂಡು ಜನರಿಗೆ ಮಂಕುಬೂದಿ ಎರಚುತ್ತಿದ್ದಾರೆ ಎಂದು ಜೆಡಿಎಸ್ ನಾಯಕ ವಿಶ್ವನಾಥ್ ಟೀಕಿಸಿದ್ದಾರೆ.

"ಮುಸ್ಲಿಮ್ ಮುಖಂಡ ಇಕ್ಬಾಲ್ ಸಂಗಡಗಿಯನ್ನು ಸೋಲಿಸಿದ್ದು ನಿಮ್ಮ ಶಿಷ್ಯ ಬೈರತಿ ಸುರೇಶ್. ಕಮರುಲ್ ಇಸ್ಲಾಮ್ ಅವರನ್ನು ಯಾವ ರೀತಿ ನಡೆಸಿಕೊಂಡ್ತಿ ಎಂಬುದು ಗೊತ್ತಿದೆ," ಎಂದವರು ಹೇಳಿದ್ದಾರೆ.

"ಅಹಿಂದ ಎಂದು ಹೇಳಿಕೊಳ್ತೀರಲ್ಲ.. ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳಿಗೆ ನಿಮ್ಮ ಪಕ್ಷದಿಂದ ಎಷ್ಟು ಟಿಕೆಟ್ ಕೊಡ್ತೀರಾ?" ಎಂದು ವಿಶ್ವನಾಥ್ ಅವರು ಸಿದ್ದರಾಮಯ್ಯನವರಿಗೆ ನೇರ ಪ್ರಶ್ನೆ ಕೇಳಿದ್ದಾರೆ. ಕಾಂಗ್ರೆಸ್ ಸರಕಾರದ ಧೋರಣೆಯಿಂದ ಬೇಸತ್ತಿರುವ ಅಹಿಂದ ಸಮುದಾಯ ಈ ಬಾರಿ ಜೆಡಿಎಸ್'ಗೆ ಬೆಂಬಲ ನೀಡುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜಾರ್ಜ್ ರಾಜೀನಾಮೆಗೆ ಆಗ್ರಹ:
ಜೆಡಿಎಸ್ ಮುಖಂಡ ಎಚ್.ವಿಶ್ವನಾಥ್ ಇದೇ ವೇಳೆ ಸಚಿವ ಕೆ.ಜೆ.ಜಾರ್ಜ್ ಅವರ ರಾಜೀನಾಮೆಗೆ ಆಗ್ರಹಿಸಿದ್ದಾರೆ. "ಡಿವೈಎಸ್ಪಿ ಗಣಪತಿ ಪ್ರಕರಣದಲ್ಲಿ ನೈತಿಕ ಹೊಣೆ ಹೊತ್ತು ಜಾರ್ಜ್ ರಾಜೀನಾಮೆ ಕೊಡಬೇಕು. ಪ್ರಕರಣದ ತನಿಖೆ ನಡೆಸುವಂತೆ ಸುಪ್ರೀಂಕೋರ್ಟ್ ಸಿಬಿಐಗೆ ನಿರ್ದೇಶನ ನೀಡಿದೆ. ಜಾರ್ಜ್'ರಿಂದ ರಾಜೀನಾಮೆ ಪಡೆಯದೇ ಸಿಎಂ ನ್ಯಾಯಾಲಯಕ್ಕೆ ಅಗೌರವ ತಂದಿದ್ದಾರೆ. ಸಿದ್ದರಾಮಯ್ಯ ಕೂಡ ವಕೀಲರಾಗಿದ್ದರು. ಅವರಿಗೆ ಇದು ತಿಳಿಯದೇ?" ಎಂದು ವಿಶ್ವನಾಥ್ ಕುಟುಕಿದ್ದಾರೆ.

ಬಿಜೆಪಿಯವರೂ ಕೂಡ ಜೈಲಿನಲ್ಲಿದ್ದರು, ಅವರ ವಿರುದ್ಧವೂ ಸಿಬಿಐ ಎಫ್'ಐಆರ್ ಹಾಕಿತ್ತು ಎಂದೆಲ್ಲಾ ಸಿಎಂ ಸಮರ್ಥನೆ ಮಾಡಿಕೊಳ್ಳೋದು ತಪ್ಪು. ಸಿದ್ದರಾಮಯ್ಯ ಅವರೇನೂ ತನಿಖಾಧಿಕಾರಿಯಲ್ಲ, ಎಂದು ಎಚ್.ವಿಶ್ವನಾಥ್ ಟೀಕಿಸಿದ್ದಾರೆ.