ಮಡಿಕೇರಿ[ಆ.31]: ಏನ್‌ ಎಲ್ಲರಿಗೂ ಮೂರು, ಮೂರು ತಾಯಿಯರು ಇರ್ತಾರೆನ್ರಿ...? ಎಲ್ಲರೂ ಒಂದೇ ತಾಯಿಗೆ ಹುಟ್ಟೋದು. ಗುಲಾಮಗಿರಿ ರಾಜಕೀಯ ಮಾಡೋವರೆಗೂ ಒಂದೇ ಪಕ್ಷದಲ್ಲಿ ಇರ್ತಾರೆ. ಸ್ವಾಭಿಮಾನಿ ರಾಜಕೀಯ ಮಾಡುವವರು ಆ ರೀತಿ ಇರಲು ಸಾಧ್ಯವಿಲ್ಲ ಎನ್ನುವ ಮೂಲಕ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ವಿರಾಜಪೇಟೆ ತಾಲೂಕಿನ ಕರಡಿಗೋಡಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸ್ವಾಭಿಮಾನ ಇರುವವರು ಒಂದೇ ಪಕ್ಷಕ್ಕೆ ಅಂಟಿಕೊಂಡಿರುವುದಿಲ್ಲ ಎಂದು ಗುಡುಗಿದರು. ಇದಕ್ಕೂ ಮುನ್ನ ಈಶ್ವರಪ್ಪನ ಹೇಳಿಕೆಗೆ ನಾನು ಉತ್ತರ ನೀಡಲ್ಲ, ಆತ ಸುಸಂಸ್ಕೃತನಲ್ಲ, ಬಾಯಿಗೆ ಬಂದಾಗೆ ಮಾತನಾಡುತ್ತಾನೆ. ಮಾತಿನ ಮಹತ್ವದ ಬಗ್ಗೆ ಅರಿವಿಲ್ಲದವರ ಬಗ್ಗೆ ತಲೆಕೆಡಿಸಕೊಳ್ಳವುದು ಬೇಡ ಎಂದರು.

Video: ಸಿದ್ದರಾಮಯ್ಯ ವಿರುದ್ಧ ಮತ್ತೆ ನಾಲಿಗೆ ಹರಿಬಿಟ್ಟ ಈಶ್ವರಪ್ಪ

ನನ್ನನ್ನು ಸೋಲಿಸಿದವರು ಅವರಲ್ಲ:

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಮತದಾರರು ನನ್ನನ್ನು ತಿರಸ್ಕರಿಸುವ ಮೂಲಕ ಸೋಲಿಸಿದ್ದಾರೆಯೇ ವಿನಃ ಅನರ್ಹ ಶಾಸಕ ಎಚ್‌. ವಿಶ್ವನಾಥ್‌, ಸಂಸದ ವಿ. ಶ್ರೀನಿವಾಸಪ್ರಸಾದ್‌, ಶಾಸಕ ಜಿ.ಟಿ. ದೇವೇಗೌಡರಿಂದ ನಾನು ಸೋತಿಲ್ಲ, ನನ್ನ ಮತದಾರರ ತೀರ್ಪಿಗೆ ತಲೆ ಬಾಗುತ್ತೇನೆ. ಚುನಾವಣೆಯಲ್ಲಿ ನಾನು ಸೋತಿದ್ದರಿಂದ ಕ್ಷೇತ್ರದ ಜನತೆಗೆ ತಪ್ಪಿನ ಅರಿವು ಆಗಿದೆ, ನನಗೂ ನೋವಾಗಿದೆ. ಏನು ಮಾಡಲು ಆಗಲ್ಲ ಬಿಡಿ ಎಂದರು.

ವ್ಯಾಯಾಮ ಮಾಡಬೇಡಮ್ಮ:

ನೆರ ಪರಿಶೀಲನೆ ವೇಳೆ ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಸುಮಯ್ಯಾ ಅವರು ತೋರದಲ್ಲಿ ಕೆಸರಿನಲ್ಲಿ ಕಾಲು ಜಾರಿದಾಗ ‘ಜೋಪಾನ ಅಮ್ಮಾ ಇಲ್ಲಿ ವ್ಯಾಯಾಮ ಮಾಡಬೇಡ ಮನೆಗೆ ಹೋಗಿ ಮಾಡು’ ಎಂದು ನಗೆ ಚಟಾಕಿ ಹಾರಿಸಿದರು. ಸಿದ್ದರಾಮಯ್ಯ ಜತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಜನ ಮುಗಿಬಿದ್ದರು.