ಸಿಎಂ  ಸಿದ್ದರಾಮಯ್ಯ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ರಾಜಕೀಯ ಜಿದ್ದಾಜಿದ್ದಿಗೆ ನಂಜನಗೂಡು ಕ್ಷೇತ್ರದ ಬೈ ಎಲೆಕ್ಷನ್ ವೇದಿಕೆಯಾಗಿದೆ. ಇಬ್ಬರೂ ಒಂದೇ ತಾಲೂಕಿನಲ್ಲಿ ಪ್ರಚಾರ ಕಾರ್ಯ ಆರಂಭಿಸುವ ಮೂಲಕ ಬೈ ಎಲೆಕ್ಷನ್ ಕದನ ಮತ್ತಷ್ಟು ಕಾವೇರಲಿದೆ ಎನ್ನುವುದನ್ನು ಸಾಬೀತು ಮಾಡಿದ್ದಾರೆ.

ಮೈಸೂರು(ಮಾ.13): ಸಿಎಂ ಸಿದ್ದರಾಮಯ್ಯ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ರಾಜಕೀಯ ಜಿದ್ದಾಜಿದ್ದಿಗೆ ನಂಜನಗೂಡು ಕ್ಷೇತ್ರದ ಬೈ ಎಲೆಕ್ಷನ್ ವೇದಿಕೆಯಾಗಿದೆ. ಇಬ್ಬರೂ ಒಂದೇ ತಾಲೂಕಿನಲ್ಲಿ ಪ್ರಚಾರ ಕಾರ್ಯ ಆರಂಭಿಸುವ ಮೂಲಕ ಬೈ ಎಲೆಕ್ಷನ್ ಕದನ ಮತ್ತಷ್ಟು ಕಾವೇರಲಿದೆ ಎನ್ನುವುದನ್ನು ಸಾಬೀತು ಮಾಡಿದ್ದಾರೆ.

ನಂಜನಗೂಡು ಕ್ಷೇತ್ರದ ಉಪ ಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರು ಭರ್ಜರಿ ಪ್ರವಾಸ ಆರಂಭಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನಂಜನಗೂಡು ಪಟ್ಟಣದಲ್ಲಿ ರೋಡ್​ ಶೋ ನಡೆಸಿದರೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನಂಜನಗೂಡು ತಾಲೂಕಿನ ದೇವನೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ ಭರ್ಜರಿ ಪ್ರಚಾರ ನಡೆಸಿದರು. ಇದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಯಡಿಯೂರಪ್ಪ, ಸಿಎಂ ಸಿದ್ದರಾಮಯ್ಯನವರ ಅಧರ್ಮದ ಆಡಳಿತಕ್ಕೆ ಧರ್ಮದ ರೀತಿಯಲ್ಲೇ ಉತ್ತರ ಕೊಡ್ತೇವೆ ಇವರ ದರೋಡೆಕೋರತನಕ್ಕೆ ಬೈ ಎಲೆಕ್ಷನ್ ಫಲಿತಾಂಶ ತಕ್ಕ ಪಾಠ ಆಗುತ್ತೆ ಅಂತಾ ಕೆಂಡಕಾರಿದರು.

ಇನ್ನು ಯಡಿಯೂರಪ್ಪ ಆರೋಪಕ್ಕೆ ಮೈಸೂರಿನಲ್ಲೇ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ, ಇವರೇನು ಧರ್ಮಾಧಿಕಾರಿಯೇ. ಇನ್ನೊಂದು ಜನ್ಮ ಬಂದರು ಇವರ ಪಾಪ ಮುಗಿಯೋದಿಲ್ಲ ಅಂತಾ ಟಾಂಗ್ ನೀಡಿದರು. ಬಳಿಕ ಸಿಎಂ ಸಿದ್ದರಾಮಯ್ಯ ಮೈಸೂರಿನ ಚಾಮುಂಡಿಬೆಟ್ಟ ತಪ್ಪಲಲ್ಲಿರುವ ಸುತ್ತೂರು ಮಠಕ್ಕೆ ಭೇಟಿ ಕೊಟ್ಟು ಶ್ರೀಗಳ ಆಶೀರ್ವಾದ ಪಡೆದರು. ಬೈ ಎಲೆಕ್ಷನ್ ತಲೆ ಬಿಸಿಯಲ್ಲಿರುವ ಸಿಎಂಗೆ ಸ್ವಪಕ್ಷೀಯರ ಟೀಕೆಗಳು ಇನ್ನಷ್ಟು ಕಂಗೆಡಿಸಿದೆ. ಗುಂಡ್ಲುಪೇಟೆ, ನಂಜನಗೂಡು ಬೈ ಎಲೆಕ್ಷನ್ ಗೆ ಕಾಂಗ್ರೆಸ್ ಸಿದ್ಧಪಡಿಸಿರುವ ಪ್ರಚಾರ ಪೋಸ್ಟರ್ ಮತ್ತು ಜಾಹೀರಾತಿನಲ್ಲಿ ಮಾಜಿ ಸಂಸದ್ ಎಚ್.ವಿಶ್ವನಾಥ್ ಫೋಟೋ ಕೈಬಿಟ್ಟಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಒಟ್ಟಾರೆ ‘ನಂಜನಗೂಡು ಬೈ ಎಲೆಕ್ಷನ್ ಆಡಳಿತ-ವಿಪಕ್ಷಕ್ಕೆ ಪ್ರತಿಷ್ಠೆಯ ಕಣವಾಗಿರುವುದು ಪ್ರಚಾರ ಆರಂಭವಾದ ಮೊದಲ ದಿನವೇ ಸಾಬೀತಾಗಿದೆ. ಇನ್ನು ಸ್ವಪಕ್ಷೀಯರ ವಿರೋಧ ಕಟ್ಟಿಕೊಂಡಿರುವ ಸಿದ್ದರಾಮಯ್ಯ ಬೈ ಎಲೆಕ್ಷನ್ ಹೇಗೆ ನಿಭಾಯಿಸುತ್ತಾರೆ ಅನ್ನೋದನ್ನ ಕಾದುನೋಡಬೇಕಿದೆ.