. ಮಠದಲ್ಲಿಯೇ ಶ್ರೀಗಳಿಗೆ 5 ಜನ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದ್ದರು. ಶ್ರೀಗಳ ಶ್ವಾಸಕೋಶ, ಜಠರ ಹಾಗೂ ಮೂತ್ರದಲ್ಲಿ ಸೋಂಕು ಇರುವ ಶಂಕೆಯಿದ್ದು ರಕ್ತದ ಮಾದರಿಯನ್ನು ನಿನ್ನೆಯೇ ಬಿಜಿಎಸ್ ಆಸ್ಪತ್ರೆಗೆ ಕಳುಹಿಸಲಾಗಿತ್ತು. ನಂತರವಷ್ಟೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು.
ಬೆಂಗಳೂರು(ಮೇ.12): ಅನಾರೋಗ್ಯದ ಕಾರಣದಿಂದ ನಗರದ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಡೆದಾಡುವ ದೇವರು ಎಂದೇ ಲೋಕ ಪ್ರಸಿದ್ಧರಾದ ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಶಸ್ತ್ರಚಿಕಿತ್ಸೆಗೆ ಒಪ್ಪಿಗೆ ಸೂಚಿಸಿದ್ದಾರೆ.
ಆಸ್ಪತ್ರೆಯಲ್ಲೇ ಶ್ರೀಗಳ ಇಷ್ಟಲಿಂಗ ಪೂಜೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ಕೆಲವು ದಿನಗಳಿಂದ ಜ್ವರ ಹಾಗೂ ನಿಶಕ್ತಿ ಕಾಣಿಸಿಕೊಂಡ ಕಾರಣ ಶ್ರೀಗಳ ಆರೋಗ್ಯದಲ್ಲಿ ಕೊಂಚಮಟ್ಟಿಗೆ ಏರುಪೇರು ಉಂಟಾಗಿತ್ತು. ಮಠದಲ್ಲಿಯೇ ಶ್ರೀಗಳಿಗೆ 5 ಜನ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದ್ದರು. ಶ್ರೀಗಳ ಶ್ವಾಸಕೋಶ, ಜಠರ ಹಾಗೂ ಮೂತ್ರದಲ್ಲಿ ಸೋಂಕು ಇರುವ ಶಂಕೆಯಿದ್ದು ರಕ್ತದ ಮಾದರಿಯನ್ನು ನಿನ್ನೆಯೇ ಬಿಜಿಎಸ್ ಆಸ್ಪತ್ರೆಗೆ ಕಳುಹಿಸಲಾಗಿತ್ತು. ನಂತರವಷ್ಟೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು.
ಸ್ವಾಮೀಜಿ ಅವರನ್ನು ಎಂಡೋಸ್ಕೋಪೊ ಪರೀಕ್ಷೆಗಾಗಿ ಆಪರೇಷನ್ ಥಿಯೇಟರ್ಗೆ ಶಿಫ್ಟ್ ಮಾಡಲಾಗಿದ್ದು, ಗ್ಯಾಸ್ಟ್ರೋ ಎಂಟಾಲಾಜಿಸ್ಟ್ ಡಾ.ಆದರ್ಶ್, ಡಾ.ರವೀಂದ್ರ ಅವರು ಚಿಕಿತ್ಸೆ ನೀಡುತ್ತಿದ್ದಾರೆ. ಬಿಜಿಎಸ್ ಆಸ್ಪತ್ರೆ ಸುತ್ತ ಭಾರೀ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಶ್ರೀಗಳ ಆರೋಗ್ಯದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ದೂರವಾಣಿಯಲ್ಲಿ ವಿಚಾರಿಸಿದ್ದು, ಇಂದು ಸಂಜೆ 6 ಗಂಟೆ ಸುಮಾರಿಗೆ ಭೇಟಿ ನೀಡುವ ಸಾಧ್ಯತೆಯಿದೆ.
