Asianet Suvarna News Asianet Suvarna News

ಎಂ.ಬಿ.ಪಾಟೀಲ್‌ ಮಂತ್ರಿಗಿರಿಗೆ ಶಾಮನೂರು ಬಣ ವಿರೋಧ

ಜೆಡಿಎಸ್‌ನೊಂದಿಗೆ ಕೈ ಜೋಡಿಸಿದ ಕಾಂಗ್ರೆಸ್, ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಸರಕಾರ ರಚಿಸಲು ಸಜ್ಜಾಗಿದೆ. ಆದರೆ, ಈಗಾಗಲೇ ಸೀಟು ಹಂಚಿಕೆಯಲ್ಲಿ ಎರಡು ಪಕ್ಷಗಳ ನಡುವೆ ಹಗ್ಗ ಜಗ್ಗಾಟವೂ ಆರಂಭವಾಗಿದೆ. ಅಷ್ಟೇ ಅಲ್ಲ, ಕಾಂಗ್ರೆಸ್‌ ಪಕ್ಷದೊಳಗೇ ನಾಯಕರು ಸಚಿವ ಸ್ಥಾನಕ್ಕಾಗಿ ಗುದ್ದಾಡುತ್ತಿದ್ದು, ಈಗಲೇ ಒಬ್ಬರ ಕಾಲನ್ನು ಮತ್ತೊಬ್ಬರು ಎಳೆಯಲು ಆರಂಭಿಸಿದ್ದಾರೆ.

Shyamanuru Shivashankarappa opposes  berth to M B Patil

ಬೆಂಗಳೂರು: ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿನ ಸಚಿವರಲ್ಲಿನ ಒಡಕು ಈಗಲೂ ಮುಂದುವರೆದಿದ್ದು, ಲಿಂಗಾಯತ ಧರ್ಮದ ಪರ ನಿಂತಿದ್ದ ಮಾಜಿ ಸಚಿವ ಎಂ.ಬಿ.ಪಾಟೀಲರನ್ನು ಯಾವುದೇ ಕಾರಣಕ್ಕೂ ಹೊಸ ಸರ್ಕಾರದಲ್ಲಿ ಸಚಿವರನ್ನಾಗಿ ಮಾಡಬಾರದು ಎಂಬ ಆಗ್ರಹ ಮಾಡುವ ಮಟ್ಟಕ್ಕೆ ಮುಟ್ಟಿದೆ.

ಲಿಂಗಾಯತ ಧರ್ಮದ ಪರ ನಿಂತು ವೀರಶೈವ-ಲಿಂಗಾಯತ ಸಮುದಾಯದಲ್ಲಿ ಬಿರುಕು ಹುಟ್ಟುಹಾಕುವ ಎಂ.ಬಿ.ಪಾಟೀಲರ ಯತ್ನದಿಂದ ಪಕ್ಷಕ್ಕೆ ಸಾಕಷ್ಟುಹಾನಿಯಾಗಿದೆ. ಹೀಗಾಗಿ ಅವರನ್ನು ಹೊಸ ಸರ್ಕಾರದಲ್ಲಿ ಸಚಿವರನ್ನಾಗಿ ಮಾಡಿದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆ ಮಾಡಿದಂತಾಗುತ್ತದೆ. ಹೀಗಾಗಿ ಅವರನ್ನು ಸಚಿವರನ್ನಾಗಿ ಮಾಡಬಾರದು ಎಂದು ಲಿಂಗಾಯತ ಶಾಸಕರ ಸಮೂಹವೊಂದು ಕಾಂಗ್ರೆಸ್‌ ನಾಯಕರ ಮೇಲೆ ಒತ್ತಡ ನಿರ್ಮಾಣ ಮಾಡಿದೆ.

ಶಾಮನೂರು ಶಿವಶಂಕರಪ್ಪ ಅವರನ್ನು ಡಿಸಿಎಂ ಮಾಡಬೇಕು ಎಂದು ಆಗ್ರಹ ಮಾಡುತ್ತಿರುವ ಗುಂಪೇ ಎಂ.ಬಿ.ಪಾಟೀಲರಿಗೆ ಸಚಿವ ಸ್ಥಾನವನ್ನೂ ನೀಡಬಾರದು ಎಂದು ಒತ್ತಾಯ ಮಾಡುತ್ತಿದೆ. ಅದರಲ್ಲೂ ವಿಶೇಷವಾಗಿ ಎಂ.ಬಿ.ಪಾಟೀಲರ ಜಿಲ್ಲೆಯಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿರುವ ಶಾಸಕರಂತೂ ಪಾಟೀಲರ ವಿರುದ್ಧ ಕೆಂಡಾಮಂಡಲಗೊಂಡಿದ್ದು, ಒಂದು ವೇಳೆ ಅವರನ್ನು ಸಚಿವರನ್ನಾಗಿಸಿದರೆ ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಬೆದರಿಕೆಯನ್ನು ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ಹೈಕಮಾಂಡ್‌ ಮಟ್ಟದಲ್ಲಿ ಪ್ರಭಾವಿಯಾಗಿರುವ ಎಂ.ಬಿ.ಪಾಟೀಲರು ಮಾತ್ರ ನೇರವಾಗಿ ಡಿಸಿಎಂ ಪದವಿಯ ಮೇಲೆ ಕಣ್ಣಿಟ್ಟಿದ್ದು, ಅದಕ್ಕಾಗಿ ತೀವ್ರ ಲಾಬಿ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.
 

Follow Us:
Download App:
  • android
  • ios