ನವದೆಹಲಿ(ಜ.09): ಕಳಪೆ ಆಹಾರ ಹಾಗೂ ತಮಗೆ ನೀಡುತ್ತಿರುವ ಸೌಲಭ್ಯದ ಕುರಿತಾದ ಕರಾಳ ಸತ್ಯವನ್ನು ತೇಜ್ ಬಹದ್ದೂರ್ ಯಾದವ್ ಎಂಬ BSF ಯೋಧನೊಬ್ಬ ಸಾಮಾಜಿಕ ಜಾತಾಣಗಳಲ್ಲಿ ವಿಡಿಯೋ ಸಮೇತ ಬಿಚ್ಚಿಟ್ಟಿದ್ದಾರೆ. ಇವರು ಶೇರ್ ಮಾಡಿರುವ ಮೂರು ವಿಡಿಯೋಗಳಲ್ಲಿ ಗಡಿ ಕಾಯುವ ಯೋಧರಿಗೆ ನೀಡುತ್ತಿರುವ ಆಹಾರದ ದೃಶ್ಯಗಳಿದ್ದು, ನೋಡುಗರಿಗೆ ಶಾಕ್ ತಗುಲುವಂತೆ ಮಾಡುತ್ತವೆ. ಇನ್ನು ಈ ಯೋಧ ಶೇರ್ ಮಾಡಿರುವ ಒಂದು ವಿಡಿಯೋದಲ್ಲಿ ತಾನು ಇದನ್ನು ಯಾಕೆ ಹಂಚಿಕೊಂಡಿದ್ದೇನೆ ಎಂಬುವುದನ್ನೂ ಸ್ಪಷ್ಟಪಡಿಸಿದ್ದಾರೆ. ಅವರ ಮಾತುಗಳು ಯೋಧನೊಬ್ಬ ಸಾವನ್ನಪ್ಪಿದಾಗ ಪೋಸ್ಟ್ ಶೇರ್ ಮಾಡಿ ದೇಶ ಭಕ್ತಿ ವ್ಯಕ್ತಪಡಿಸುವವರಿಗೆ ತಾಕುವಂತಿದೆ. ಹಾಗಾದರೆ ಆತ ಹೇಳಿದ್ದೇನು?

ಹಿಮದಿಂದ ಆವೃತವಾದ ಗಡಿ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ತೇಜ್ ಬಹದ್ದೂರ್ ಯಾದವ್

'ದೇಶವಾಸಿಗಳಿಗೆ ನನ್ನ ನಮನ, ಈ ಮುಕಾಂತರ ನಿಮಲ್ಲೊಂದು ನನ್ನ ಮನವಿ. ನಾನು BSF-32 ಬಟಾಲಿಯನ್'ನಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಇಲ್ಲಿ ನಾವು ಬೆಳಿಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ದಿನವಿಡೀ ಹಿಮದ ಮಧ್ಯೆ ನಿಂತು ಗಡಿ ರಕ್ಷಿಸುತ್ತೇವೆ. ಮಳೆ ಹಾಗೂ ಹಿಮದ ಹಾಗೂ ಬಿರುಗಾಳಿಯ ನಡುವೆಯೂ ನಾವು ದೇಶ ಕಾಯುವ ಕಾಯಕವನ್ನು ಮಾಡುತ್ತಿದ್ದೇವೆ. ಈಗಿರುವ ವಾತಾವರಣವನ್ನು ಈ ವಿಡಿಯೋದಲ್ಲಿ ನೀವೂ ನೋಡಬಹುದು ಇದನ್ನು ಕಂಡು ನಿಮಗೆ ಖುಷಿಯಾಗಬಹುದು ಆದರೆ ಇಲ್ಲಿ ನಮಗಿರುವ ಕಷ್ಟವನ್ನು ಯಾವುದೇ ಮಾಧ್ಯಮವಾಗಲಿ, ರಾಜಕಾರಣಿಯಾಗಲಿ ಕೇಳುವುದಿಲ್ಲ. ಇದಾದ ಬಳಿಕ ನಾನು ನಿಮಗೆ ಇನ್ನೂ ಮೂರು ವಿಡಿಯೋಗಳನ್ನು ಕಳುಹಿಸುತ್ತೇನೆ ಇದನ್ನು ನೀವು ದೇಶದ ಪ್ರತಿಯೊಂದು ಮಾಧ್ಯಮ ಹಾಗೂ ರಾಜಕಾರಣಿಗಳಿಗೆ ತೋರಿಸಬೇಕೆಂದು ನನ್ನ ಬಯಕೆಯಾಗಿದೆ. ಇಲ್ಲಿ ನಮ್ಮ ಅಧಿಕಾರಿಗಳು ನಮ್ಮ ಮೇಲೆ ಯಾವ ರೀತಿ ಅನ್ಯಾಯ ಮಾಡುತ್ತಾರೆ ಎಂಬುವುದು ಅದರಲ್ಲಿ ಸ್ಪಷ್ಟವಾಗುತ್ತದೆ. ನಾನು ಸರ್ಕಾರವನ್ನು ದೂಷಿಸುವುದಿಲ್ಲ, ಯಾಕೆಂದರೆ ಸರ್ಕಾರ ಪ್ರತಿಯೊಂದನ್ನು ನೀಡುತ್ತಿದೆ ಆದರೆ ಹಿರಿಯ ಅಧಿಕಾರಿಗಳು ಅದು ನಮಗೆ ತಲುಪಲು ಬಿಡದೆ ಎಲ್ಲವನ್ನೂ ತಮಗೇ ಇಟ್ಟುಕೊಳ್ಳುತ್ತಾರೆ. ಹೀಗಾಗಿ ಇಲ್ಲಿ ನಾವಿಷ್ಟು ಕಷ್ಟ ಅನುಭವಿಸುತ್ತಿದ್ದರೂ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಬಹಳಷ್ಟು ಬಾರಿ ಇಲ್ಲಿರುವ ಯೋಧರು ಊಟವಿಲ್ಲದೆ, ಹಸಿವಿನಿಂದ ಮಲಗಿಕೊಳ್ಳಬೇಕಾಗುತ್ತದೆ. ಬೆಳಿಗ್ಗೆ ಸಿಗುವ ಉಪಹಾರವನ್ನು ನಾನು ನಿಮಗೆ ತೋರಿಸುತ್ತೇನೆ, ನಮಗೆ ಸಿಗುವುದು ಒಂದು ಒಣ ಪರೋಟ. ಇದರೊಂದಿಗೆ ತಿನ್ನಲು ಉಪ್ಪಿನಕಾಯಿ, ಪಲ್ಯ ಏನೂ ಇಲ್ಲ. ಮಧ್ಯಾಹ್ನ ಸಿಗುವ ಊಟದ ಕುರಿತಾಗಿ ಹೇಳಬೇಕೆಂದರೆ ಇಲ್ಲಿ ಸಿಗುವ ಸಾರಿನಲ್ಲಿ ಕೇವಲ ಉಪ್ಪು ಹಾಗೂ ಬೇಳೆ ಕಂಡು ಬರುತ್ತದೆ ಇದೆಲ್ಲವನ್ನೂ ನಾನು ನಿಮಗೆ ತೋರಿಸುತ್ತೇನೆ. ಆದರೆ ಮತ್ತೊಮ್ಮೆ ಭಾರತ ಸರ್ಕಾರ ನಮಗಾಗಿ ಎಲ್ಲವನ್ನೂ ನೀಡುತ್ತಿದೆ, ಇಲ್ಲಿನ ಸ್ಟೋರ್ ತುಂಬಿ ತುಳುಕುತ್ತಿದೆ ಆದರೆ ಬಂದ ಸಾಮಾನು ಮಾರುಕಟ್ಟೆಗೆ ಹೋಗುತ್ತಿದೆ. ಇದು ಹೇಗಾಗುತ್ತದೆ, ಯಾರಿದನ್ನು ಮಾರುತ್ತಿದ್ದಾರೆ ಎಂಬುವುದು ನನಗೆ ತಿಳಿದಿಲ್ಲ. ಮಾನ್ಯ ಪ್ರಧಾನ ಮಂತ್ರಿಯಲ್ಲೂ ನನ್ನದೊಂದು ವಿನಂತಿ, ದಯವಿಟ್ಟು ಈ ಕುರಿತಾಗಿ ತನಿಖೆ ನಡೆಸಿ. ಗೆಳೆಯರೇ ಈ ವಿಡಿಯೋ ಹಾಕಿದ ಬಳಿಕ ನಾನು ಇರುತ್ತೇನೋ ಇಲ್ಲವೋ ತಿಳಿಯದು. ಯಾಕೆಂದರೆ ಇದರಲ್ಲಿ ಅಧಿಕಾರಿಗಳ ಬಹುದೊಡ್ಡ ಕೈವಾಡವಿದೆ. ಅವರು ನನಗೆ ಏನು ಬೇಕಾದರೂ ಮಾಡಬಹುದು, ಇಲ್ಲಿ ಏನು ಬೇಕಾದರೂ ನಡೆಯುವ ಸಾಧ್ಯತೆ ಇದೆ. ಹೀಗಾಗಿ ಈ ವಿಡಿಯೋವನ್ನು ಸಾಧ್ಯವಾದಷ್ಟು ಹೆಚ್ಚು ಶೇರ್ ಮಾಡಿಕೊಳ್ಳಿ ಈ ಮೂಲಕ ಮಾಧ್ಯಮಗಳೂ ಯೋಧರ ಕಷ್ಟವನ್ನು ಜನರಿಗೆ ತೋರಿಸಲಿ. ಧನ್ಯವಾದಗಳು.. ಜೈ ಹಿಂದ್'

ಬಳಿಕ ಇವರು ಇನ್ನೂ ಮೂರು ವಿಡಿಯೋಗಳನ್ನು ಹಾಕಿರುವ ಇವರು ನೀಡುವ ಆಹಾರ ಹಾಗೂ ಅಲ್ಲಿನ ನೈಜ ಪರಿಸ್ಥಿತಿಯನ್ನು ತೋರಿಸಿದ್ದಾರೆ.

ಇದು ಸಾಮಾಜಿಕ ಜಾಲಾತಾಣದಲ್ಲಿ ಯೋಧನೇ ಹಾಕಿದ ಪೋಸ್ಟ್'ಗಳನ್ನು ಯಥಾವತ್ತಾಗಿ ನೀಡಲಾಗಿದೆ.