ಬೆಂಗಳೂರು(ಸೆ.10): ಬಡವರ ಮನೆಗಳನ್ನು ಸಿಕ್ಕಸಿಕ್ಕಂತೆ ಒಡೆದು ಹಾಕಿದ ಬಿಬಿಎಂಪಿ ಮತ್ತು ರಾಜ್ಯ ಸರ್ಕಾರ, ದೊಡ್ಡವರ ಬಿಲ್ಡಿಂಗುಗಳ ರಹಸ್ಯ ಬಯಲಾಗುತ್ತಿದ್ದಂತೆ, ಮೌನವಾಗಿದ್ದು ಏಕೆ..? ಈ ನಿಗೂಢ ರಹಸ್ಯ ಇನ್ನೂ ಬಯಲಾಗಿಲ್ಲ. ಈ ಮಧ್ಯೆಯೇ ಒರಾಯನ್ ಮಾಲ್ ಕುರಿತ ಇನ್ನೊಂದು ಸ್ಫೋಟಕ ರಹಸ್ಯ ಬಯಲಾಗುತ್ತಿದೆ. ಈ ಭೂಇಲಾಖೆಗಳ ಜಂಟಿ ನಿರ್ದೇಶಕರು ಕೊಟ್ಟ ವರದಿಯಲ್ಲಿ, ಎರಡು ವರ್ಷಕ್ಕೂ ಮೊದಲೇ ಒರಾಯನ್ ಒತ್ತುವರಿ ರಹಸ್ಯ ಬಯಲಾಗಿತ್ತು. ಆದರೆ, ತನಿಖೆ ಮಾಡುವ ಕೆಲಸಕ್ಕೇ ಕುಂಟುನೆಪ ಹುಡುಕಿ ಕಸದ ಬುಟ್ಟಿಗೆ ಹಾಕಿಬಿಟ್ಟಿದೆ. ಅದು ಕಸದ ಬುಟ್ಟಿಗೆ ಬಿದ್ದ ಕಥೆಯೇ ಇನ್ನೊಂದು ಭ್ರಷ್ಟಾಚಾರದ ಕೂಪ ಎನ್ನಲು ಅಡ್ಡಿಯಿಲ್ಲ.
ಒರಾಯನ್ ಮಾಲ್, 3 ಎಕರೆ, 4 ಗುಂಟೆ ಸರ್ಕಾರಿ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿದೆ ಎನ್ನುವ ರಹಸ್ಯವನ್ನು ಸೆಪ್ಟೆಂಬರ್ 3ರಂದು ಸುವರ್ಣ ನ್ಯೂಸ್ ಸಾಕ್ಷಿ ಸಮೇತ ಬಿಚ್ಚಿಟ್ಟಿತ್ತು. ಬಳಿಕ ಭೂದಾಖಲೆಗಳ ಜಂಟಿ ನಿರ್ದೇಶಕರು ಕೊಟ್ಟ ವರದಿ ಏನಾಯಿತು ಎನ್ನುವುದನ್ನೂ ಸುವರ್ಣ ನ್ಯೂಸ್ ಬೆನ್ನು ಹತ್ತಿತ್ತು. ಆದರೆ, ಕೆಲವರು ವರದಿ ತಲುಪಿದೆ, ಇನ್ನೂ ಸಂಪೂರ್ಣ ವರದಿ ಬರಬೇಕು ಎಂದರೆ, ಕೆಲವು ಅಧಿಕಾರಿಗಳು ವರದಿ ಕೈಗೇ ಸಿಕ್ಕಿಲ್ಲ ಎಂದಿದ್ದರು.
ಸುವರ್ಣ ನ್ಯೂಸ್ಗೆ ವರದಿ ಸಿದ್ಧವಾದ ದಿನವೇ ಸಿಕ್ಕುತ್ತೆ. ಆದರೆ, ಅದೇ ಇಲಾಖೆ ಕಳುಹಿಸಿದ ವರದಿ ಸಂಬಂಧಪಟ್ಟ ಅಧಿಕಾರಿಗಳ ಕೈಗೇ ಸಿಕ್ಕಿಲ್ಲ ಎಂದರೆ ಏನರ್ಥ..? ಇಂತಹ ಪ್ರಶ್ನೆ ಎತ್ತಿತ್ತು ಸುವರ್ಣ ನ್ಯೂಸ್. ಬಡವರ ಮನೆಗಳನ್ನು ಯಾವ ದಾಖಲೆ ಕೊಟ್ಟರೂ ಒಡೆದು ಹಾಕಿದ ಬಿಬಿಎಂಪಿ, ಈಗ ಅದೇ ಒರಾಯನ್ ಮಾಲ್ನ ಅಕ್ರಮದ ಮತ್ತೊಂದು ಭಾಗ ನಿಮ್ಮ ಮುಂದಿಡುತ್ತಿದೆ.
ಒರಾಯನ್ ಮಾಲ್ನ ಸರ್ಕಾರಿ ಭೂಮಿ ಒತ್ತುವರಿ ರಹಸ್ಯ ಬಯಲಾಗಿದ್ದು 2016ರಲ್ಲಿ: ಸುವರ್ಣ ನ್ಯೂಸ್ಗೆ ಸಿಕ್ಕ ವರದಿ ಇನ್ನೂ ‘ದೊಡ್ಡವರಿ’ಗೆ ತಲುಪಿಲ್ಲ
ಇದು ಸೆಪ್ಟೆಂಬರ್ 2ರಂದು ಭೂಇಲಾಖೆಗಳ ಜಂಟಿ ನಿರ್ದೇಶಕರು ಸಿದ್ಧಪಡಿಸಿದ್ದ ವರದಿಯ ಕಥೆ. ಆ ವರದಿಗೆ ಇನ್ನೂ ದೊಡ್ಡವರಿಂದ ಮುಕ್ತಿ ಸಿಕ್ಕಿಲ್ಲ. ಇನ್ನೂ ಕೆಲವರಿಗೆ ತಲುಪಿಯೇ ಇಲ್ಲ. ಹಾಗಾದರೆ, ಒರಾಯನ್ ಮಾಲ್ ಒತ್ತುವರಿ ವಿಚಾರ ಯಾರಿಗೂ ಗೊತ್ತೇ ಇರಲಿಲ್ಲವಾ..?
ಎರಡು ವರ್ಷಗಳ ಹಿಂದೆ,
2014ರಲ್ಲಿ ಆಗ ರಮೇಶ್ ಎನ್ನುವ ಒಬ್ಬ ವ್ಯಕ್ತಿ, ಇದೇ ಒರಾಯನ್ ಮಾಲ್ ವಿರುದ್ಧ ಬಿಎಂಟಿಎಫ್ಗೆ ದೂರು ಕೊಟ್ಟಿದ್ರು. ಬಿಎಂಟಿಎಫ್ಗೆ ಇಂಥಾ ಅಕ್ರಮಗಳ ವಿರುದ್ಧದ ದೂರನ್ನು ತನಿಖೆ ಮಾಡುವ ಅಧಿಕಾರ ಇದೆ. ಆಗ ಬಿಎಂಟಿಎಫ್ ಎಸ್ಪಿಯಾಗಿದ್ದ ಆರ್. ಪಿ. ಶರ್ಮಾ, ಕೇಸ್ ದಾಖಲಿಸಿಕೊಂಡಿದ್ದರು. ಆಗ ಬಿಬಿಎಂಪಿ ಆಯುಕ್ತರಾಗಿದ್ದ ಸನ್ಮಾನ್ಯ ಸಿದ್ದಯ್ಯ ಹಾಗೂ ಅಧಿಕಾರಿ ಟೊಪ್ಪಗಿ ವಿರುದ್ಧ ಎಫ್ಐಆರ್ ಕೂಡಾ ಆಗಿತ್ತು. ಆದರೆ, ಎಫ್ಐಆರ್ ದಾಖಲಾಗಿದ್ದೇ ತಡ, ಸಿದ್ದಯ್ಯ ಹೈಕೋರ್ಟ್ ಮೆಟ್ಟಿಲು ಹತ್ತಿಬಿಟ್ರು. ಬಿಎಂಟಿಎಫ್ನಿಂದ ತನಿಖೆ ಮಾಡುವುದು ಬೇಡ ಅಂಥಾ ಒಂದಿಷ್ಟು ಕುಂಟುನೆಪ ಹೇಳಿ ಗೆದ್ದೂಬಿಟ್ಟರು.
ಸಿದ್ದಯ್ಯ ಹೇಳಿದ್ದ ಕಾರಣಗಳು ಎಂಥವು ಗೊತ್ತಾ..? ಎಫ್ಐಆರ್ ದಾಖಲಿಸಿದ್ದ ಆರ್. ಪಿ.ಶರ್ಮಾ ವಿರುದ್ಧ ಸಿದ್ದಯ್ಯನವರೇ ತನಿಖೆ ನಡೆಸುತ್ತಿದ್ದರು. ಬಿಡಿಎ ಸೈಟ್ ವಿಚಾರವೊಂದರಲ್ಲಿ ವಿಚಾರಣೆ ನಡೆಯುತ್ತಿತ್ತು. ಹೀಗಾಗಿ ಶರ್ಮಾ ತನ್ನ ವಿರುದ್ಧ ಬೇಕೆಂದೇ ಎಫ್ಐಆರ್ ದಾಖಲಿಸಿದ್ದಾರೆ ಎಂದು ಹೇಳಿ, ಕೇಸು ಲೋಕಾಯುಕ್ತಕ್ಕೆ ವರ್ಗಾವಣೆಯಾಗುವಂತೆ ನೋಡಿಕೊಂಡಿದ್ದರು.
ನೆಪ ಹೇಳಿದ್ದ ಸಿದ್ದಯ್ಯ, ತಮ್ಮ ಜವಾಬ್ದಾರಿಯನ್ನೇ ಮರೆತಿದ್ದರು..!: ಒತ್ತುವರಿ ತೆರವು ಬಿಟ್ಟು, ಕೇಸು ಹಳ್ಳ ಹಿಡಿಸಿದರಾ ಸಿದ್ದಯ್ಯ..?
ಒರಾಯನ್ ಮಾಲ್ ಒತ್ತುವರಿಯಾಗಿದ್ದು, ಅದರ ತೆರವಿನ ಜವಾಬ್ದಾರಿ ಕೂಡಾ ಸಿದ್ದಯ್ಯನವರದ್ದೇ ಆಗಿತ್ತು. ಆದರೆ, ಆ ಮಾಲ್ನ ನಕ್ಷೆಗೆ ಸಹಿ ಹಾಕಿದ್ದವರೂ ಅವರೇ. ಒತ್ತುವರಿಯಾಗಿದೆ ಎಂದು ಗೊತ್ತಾದಾಗ ಅದನ್ನು ತೆರವು ಮಾಡಿಸಬೇಕಾದ ಜವಾಬ್ದಾರಿ, ಕರ್ತವ್ಯ ಬಿಬಿಎಂಪಿ ಕಮಿಷನರ್ದೇ. ತಪ್ಪು ಮಾಡಿದ್ದೂ ಅಲ್ಲದೆ, ಕರ್ತವ್ಯವನ್ನೂ ಮರೆತಿದ್ದ ಸಿದ್ದಯ್ಯನವರಿಂದ ಆ ಕೇಸು ಲೋಕಾಯುಕ್ತಕ್ಕೆ ಬಂತು.
ಒರಾಯನ್ ಒತ್ತುವರಿ ಎಫ್ಐಆರ್ ಏನಾಯ್ತು..?
ಕೇಸು ಬಿಎಂಟಿಎಫ್ನಿಂದ ಲೋಕಾಯುಕ್ತಕ್ಕೆ ವರ್ಗಾವಣೆ ಆಯಿತೇನೋ ನಿಜ. ಆದರೆ, 2014ರಿಂದ ಪತ್ರ ವ್ಯವಹಾರದಲ್ಲೇ ಕಾಲಹರಣವಾಗುತ್ತಿದೆ. ದಾಖಲೆಗಳಿಗಾಗಿ ಬಿಬಿಎಂಪಿಯಿಂದ ಭೂದಾಖಲೆ ಇಲಾಖೆಗೆ ಪತ್ರ ಬರೆದದ್ದಷ್ಟೇ ಬಂತು. ದಾಖಲೆಗಳೂ ಬರಲಿಲ್ಲ. ಪ್ರಕರಣದ ತನಿಖೆ ಶುರುವಾಗಲೇ ಇಲ್ಲ. ಎಲ್ಲಿದೆಯೋ ಅಲ್ಲಿಯೇ ಇದೆ. ಈ ಮಧ್ಯೆ ತನಿಖೆ ನಡೆಸುತ್ತಿದ್ದ ಇನ್ಸ್ಪೆಕ್ಟರ್ಗಳೇ ವರ್ಗವಾಗಿ ಹೋಗಿದ್ದಾರೆ.
ಎರಡು ವರ್ಷಗಳ ಹಿಂದೆಯೇ ಗೊತ್ತಾದರೂ ಬಿಬಿಎಂಪಿ ಕ್ರಮ ಕೈಗೊಳ್ಳಲಿಲ್ಲ ಏಕೆ? ಕ್ರಮ ಕೈಗೊಳ್ಳಬೇಕಾದವರೇ ತನಿಖೆಯನ್ನು ವಿಳಂಬ ಮಾಡಿಸಿದ್ದು ಏಕೆ? ದಾಖಲೆಗಳು ತನಿಖೆಗಾಗಿ ಹಸ್ತಾಂತರವಾಗಲೇ ಇಲ್ಲ ಏಕೆ? ದಾಖಲೆಗಳು ಸಿಗದಿದ್ದರೆ, ಖುದ್ದಾಗಿ ಹೋಗಿ ಹುಡುಕಿ ತೆಗೆಯಬೇಕು ಎಂಬುವುದನ್ನು ತನಿಖಾಧಿಕಾರಿಗಳು ಮರೆತಿದ್ದು ಏಕೆ? ಎರಡು ವರ್ಷಗಳಿಂದ ಒತ್ತುವರಿ ಪ್ರಕರಣ ಅಲ್ಲಿಯೇ ದೂಳು ತಿನ್ನುತ್ತಿರುವುದಾದರೂ ಏಕೆ? ಇಷ್ಟು ದೊಡ್ಡ ಒತ್ತುವರಿ ಮರೆತು, ತಾವೇ ಓಕೆ ಮಾಡಿದ್ದ ಮನೆಗಳನ್ನು ಬೆಂಗಳೂರು ಉದ್ಧಾರ ಮಾಡುವ ಹೆಸರಲ್ಲಿ ಒಡೆಯುತ್ತಿರೋದು ಏಕೆ? ಕಾನೂನು ಬಡವರಿಗೊಂದು, ಶ್ರೀಮಂತರಿಗೊಂದು ಅಂಥೇನಾದರೂ ಇದೆಯಾ? ಇವೆಲ್ಲಾ ಪ್ರಶ್ನೆಗಳಿಗೆ ಉತ್ತರ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳೇ ನೀಡಬೇಕಾಗಿದೆ.
