ಬೆಂಗಳೂರು :  ಪಕ್ಷದ ಸಂಸದೆ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಅವರಿಗೆ ಕೇಂದ್ರದ ನರೇಂದ್ರ ಮೋದಿ ಅವರ ನೂತನ ಸಂಪುಟದಲ್ಲಿ ಸಚಿವ ಸ್ಥಾನ ಕೊಡಿಸುವ ಪ್ರಯತ್ನ ನಡೆಸುವ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಪರೋಕ್ಷವಾಗಿ ಸುಳಿವು ನೀಡಿದ್ದಾರೆ.

ಮಂಗಳವಾರ ಪಕ್ಷದ ಕಚೇರಿಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಶೋಭಾ ಕರಂದ್ಲಾಜೆ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಶೋಭಾ ಕರಂದ್ಲಾಜೆ ಅವರಿಗೆ ಮೋದಿ ಅವರು ಉತ್ತಮ ಗೌರವ ನೀಡುತ್ತಾರೆ. ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲು ಬುಧವಾರ ದೆಹಲಿಗೆ ತೆರಳುತ್ತಿದ್ದೇನೆ. ಈ ವೇಳೆ ಮೋದಿ ಅವರಿಗೆ ಹಾಗೂ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರಿಗೆ ನನ್ನ ಭಾವನೆ ತಿಳಿಸುತ್ತೇನೆ ಎಂದು ಹೇಳಿದರು.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಶೋಭಾ ಅವರು ಸ್ಪರ್ಧಿಸಲು ಆಸಕ್ತಿ ತೋರಿರಲಿಲ್ಲ. ಬೇಡ ಎಂದೇ ಹಟ ಹಿಡಿದಿದ್ದರು. ಆದರೆ ನಾವೆಲ್ಲರೂ ಒತ್ತಾಯ ಮಾಡಿದ್ದರಿಂದ ಸ್ಪರ್ಧೆ ಮಾಡಿದರು. ಅವರು ಇಷ್ಟುದೊಡ್ಡ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದುಕೊಂಡಿರಲಿಲ್ಲ. ಅದಕ್ಕೆ ಅನೇಕ ರೀತಿಯ ಕಾರಣಗಳಿದ್ದವು. ಅವುಗಳನ್ನು ಈಗ ಪ್ರಸ್ತಾಪಿಸುವುದಿಲ್ಲ. ಆದರೆ, ಶೋಭಾ ಅವರು ತಮ್ಮ ವೈಯಕ್ತಿಕ ವರ್ಚಸ್ಸಿನಿಂದ ಈ ಮಟ್ಟದ ಗೆಲುವು ಪಡೆದುಕೊಳ್ಳಲು ಸಾಧ್ಯವಾಯಿತು ಎಂದು ಮುಕ್ತಕಂಠದಿಂದ ಪ್ರಶಂಸಿಸಿದರು.

ಅವರು ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವೆಯಾಗಿ, ಇಂಧನ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಮೂರು ತಿಂಗಳ ಮೊದಲೇ ಅಭ್ಯರ್ಥಿಗಳನ್ನು ಬಿಂಬಿಸಿದ್ದರಿಂದ ರಾಜ್ಯದಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಕಾರಣವಾಯಿತು ಎಂದು ಇದೇ ವೇಳೆ ಯಡಿಯೂರಪ್ಪ ತಿಳಿಸಿದರು.