ಉಡುಪಿ-ಮಂಗಳೂರಿಗೆ ಸೋಮವಾರ ರಾಜ್ಯ ಗೃಹ ಸಚಿವ ರಾಮಲಿಂಗಾ ರೆಡ್ಡಿ ಭೇಟಿ ಕೊಟ್ಟದ್ದು ಕರಾವಳಿ ಜಿಲ್ಲೆಗಳಲ್ಲಿ ನಡೆಯುತ್ತಿರುವ ಬಿಜೆಪಿಯ ಜನಸುರಕ್ಷಾ ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರನ್ನು ಛೂ ಬಿಡಲು ಎಂದು ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ಉಡುಪಿ: ಉಡುಪಿ-ಮಂಗಳೂರಿಗೆ ಸೋಮವಾರ ರಾಜ್ಯ ಗೃಹ ಸಚಿವ ರಾಮಲಿಂಗಾ ರೆಡ್ಡಿ ಭೇಟಿ ಕೊಟ್ಟದ್ದು ಕರಾವಳಿ ಜಿಲ್ಲೆಗಳಲ್ಲಿ ನಡೆಯುತ್ತಿರುವ ಬಿಜೆಪಿಯ ಜನಸುರಕ್ಷಾ ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರನ್ನು ಛೂ ಬಿಡಲು ಎಂದು ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ಕಾಪುವಿನಲ್ಲಿ ಮಂಗಳವಾರ ಬಿಜೆಪಿ ಜನಸುರಕ್ಷಾ ಯಾತ್ರೆಯ ಸಮಾವೇಶದಲ್ಲಿ ಮಾತನಾಡಿದ ಅವರು, ಸರ್ಕಾರ ಬರುತ್ತವೆ ಹೋಗುತ್ತವೆ. ಆದರೆ ಪೊಲೀಸರು ಇಲಾಖೆಯಲ್ಲೇ ಇರುತ್ತಾರೆ. ಪೊಲೀಸರೇ, ನೀವು ಕಾಂಗ್ರೆಸ್‌ ಪಕ್ಷದ ಚೇಲಾಗಳಾಗಿ ಕೆಲಸ ಮಾಡಬೇಡಿ. ಖುದ್ದು ಕಾಂಗ್ರೆಸ್‌ ಮುಖಂಡರು ರೌಡಿಗಳಿಗೆ ಕುಮ್ಮಕ್ಕು ಕೊಡುತ್ತಾ ನಿಮಗೆ ಕೆಲಸ ಮಾಡಲು ಬಿಡುತ್ತಿಲ್ಲ ಎಂದು ಪೊಲೀಸರನ್ನು ಉದ್ದೇಶಿಸಿ ಹೇಳಿದರು.

ನಲಪಾಡ್‌ ಅಫೀಮು ಸೇವಿಸಿದ್ದ, ಆತನಿಗೂ ಡ್ರಗ್‌ ಮಾಫಿಯಾಗೂ ಸಂಬಂಧ ಇದೆ. ಆದರೂ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ, ಆತನ ಬಳಿ ಏಳು ಪಿಸ್ತೂಲ್‌ಗಳಿದ್ದವು, ಅವುಗಳಿಗೆ ಲೈಸನ್ಸ್‌ ಎಲ್ಲಿಂದ ಬಂತು? ಅಕ್ರಮ ಶಸ್ತ್ರಾಸ್ತ್ರ ಸಾಗಣೆಗೂ ನಲಪಾಡ್‌ಗೂ ಸಂಬಂಧ ಇದೆಯೇ ಎಂಬ ಬಗ್ಗೆಯೂ ಸರ್ಕಾರ ತನಿಖೆ ನಡೆಸುತ್ತಿಲ್ಲ ಎಂದವರು ಆರೋಪಿಸಿದರು.

ಈವರೆಗೆ ಉತ್ತರಪ್ರದೇಶಕ್ಕೆ ಕ್ರಿಮಿನಲ್‌ ರಾಜ್ಯ ಎನ್ನುವ ಕುಖ್ಯಾತಿ ಇತ್ತು. ಇದಕ್ಕೆ ಅಲ್ಲಿ ಆಳುತ್ತಿದ್ದ ಕಾಂಗ್ರೆಸ್‌ ಮತ್ತು ಸಮಾಜವಾದಿ ಪಕ್ಷಗಳೇ ಕಾರಣವಾಗಿದ್ದವು. ಆದರೆ ಈಗ ಅಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ, ಅಲ್ಲಿನ ಚಿತ್ರಣವೇ ಬದಲಾಗಿದೆ. ಯೋಗಿ ಆದಿತ್ಯನಾಥ್‌ ಕ್ರಿಮಿನಲ್‌ಗಳ ವಿರುದ್ಧ ಸಮರ ಸಾರಿದ್ದಾರೆ. ಅಂತಹ ಆಡಳಿತ ಕರ್ನಾಟಕದಲ್ಲೂ ಬರಬೇಕು. ಅದು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದರು.