ಲಕ್ನೋ[ಫೆ.14]: ಕಾಂಗ್ರೆಸ್‌ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ಪ್ರಿಯಾಂಕಾ ಗಾಂಧಿ ಉತ್ತರ ಪ್ರದೇಶದ ರಾಜಕೀಯ ಅಖಾಡಕ್ಕೆ ಧುಮುಕಿತ್ತಿದ್ದಂತೆಯೇ ಅಲ್ಲಿನ ರಾಜಕೀಯವು ಬಹಳಷ್ಟು ತಿರುವುಗಳನ್ನು ಪಡೆಯುತ್ತಿದೆ. ಲೋಕಸಭೆ ಚುನಾವಣೆಗೂ ಮೊದಲು ಇನ್ನೂ ಹಲವಾರು ಬದಲಾವಣೆಗಳಾಗುವ ಸಾಧ್ಯತೆಗಳಿವೆ ಎಂದೂ ಹೇಳಲಾಗುತ್ತಿದೆ. ಈಗಾಗಲೇ ಮಹಾಮೈತ್ರಿ ಮಹತ್ವ ಪಡೆದುಕೊಂಡಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಶಿವಪಾಲ್ ಸಿಂಗ್ ಯಾದವ್ ಕಾಂಗ್ರೆಸ್ ಜೊತೆ ಕೈಗೂಡಿಲು ಸಜ್ಜಾಗಿದ್ದಾರೆಂಬ ವರದಿ ಸದ್ದು ಮಾಡಿದೆ. 

ಪ್ರಗತಿಶೀಲ ಸಮಾಜವಾದಿ ಪಕ್ಷದ ಸಂಸ್ಥಾಪಕ ಹಾಗೂ ಹಿರಿಯ ನಾಯಕ ಶಿವಪಾಲ್ ಯಾದವ್ ಪ್ರಿಯಾಂಕಾ ಗಾಂಧಿಗೆ ಕರೆ ಮಾಡಿ, ಭೇಟಿಯಾಗಲು ಸಮಯ ನೀಡುವಂತೆ ಕೇಳಿಕೊಂಡಿದ್ದಾರೆ. ಆದರೆ ತನ್ನ ಬಳಿ ಈಗ ಸಮಯವಿಲ್ಲ ಎಂದು ಸ್ಪಷ್ಟಪಡಿಸಿರುವ ಪ್ರಿಯಾಂಕಾ ಗಾಂಧಿ ಮುಂದಿನ 2-3 ದಿನಗಳ ಬಳಿಕವೇ ಭೇಟಿಯಾಗುತ್ತೇನೆಂದು ತಿಳಿಸಿದ್ದಾರೆ.

ಪ್ರಿಯಾಂಕಾರನ್ನು ಭೇಟಿಯಾಗಲು ಸಮಯ ಕೇಳಿರುವ ಶಿವಪಾಲ್ ಯಾದವ್ ಮಹಾಮೈತ್ರಿ ವಿಚಾರವಾಗಿ ಮಾತುಕತೆ ನಡೆಸುವ ಸಾಧ್ಯತೆಗಳಿವೆ. ಅಲ್ಲದೇ 20 ಕ್ಷೇತ್ರಗಳಲ್ಲಿ ಮಾತುಕತೆ ಮೂಲಕ ಹೊಂದಾಣಿಕೆ ಮಾಡಿಕೊಳ್ಳುವ ಪ್ರಸ್ತಾಪವಿದೆ ಎನ್ನಲಾಗಿದೆ. ಅದೇನಿದ್ದರೂ ಮುಂದಿನ ಎರಡು ಮೂರು ದಿನಗಳವರೆಗೆ ಭೇಟಿಯಾಗಲು ತನ್ನ ಬಳಿ ಸಮಯವಿಲ್ಲ ಎಂಬುವುದನ್ನು ಪ್ರಿಯಾಂಕಾ ಗಾಂಧಿ ಸ್ಪಷ್ಟಪಡಿಸಿದ್ದಾರೆ.