ಶಿವಮೊಗ್ಗ [ಜೂ.28] : ಶಿವಮೊಗ್ಗ - ಬೆಂಗಳೂರು ನಡುವೆ ಈಗಾಗಲೇ ಜನ್ ಶತಾಬ್ದಿ ಎಕ್ಸ್ ಪ್ರೆಸ್ ಆರಂಭವಾಗಿದೆ.ಇದೇ ರೀತಿ ಮುಂದಿನ ದಿನಗಳಲ್ಲಿ ಹಲವು ಯೋಜನೆಗಳನ್ನು ಆರಂಭಿಸಲು ಕೇಂದ್ರದ ಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಶಿವಮೊಗ್ಗದಲ್ಲಿ ಮಾತನಾಡಿದ ರಾಘವೇಂದ್ರ  ವಿ.ಐ.ಎಸ್.ಎಲ್. ಕಾರ್ಖಾನೆ ಬಗ್ಗೆಯೂ ಪ್ರಸ್ತಾಪಿಸಿ, ಸದ್ಯ ಕಾರ್ಖಾನೆ ನೂರು ಕೋಟಿ ರು. ನಷ್ಟದಲ್ಲಿದೆ. ಕಾರ್ಖಾನೆಗೆ ಕಚ್ಛಾ ವಸ್ತು ರವಾನೆ ಮಾಡಿ ಕಾರ್ಮಿಕರಿಗೆ ಹೆಚ್ಚು ಕೆಲಸ ನೀಡುವ ಉದ್ದೇಶದಿಂದ ಕ್ರಮ ವಹಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಏಳೆಂಟು ಸಾವಿರ ಕಾರ್ಮಿಕರಿಗೆ ಕೆಲಸ ನೀಡುವ ದೂರದೃಷ್ಟಿ ಇದೆ. ಕಾರ್ಖಾನೆ, ಸರ್ಕಾರಿ ವಲಯದಲ್ಲಿಯೇ ಮುಂದುವರೆಸಲು ಆಸಕ್ತಿ ಹೊಂದಲಾಗಿದೆ. 
ಕಾರ್ಖಾನೆ ಖಾಸಗಿಕರಣಕ್ಕೆ ಬಿಡುವುದಿಲ್ಲ ಎಂದರು.

ಶರಾವತಿ ನದಿಯನ್ನು ಬೆಂಗಳೂರಿಗೆ ಹರಿಸುವ ಬಗ್ಗೆಯೂ ಪ್ರತಿಕ್ರಿಯಿಸಿದ ಸಂಸದ ರಾಘವೇಂದ್ರ ಬೆಂಗಳೂರಿಗೆ ಹರಿಸುವ ಕ್ರಮ ಯಾವುದೇ ಕಾರಣಕ್ಕೂ ಸರಿಯಿಲ್ಲ. ಬೆಂಗಳೂರು ಅಭಿವೃದ್ಧಿ ರಾಜ್ಯದ ಅಭಿವೃದ್ಧಿ ಎಂದುಕೊಂಡಿರುವ ರಾಜ್ಯ ಸರ್ಕಾರ ಮೊದಲು ಈ ಯೋಜನೆ ಕೈ ಬಿಡಬೇಕು ಎಂದರು.  

ಇನ್ನು ಶಿವಮೊಗ್ಗ ವಿಮಾನ ನಿಲ್ದಾಣ ಯೋಜನೆಯ ಕಾಮಗಾರಿಯನ್ನು ಇನ್ನು 2-3ವರ್ಷಗಳಲ್ಲಿ ಬಗೆಹರಿಸಲಾಗುವುದು. ಈ ಸಂಬಂಧ, ಆಯಾ ಇಲಾಖೆ ಮುಖ್ಯಸ್ಥರಿಗೆ ಮನವಿ ಪತ್ರ ಸಲ್ಲಿಸಲಾಗಿದ್ದು, ಇರುವ ಸಮಸ್ಯೆ ಬಗೆಹರಿಸಲು ಕ್ರಮ ವಹಿಸಲಾಗಿದೆ. ರನ್ ವೇ ಡೈರೆಕ್ಷನ್ ಬದಲಾವಣೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.