ಹುಬ್ಬಳ್ಳಿ[ಮಾ.24]: ಪ್ರೀತಿಪಾತ್ರ ತಂದೆಯ ಸಾವಿನ ದುಃಖ ನುಂಗಿಕೊಂಡೇ ಪೌರಾಡಳಿತ ಸಚಿವರಾಗಿದ್ದ ಸಿ.ಎಸ್‌.ಶಿವಳ್ಳಿ ಅವರ ಎರಡನೇ ಪುತ್ರಿ ರೂಪಾ ಶನಿವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದು, ನಂತರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದಾಳೆ.

ಹುಬ್ಬಳ್ಳಿಯ ಮಂಜುನಾಥ ನಗರದ ಕೆಎಲ್‌ಇ ಸಿಬಿಎಸ್‌ಇ ಸ್ಕೂಲ್‌ನಲ್ಲಿ ರೂಪಾ ಎಸ್ಸೆಸ್ಸೆಲ್ಸಿ ಓದುತ್ತಿದ್ದಾಳೆ. ಶುಕ್ರವಾರವಷ್ಟೇ ಶಿವಳ್ಳಿ ಅವರು ಹೃದಯಾಘಾತದಿಂದ ತೀರಿಕೊಂಡಿದ್ದರು. ಈಗಾಗಲೇ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತಿದ್ದು, ತಂದೆಯನ್ನು ಕಳೆದುಕೊಂಡ ಮರುದಿನವೇ ಒತ್ತರಿಸಿ ಬರುತ್ತಿದ್ದ ದುಃಖ ಕಟ್ಟಿಕೊಂಡು ಹುಬ್ಬಳ್ಳಿಯ ಸೈಂಟ್‌ ಆಂಥೋನಿ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಇಂಗ್ಲಿಷ್‌ ವಿಷಯದ ಪರೀಕ್ಷೆ ಬರೆದಿದ್ದಾಳೆ. ಪರೀಕ್ಷೆ ಬಳಿಕ ಸಚಿವ ಯು.ಟಿ.ಖಾದರ್‌ ಅವರೊಂದಿಗೆ ಅವರ ಕಾರಲ್ಲಿ ಯರಗುಪ್ಪಿ ಗ್ರಾಮಕ್ಕೆ ಬಂದು ತಂದೆಯ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾಳೆ.

ಮಕ್ಕಳ ವಿದ್ಯಾಭ್ಯಾಸದ ವಿಷಯದಲ್ಲಿ ಶಿವಳ್ಳಿ ಹೆಚ್ಚಿನ ಆಸ್ಥೆ ವಹಿಸಿದ್ದರು. ಎಷ್ಟೇ ಸಂಕಷ್ಟಎದುರಾದರೂ ಶಿಕ್ಷಣದ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು ಎಂಬ ಮಾತನ್ನು ಶಿವಳ್ಳಿ ಎಲ್ಲರಿಗೂ ಹೇಳುತ್ತಿದ್ದರು. ತಂದೆಯ ಸಾವಿನ ಬಳಿಕ ನೋವು ನುಂಗಿಕೊಂಡು ಮಗಳು ಪರೀಕ್ಷೆ ಬರೆದು ದಿಟ್ಟತನ ತೋರಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.