ಮಂಗಳೂರು :  ಶಿರಾಡಿ ಘಾಟ್ ಹೆದ್ದಾರಿ ಸಂಪೂರ್ಣ ಕಾಂಕ್ರಿಟಿಕರಣಗೊಂಡು ಎಲ್ಲ ವಾಹನಗಳ ಸಂಚಾರಕ್ಕೆ ಗುರುವಾರ ಮುಕ್ತಗೊಂಡಿದೆ. ಈಗ 38 ಕಿ.ಮೀ. ದೂರದ ಶಿರಾಡಿ ಘಾಟ್ ಸಂಚಾರಕ್ಕೆ ಘನ ವಾಹನಗಳಿಗೆ ಕೇವಲ ಒಂದು ಗಂಟೆ ಸಾಕು. ಮಂಗಳೂರು-ಬೆಂಗಳೂರು ಮಧ್ಯೆ ಬಸ್ ಸಂಚಾರದ ಅವಧಿಯೂ ಒಂದು ತಾಸು ಕಡಿಮೆಯಾಗಿದ್ದು, 8 ಗಂಟೆ ಅವಧಿಯೊಳಗೆ ತಲುಪಲು ಸಾಧ್ಯವಾಗಿದೆ.

ಮಾರನಹಳ್ಳಿಯಿಂದ ಗುಂಡ್ಯವರೆಗೆ 26 ಕಿ.ಮೀ. ದೂರದ ಶಿರಾಡಿ ಘಾಟ್ ಹೆದ್ದಾರಿಯ ಕಾಂಕ್ರಿಟ್ ಕಾಮಗಾರಿ ಮುಕ್ತಾಯಗೊಂಡು ಜು.15 ರಂದು ಸಂಚಾರಕ್ಕೆ ತೆರವುಗೊಂಡಿತ್ತು. ಆದರೆ ರಸ್ತೆಬದಿ ಶೋಲ್ಡರ್ ಮತ್ತು ತಡೆಗೋಡೆ ಕಾಮಗಾರಿ ಬಾಕಿ ಹಿನ್ನೆಲೆಯಲ್ಲಿ ಘನ ವಾಹನಗಳ  ಸಂಚಾರವನ್ನು 15 ದಿನಗಳ ಕಾಲ ನಿರ್ಬಂಧಿಸಲಾಗಿತ್ತು. ಇದೀಗ ತುರ್ತು ಕಾಮಗಾರಿ ಅಂತಿಮ ಹಂತದಲ್ಲಿರುವುದರಿಂದ ದ.ಕ. ಜಿಲ್ಲಾಡಳಿತ ಗುರುವಾರದಿಂದ ಘನ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದೆ. 

ರಾತ್ರಿಯಿಂದಲೇ ಸಂಚಾರ: ಗುರುವಾರ ಬೆಳಗ್ಗಿನಿಂದ ಅಧಿಕೃತವಾಗಿ ನಿರ್ಬಂಧವನ್ನು ತೆರವುಗೊಳಿಸಿದ್ದರೂ ರಾತ್ರಿ ಬೆಂಗಳೂರು ಕಡೆಯಿಂದ ಹೊರಟ ಬಹುತೇಕ ಬಸ್‌ಗಳು ಮಂಗಳೂರಿಗೆ ಶಿರಾಡಿ ಘಾಟ್ ಮೂಲಕವೇ ಆಗಮಿಸಿವೆ. ನಸುಕಿನ ಜಾವದಿಂದ ಬಸ್ ಹಾಗೂ ಸರಕು ವಾಹನಗಳು ಶಿರಾಡಿ ಘಾಟ್ ಮೂಲಕ ಸಂಚರಿಸಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಗುರುವಾರ ಬೆಳಗ್ಗಿನಿಂದ ಮಂಗಳೂರಿನಿಂದ ಹಾಗೂ ಬೆಂಗಳೂರಿನಿಂದ ಶಿರಾಡಿ ಘಾಟ್‌ನಲ್ಲಿ ಬಸ್ ಮತ್ತಿತರ ಘನ ವಾಹನಗಳು ಸಂಚರಿಸಿವೆ.

ಅಪಾಯಕಾರಿ ಸಂಚಾರ: ಶಿರಾಡಿ ಘಾಟ್ ಕಾಂಕ್ರಿಟ್ ರಸ್ತೆಯಲ್ಲಿ ಸಕಲೇಶಪುರ ಕಡೆಯಿಂದ ಇಳಿಯಬೇಕಾದರೆ ವಾಹನ ಚಾಲಕರು ಸಾಕಷ್ಟು ಎಚ್ಚರ ವಹಿಸಬೇಕಾಗಿದೆ. ಗುರುವಾರ ಸಾಲು ಸಾಲು ವಾಹನಗಳು ಆಗಮಿಸಿದ್ದು, ಮಳೆಯಿಂದ ತೊಯ್ದುಹೋದ ಕಾಂಕ್ರಿಟ್ ರಸ್ತೆ ಜಾರುತ್ತಿದೆ ಎಂದು ಕೆಎಸ್‌ಆರ್‌ಟಿಸಿ ವೋಲ್ವೋ ಬಸ್ ಚಾಲಕರೊಬ್ಬರು ಹೇಳುತ್ತಾರೆ. ಆದ್ದರಿಂದ ಘಾಟ್ ಪ್ರದೇಶದಲ್ಲಿ ಹೆದ್ದಾರಿ ಇಲಾಖೆ ವಿಧಿಸಿದ 40 ರಿಂದ 50 ಕಿ.ಮೀ.  ವೇಗ ಮಿತಿಯಲ್ಲೂ ಸಂಚರಿಸಲು ಕಷ್ಟವಾಗುತ್ತಿದೆ. ಅಲ್ಲದೆ ರಸ್ತೆಯ ಮುತ್ತಮುತ್ತ ಮಣ್ಣು ಸಡಿಲಗೊಂಡಿರುವುದರಿಂದ ಕಾಂಕ್ರಿಟ್ ರಸ್ತೆಯಿಂದ ಬಸ್‌ನ್ನು ಕೆಳಗಿಳಿಸುವಂತಿಲ್ಲ. ತಡೆಗೋಡೆ ಕುಸಿದ ಭಾಗದಲ್ಲಿ ಏಕಕಾಲಕ್ಕೆ ಎರಡು ವಾಹನಗಳು ಸಂಚರಿಸುವುದು ಸುಲಭವಲ್ಲ.  ಅಲ್ಲಲ್ಲಿ ಗುತ್ತಿಗೆ ಕಾರ್ಮಿಕರು ತಡೆಗೋಡೆ, ಶೋಲ್ಡರ್ ಕಾಮಗಾರಿಯನ್ನು ನಡೆಸುತ್ತಿರುವುದರಿಂದ ಘಾಟ್ ರಸ್ತೆಯಲ್ಲಿ ನಿಧಾನವಾಗಿ ಸಂಚರಿಸಬೇಕಾಗುತ್ತದೆ ಎನ್ನುತ್ತಾರೆ ಚಾಲಕರು. 

ಒಂದು ಗಂಟೆ ಬೇಕು: ಶಿರಾಡಿ ಘಾಟ್ ಹೆದ್ದಾರಿ ಕಾಂಕ್ರಿಟ್ ಬಳಿಕ ಮೊದಲ ಬಾರಿಗೆ ಘನ ವಾಹನ ಸಂಚಾರಕ್ಕೆ ತೆರೆದುಕೊಂಡಿರುವುದರಿಂದ ಇನ್ನು ಸ್ವಲ್ಪ ದಿನದ ಮಟ್ಟಿಗೆ ಗರಿಷ್ಠ 50 ಕಿ.ಮೀ. ವೇಗದಲ್ಲಿ ಸಂಚರಿಸುವಂತಿಲ್ಲ ಎನ್ನುತ್ತಾರೆ ಚಾಲಕರು. ಪ್ರಸಕ್ತ ಮಾರನಹಳ್ಳಿಯಿಂದ ಗುಂಡ್ಯವರೆಗೆ ಕ್ರಮಿಸಲು ಬಸ್‌ಗಳಿಗೆ 1 ಗಂಟೆ ಅವಧಿ ಬೇಕು. ಕ್ರಮೇಣ 45 ನಿಮಿಷದಲ್ಲಿ ಸಂಚರಿಸಬಹುದು. ಘಾಟ್ ಕಾಂಕ್ರಿಟ್‌ನಿಂದಾಗಿ ಬೆಂಗಳೂರು - ಮಂಗಳೂರು ಮಧ್ಯೆ ಪ್ರಯಾಣದ ಅವಧಿ 1 ಗಂಟೆ ಕಡಿತಗೊಂಡಿದ್ದು, ಇನ್ನು ೮ ಗಂಟೆ ಸಾಕು. ಉಪಹಾರ , ಊಟದ ಅವಧಿಯನ್ನು ಕಡಿತಗೊಳಿಸಿದರೆ 7 ಅಥವಾ 7. 30 ಗಂಟೆಯಲ್ಲಿ ಬಸ್‌ಗಳು ಕ್ರಮಿಸಬಹುದು ಎನ್ನುತ್ತಾರೆ ಅವರು.