Asianet Suvarna News Asianet Suvarna News

ಸೋಲಿಲ್ಲದ ಸರದಾರನಿಗೆ ಈ ಬಾರಿ ಕಾಡಿದೆ ಆತಂಕ..!

1994 ರಿಂದ ಸತತವಾಗಿ ಗೆಲ್ಲುತ್ತಲೇ ಬರುತ್ತಿರುವ ಮಾಜಿ ಮುಖ್ಯಮಂತ್ರಿ, ಹಾಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಅವರು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ‘ಸೋಲಿಲ್ಲದ ಸರದಾರ’ ಎನಿಸಿಕೊಂಡಿದ್ದಾರೆ. ತಮ್ಮ ಗೆಲುವಿನ ಯಾತ್ರೆಯನ್ನು ಮುಂದುವರಿಸಿಕೊಂಡು ಹೋಗಲು ಮತ್ತೊಮ್ಮೆ ಅಖಾಡಕ್ಕೆ ಇಳಿ ಯಲು ಸಜ್ಜಾಗಿದ್ದಾರೆ. ಈ ಬಾರಿ ಅವರಿಗೆ ತುರುಸಿನ ಸ್ಪರ್ಧೆ ಕಂಡುಬರುವ ಸಾಧ್ಯತೆ ಇದೆ.

Shetter Fear About Election Result

ಹುಬ್ಬಳ್ಳಿ : 1994 ರಿಂದ ಸತತವಾಗಿ ಗೆಲ್ಲುತ್ತಲೇ ಬರುತ್ತಿರುವ ಮಾಜಿ ಮುಖ್ಯಮಂತ್ರಿ, ಹಾಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಅವರು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ‘ಸೋಲಿಲ್ಲದ ಸರದಾರ’ ಎನಿಸಿಕೊಂಡಿದ್ದಾರೆ. ತಮ್ಮ ಗೆಲುವಿನ ಯಾತ್ರೆಯನ್ನು ಮುಂದುವರಿಸಿಕೊಂಡು ಹೋಗಲು ಮತ್ತೊಮ್ಮೆ ಅಖಾಡಕ್ಕೆ ಇಳಿ ಯಲು ಸಜ್ಜಾಗಿದ್ದಾರೆ. ಈ ಬಾರಿ ಅವರಿಗೆ ತುರುಸಿನ ಸ್ಪರ್ಧೆ ಕಂಡುಬರುವ ಸಾಧ್ಯತೆ ಇದೆ.

2008ರಲ್ಲಿ ಕ್ಷೇತ್ರ ಮರುವಿಂಗಡಣೆ ಬಳಿಕ ಚಹರೆ ಬದಲಾಗಿದ್ದರೂ, ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರವನ್ನು ಇವತ್ತಿಗೂ ‘ಮುಖ್ಯಮಂತ್ರಿಗಳ ಕ್ಷೇತ್ರ’ ಎಂದು ಕರೆಯಲಾಗುತ್ತದೆ. ಹಿಂದೆ ಇದೇ ಕ್ಷೇತ್ರದಿಂದ ಆಯ್ಕೆಯಾಗಿದ್ದ ಜನತಾದಳದ ಮುಂಚೂಣಿ ನಾಯಕರಲ್ಲಿ ಒಬ್ಬರಾದ ಎಸ್.ಆರ್. ಬೊಮ್ಮಾಯಿ ಅವರು ಮುಖ್ಯಮಂತ್ರಿ ಪಟ್ಟಕ್ಕೇರಿದ್ದರು. 2012ರಲ್ಲಿ ಶೆಟ್ಟರ್ ಮುಖ್ಯಮಂತ್ರಿಯಾಗಿ ರಾಜ್ಯಭಾರ ಮಾಡಿದ್ದರು.

ಒಮ್ಮೆ ಆಯ್ಕೆಯಾದವರನ್ನು ಮತ್ತೆ ಮತ್ತೆ ಆರಿಸಿ ಕಳುಹಿಸುವುದು ಈ ಕ್ಷೇತ್ರದ ವೈಶಿಷ್ಟ್ಯ. 1957 ರಿಂದ ಮೂರು ಬಾರಿ ಕಾಂಗ್ರೆಸ್ಸಿನ ಎಂ.ಆರ್. ಪಾಟೀಲ್, ನಂತರದ ಮೂರು ಚುನಾವಣೆಗಳಲ್ಲಿ ಜನತಾದಳದ ಎಸ್.ಆರ್. ಬೊಮ್ಮಾಯಿ, ಬಳಿಕ ಎರಡು ಬಾರಿ ಕಾಂಗ್ರೆಸ್ಸಿನ ಗೋಪಿನಾಥ ಸಾಂಡ್ರಾ ಆಯ್ಕೆಯಾಗಿದ್ದರು. 1994ರಿಂದ ಈ ಕ್ಷೇತ್ರ ಬಿಜೆಪಿ ಭದ್ರ ಕೋಟೆಯಂತಾಗಿದ್ದು, ಶೆಟ್ಟರ್ ಅವರು ಸತತ ಐದು ಬಾರಿ ಆಯ್ಕೆಯಾಗಿದ್ದಾರೆ. ಇದು ಕ್ಷೇತ್ರದ ಮಟ್ಟಿಗೆ ದಾಖಲೆ.

ಈ ಮೊದಲು ಇದು ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರ ಎಂದಾಗಿತ್ತು. ಆಗ ಪಾಲಿಕೆಯ ಕೆಲ ವಾರ್ಡ್‌ಗಳು ಹಾಗೂ ಸುತ್ತಮುತ್ತಲಿನ ಕಿರೇಸೂರು, ಹೆಬಸೂರು, ಶಿರಗುಪ್ಪಿ ಸೇರಿದಂತೆ ಮತ್ತಿತರ ಗ್ರಾಮಾಂತರ ಪ್ರದೇಶಗಳು ಇದರ ವ್ಯಾಪ್ತಿಯಲ್ಲಿದ್ದವು. ಮರುವಿಂಗಡಣೆ ಬಳಿಕ ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಎಂಬ ಹೊಸ ಹೆಸರು ಪಡೆಯಿತು. ಸದ್ಯ ಪಾಲಿಕೆ ವ್ಯಾಪ್ತಿಯ 19 ವಾರ್ಡ್‌ಗಳು ಕ್ಷೇತ್ರ ವ್ಯಾಪ್ತಿಗೆ ಬರುತ್ತವೆ. ಲಿಂಗಾಯತ ಸಮುದಾಯವೇ ನಿರ್ಣಾಯಕ.

ಹೇಗಿದೆ ಪರಿಸ್ಥಿತಿ?: ಶೆಟ್ಟರ್ ಅವರನ್ನು ಈ ಬಾರಿ ಕ್ಷೇತ್ರದಲ್ಲೇ ಕಟ್ಟಿ ಹಾಕಬೇಕು, ಅವರಿಗೆ ಮೊದಲ ಬಾರಿ ಸೋಲಿನ ರುಚಿ ಉಣ್ಣಿಸಬೇಕು ಎಂಬ ಮಹತ್ವಾಕಾಂಕ್ಷೆಯನ್ನು ಕಾಂಗ್ರೆಸ್ ಹೊಂದಿದೆ. ಅದನ್ನು ವಿಫಲಗೊಳಿಸಲು ಬಿಜೆಪಿ ಪ್ರತಿತಂತ್ರ ರೂಪಿಸುತ್ತಿದೆ.

ರಾಜಕಾರಣದಲ್ಲಿ ಸಜ್ಜನ ಎಂದು ಶೆಟ್ಟರ್ ಹೆಸರು ಗಳಿಸಿದ್ದಾರೆ. ಆದರೆ ಈ ಬಾರಿ ಕೊಂಚ ವಿರೋಧಿ ಅಲೆಯೂ ಇದೆ. ಮಹದಾಯಿ ವಿವಾದವನ್ನು ಸರಿಯಾಗಿ ನಿರ್ವಹಿಸಲಿಲ್ಲ. ಹೋರಾಟಗಾರರ ಬೇಡಿಕೆಗೆ ಸ್ಪಂದಿಸಲಿಲ್ಲ. ಗೋವಾ ಮುಖ್ಯಮಂತ್ರಿ ಅವರನ್ನು ಒಪ್ಪಿಸಲಿಲ್ಲ ಎಂಬ ಅಸಮಾಧಾನ ಕ್ಷೇತ್ರದ ಮತದಾರರಲ್ಲಿದೆ. ಶೆಟ್ಟರ್ ಅವರು ಸತತ ಐದು ಬಾರಿ ಶಾಸಕರಾಗಿದ್ದರೂ, ಸಚಿವ ಹಾಗೂ ಮುಖ್ಯಮಂತ್ರಿಯಂತಹ ಹುದ್ದೆಗಳನ್ನು ಅನುಭವಿಸಿದರೂ ಅವಳಿ ನಗರ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗಿಲ್ಲ, ಕ್ಷೇತ್ರದ ಸಮಸ್ಯೆಗಳು ಬಗೆಹರಿದಿಲ್ಲ ಎಂಬ ದೂರುಗಳೂ ಇವೆ. ಆದರೆ ಕೊಳಚೆ ಪ್ರದೇಶಗಳ ಅಭಿವೃದ್ಧಿ, ಬಿಆರ್‌ಟಿಎಸ್, ಸ್ಮಾರ್ಟ್ ಸಿಟಿ ಯೋಜನೆ ಜಾರಿಯಲ್ಲಿ ಶೆಟ್ಟರ್ ತೋರಿದ ಮುತುವರ್ಜಿ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ.

ಕಾಂಗ್ರೆಸ್ಸಿನಲ್ಲಿ ಟಿಕೆಟ್‌ಗಾಗಿ ಪೈಪೋಟಿ ಜೋರಾಗಿದೆ. ಒಬ್ಬರನ್ನು ಅಭ್ಯರ್ಥಿಯಾಗಿ ಘೋಷಿಸಿದರೆ, ಮತ್ತೊಬ್ಬರು ಮುನಿಸಿಕೊಳ್ಳಬಹುದು ಎಂಬಂತಹ ವಾತಾವರಣವಿದೆ. ಹಾಗೇನಾದರೂ ಆದರೆ ಶೆಟ್ಟರ್‌ಗೆ ಲಾಭವಾಗುವುದರಲ್ಲಿ ಸಂಶಯವಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ. ಶೆಟ್ಟರ್ ಅವರು ಲಿಂಗಾಯತ ಸಮುದಾಯದವರು.

ಅವರ ಎದುರಾಳಿಯಾಗಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್ಸಿನ ಇಬ್ಬರು ಆಕಾಂಕ್ಷಿಗಳು, ಜೆಡಿಎಸ್ ಹುರಿಯಾಳು ಹಾಗೂ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಕೂಡ ಅದೇ ಸಮುದಾಯದವರು. ಹೀಗಾಗಿ ಶೆಟ್ಟರ್ ಅವರಿಗೆ ಲಿಂಗಾಯತ ಮತ ವಿಭಜನೆ ಆತಂಕವೂ ಇದ್ದೇ ಇದೆ.

Follow Us:
Download App:
  • android
  • ios