ತಮಿಳುನಾಡು ರಾಜಕೀಯದಲ್ಲಿ ಸಂಚಲನ ಮೂಡಿಸುವ ವಿದ್ಯಮಾನವೊಂದರಲ್ಲಿ, ಗಣಿ ಉದ್ಯಮಿ ಹಾಗೂ ತಿರುಪತಿ ತಿರುಮಲ ದೇವಸ್ಥಾನ ಸಮಿತಿಯ ಪದಚ್ಯುತ ಸದಸ್ಯ ಶೇಖರ್ ರೆಡ್ಡಿ ಅವರು ಉಪ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಸೇರಿದಂತೆ ರಾಜ್ಯ ಅಣ್ಣಾ ಡಿಎಂಕೆ ಸಚಿವ ಸಂಪುಟದ ಸುಮಾರು ಅರ್ಧದಷ್ಟು ಸಚಿವರಿಗೆ ಭಾರಿ ಪ್ರಮಾಣದ ಲಂಚ ನೀಡಿದ್ದರು ಎನ್ನಲಾದ ವಿಷಯ ಬೆಳಕಿಗೆ ಬಂದಿದೆ.

ಚೆನ್ನೈ(ಡಿ.9):  ತಮಿಳುನಾಡು ರಾಜಕೀಯದಲ್ಲಿ ಸಂಚಲನ ಮೂಡಿಸುವ ವಿದ್ಯಮಾನವೊಂದರಲ್ಲಿ, ಗಣಿ ಉದ್ಯಮಿ ಹಾಗೂ ತಿರುಪತಿ ತಿರುಮಲ ದೇವಸ್ಥಾನ ಸಮಿತಿಯ ಪದಚ್ಯುತ ಸದಸ್ಯ ಶೇಖರ್ ರೆಡ್ಡಿ ಅವರು ಉಪ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಸೇರಿದಂತೆ ರಾಜ್ಯ ಅಣ್ಣಾ ಡಿಎಂಕೆ ಸಚಿವ ಸಂಪುಟದ ಸುಮಾರು ಅರ್ಧದಷ್ಟು ಸಚಿವರಿಗೆ ಭಾರಿ ಪ್ರಮಾಣದ ಲಂಚ ನೀಡಿದ್ದರು ಎನ್ನಲಾದ ವಿಷಯ ಬೆಳಕಿಗೆ ಬಂದಿದೆ. ನೋಟು ಅಪನಗದೀಕರಣದ ವೇಳೆ ಕಪ್ಪು-ಬಿಳಿ ದಂಧೆ ನಡೆಸುವಾಗ ಶೇಖರ್ ರೆಡ್ಡಿ 89 ಕೋಟಿ ರು. ಮೌಲ್ಯದ ಹಳೇ ನೋಟು, 9 ಕೋಟಿ ರು. ಮೌಲ್ಯದ ಹೊಸ 2000 ರು.

ನೋಟು ಹಾಗೂ 100 ಕೇಜಿ ಚಿನ್ನದೊಂದಿಗೆ ಸಿಕ್ಕಿಬಿದ್ದಿದ್ದರು. ಬಳಿಕ ಅವರ ವಿರುದ್ಧ ಆದಾಯ ತೆರಿಗೆ ಇಲಾಖೆ ವಿಚಾರಣೆ ಆರಂಭಿಸಿತ್ತು. ವಶಪಡಿಸಿ ಕೊಳ್ಳಲಾದ ಡೈರಿಯೊಂದರಲ್ಲಿ `ಒಪಿಎಸ್' ಎಂದೇ ಹೆಸರಾದ ಪನ್ನೀರಸೆಲ್ವಂ ಹಾಗೂ ತಮಿಳುನಾಡಿನ ಅನೇಕ ಸಚಿವರಿಗೆ ರೆಡ್ಡಿ ಲಂಚ ಸಂದಾಯ ಮಾಡಿದ್ದರು ಎನ್ನಲಾದ ವಿಷಯ ಗೊತ್ತಾಗಿದೆ.`ಆದರೆ ಈ ಡೈರಿ ನನ್ನದಲ್ಲ. ನನಗೆ ಡೈರಿ ಬರೆಯುವ ಹವ್ಯಾಸವೂ ಇಲ್ಲ. ಇದಕ್ಕೆ ನಾನು ಪ್ರತಿಕ್ರಿಯೆ ನೀಡಲ್ಲ' ಎಂದು ಶೇಖರ್ ರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ.

ಡೈರಿಯಲ್ಲಿ `ಒಪಿಎಸ್' ಎಂದು ಬರೆಯಲಾಗಿದೆ. ಜತೆಗೆ ಅವರ ಕಾರ್ಯದರ್ಶಿ ರಮೇಶ್ ಹೆಸರೂ `ಒಪಿಎಸ್' ಮುಂದೆ ಇದೆ. 7 ಬಾರಿ ಇವರ ಹೆಸರು ಉಲ್ಲೇಖಿಸಲಾಗಿದೆ. `ಪೆರಿಯವರು'(ದೊಡ್ಡಮನುಷ್ಯ) ಎಂಬ ಹೆಸರಿನಲ್ಲೂ ಡೈರಿಯಲ್ಲಿ ಬರೆಯಲಾಗಿದೆ. `ಇದು ಬೇರಾರೂ ಅಲ್ಲ. ಒ. ಪನ್ನೀರಸೆಲ್ವಂ' ಎಂಬ ಗುಸುಗಸು ಇದೆ. 2016ರ ಜುಲೈನಿಂದ ನವೆಂಬರ್ 7 ವ್ಯವಹಾರ ನಡೆದ ಬಗ್ಗೆ ಡೈರಿಯಲ್ಲಿ ಬರೆಯಲಾಗಿದೆ. `ಒಪಿಎಸ್ ರಮೇಶ್' ಹಾಗೂ `ಪೆರೆಯವ'ರಿಗೆ ಒಟ್ಟಾರೆ 4.75 ಕೋಟಿ ರು. ನೀಡಲಾಗಿದೆ.

ಸಚಿವರು ಎಂದು ಹೇಳಲಾದ ಕೆಲವರ ಹೆಸರನ್ನೂ ಕೋಡ್ ವರ್ಡ್’ಗಳಲ್ಲಿ ಬರೆಯಲಾಗಿದೆ. `ಟಿಆರ್’ಎಂ' (ಸಾರಿಗೆ ಸಚಿವ), ಎಚ್ ಎಂ (ಆರೋಗ್ಯ ಸಚಿವ) ಎಂಬ ಸಂಕೇತಾಕ್ಷರಗಳ ಮುಂದೆ ಕ್ರಮವಾಗಿ 1 ಕೋಟಿ ರು. ಹಾಗೂ 5 ಕೋಟಿ ರು. ಸಂದಾಯವಾಗಿರುವ ಬಗ್ಗೆ ಉಲ್ಲೇಖವಿದೆ. ಸುಮಾರ 8-10 ಸಚಿವರ ಹೆಸರುಗಳನ್ನು ಸಂಕೇತಾಕ್ಷರಗಳಲ್ಲಿ ಬರೆಯಲಾಗಿದೆ.