ಬೆಂಗಳೂರು ಜೈಲಿನಲ್ಲಿ ಕನ್ನಡ ಕಲಿಯುತ್ತಿದ್ದಾರೆ ಶಶಿಕಲಾ

First Published 14, Jan 2018, 11:55 AM IST
Shashikala Lernt Kannada In Jail
Highlights

ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ತಮಿಳುನಾಡಿನ ರಾಜಕೀಯ ನಾಯಕಿ ಶಶಿಕಲಾ ವಿ.ನಟರಾಜನ್ ಅವರು, ಈಗ ಕನ್ನಡ ಕಲಿಕೆ ಆರಂಭಿಸಿದ್ದಾರೆ ಎಂಬ ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ.

ಬೆಂಗಳೂರು(ಜ.14): ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ತಮಿಳುನಾಡಿನ ರಾಜಕೀಯ ನಾಯಕಿ ಶಶಿಕಲಾ ವಿ.ನಟರಾಜನ್ ಅವರು, ಈಗ ಕನ್ನಡ ಕಲಿಕೆ ಆರಂಭಿಸಿದ್ದಾರೆ ಎಂಬ ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ.

ಕನ್ನಡ ಕಲಿಕೆಗೆ ಆಸಕ್ತಿ ವ್ಯಕ್ತಪಡಿಸಿದ ಶಶಿಕಲಾ ಅವರಿಗೆ ಕಾರಾಗೃಹ ಅಧಿಕಾರಿಗಳು ಪ್ರೋತ್ಸಾಹಿಸಿದ್ದು, ‘ಚಿನ್ನಮ್ಮ’ ಎಂದೇ ಜನಜನಿತವಾಗಿರುವ ಶಶಿಕಲಾಗೆ ಭಾಷೆ ಕಲಿಸಲು ಶಿಕ್ಷಕರನ್ನು ಸಹ ಅಧಿಕಾರಿಗಳು ನೇಮಿಸಿದ್ದಾರೆ. ಈ ಸಂಬಂಧ ‘ಕನ್ನಡಪ್ರಭ’ ಜತೆ ಮಾತನಾಡಿದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಜೆ.ಸೋಮಶೇಖರ್, ಮೂರು ದಿನಗಳ ಹಿಂದೆ ಕನ್ನಡ ಕಲಿಕೆಗೆ ಅವಕಾಶ ಕಲ್ಪಿಸುವಂತೆ ಶಶಿಕಲಾ ವಿನಂತಿಸಿದ್ದರು.

ಈ ಕೋರಿಕೆಗೆ ಹಿನ್ನೆಲೆಯಲ್ಲಿ ಕಾರಾಗೃಹದ ಶಿಕ್ಷಕರಿಂದ ಅವರಿಗೆ ಅಕ್ಷರಾಭ್ಯಾಸ ನಡೆದಿದೆ ಎಂದರು. ಈಗಷ್ಟೆ ಅವರು ಅಕ್ಷರ ಕಲಿಕೆ ಆರಂಭಿಸಿದ್ದಾರೆ. ಪ್ರತಿ ದಿನ ರಿಂದ 2ಗಂಟೆ ಶಶಿಕಲಾ ಅವರ ಸೆಲ್‌ನಲ್ಲೇ ಮಹಿಳಾ ಶಿಕ್ಷಕಿ ಅಕ್ಷರ ಹೇಳಿಕೊಡುತ್ತಿದ್ದಾರೆ.

 ಮುಂದಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಓದುವ ಇಚ್ಛೆ ವ್ಯಕ್ತಪಡಿಸಿದರೆ ಶಶಿಕಲಾ ಅವರಿಗೆ ಪುಸಕ್ತಗಳನ್ನು ಪೂರೈಸಲಾಗುತ್ತದೆ. ಮೇರು ಸಾಹಿತಿಗಳ ಕೃತಿಗಳು ಕಾರಾಗೃಹದ ಗ್ರಂಥಾಲಯದಲ್ಲಿವೆ. ಕನ್ನಡ ಕಲಿಯುವ ಶಶಿಕಲಾ ಅವರ ಆಸಕ್ತಿ ಮೆಚ್ಚುವಂತಹದ್ದು ಎಂದು ಸೋಮಶೇಖರ್ ಹೇಳಿದರು. ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ 4.5 ವರ್ಷಗಳ ಶಿಕ್ಷೆಗೆ ಗುರಿಯಾಗಿರುವ ಶಶಿಕಲಾ ಅವರು, 2017ರ ಫೆಬ್ರವರಿ ತಿಂಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

loader