ಲೋಕಸಭಾ ಚುನಾವನೆ ಮುಕ್ತಾಯವಾಗಿದ್ದು, ಇದೀಗ ಕಾಂಗ್ರೆಸ್ ನಾಯಕರಲ್ಲಿ ಓರ್ವರು ಮೈತ್ರಿ ಸರ್ಕಾರದ ಭವಿಷ್ಯದ ಬಗ್ಗೆ ಮಾತಾಡಿದ್ದಾರೆ.
ದಾವಣಗೆರೆ : ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಸಾಧಿಸಿದ ಬೆನ್ನಲ್ಲೇ ರಾಜ್ಯದಲ್ಲಿನ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಉಳಿವಿನ ಕುರಿತು ಚರ್ಚೆಗಳು ಗರಿಗೆದರಿರುವ ಬೆನ್ನಲ್ಲೇ, ಮೈತ್ರಿ ಸರ್ಕಾರದಲ್ಲಿ ಅದೇನಾಗುತ್ತದೆ ಅನ್ನೋದು ಇವತ್ತೋ ಅಥವಾ ನಾಳೆಯೋ ಗೊತ್ತಾಗಲಿದೆ ಎಂದು ಹಿರಿಯ ಕಾಂಗ್ರೆಸ್ಸಿಗ ಡಾ.ಶಾಮನೂರು ಶಿವಶಂಕರಪ್ಪ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಜನತೆ ಆದೇಶ ಮಾಡಿದ್ದಾಗಿದೆ. ಅದನ್ನು ಎಲ್ಲರೂ ಒಪ್ಪಬೇಕು, ಪಾಲನೆ ಮಾಡಬೇಕಷ್ಟೆ. ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ಮೈತ್ರಿ ಸರ್ಕಾರದ ಭವಿಷ್ಯವು ಏನಾಗುತ್ತದೆಂಬುದೂ ಇವತ್ತೋ, ನಾಳೆಯೋ ಗೊತ್ತಾಗುತ್ತದೆ. ಮೈತ್ರಿ ಕೂಟದಲ್ಲಿ ಏನಾಗುತ್ತದೋ ನೋಡೋಣ ಎನ್ನುವ ಮೂಲಕ ಮೈತ್ರಿ ಸರ್ಕಾರ ಸುಭದ್ರವಾಗಿಲ್ಲ ಎಂಬ ಪರೋಕ್ಷ ಸುಳಿವು ನೀಡಿದ್ದಾರೆ.
ಕಾಂಗ್ರೆಸ್ಸಿಗೆ ಒಂದೇ ಸ್ಥಾನ ಬಂದಿರುವುದು ಜನಾದೇಶ. ಅದನ್ನು ನಾವು ಪಾಲಿಸಬೇಕಾಗುತ್ತದೆ ಎಂದ ಶಾಮನೂರು ಶಿವಶಂಕರಪ್ಪ, ಸಿದ್ದರಾಮಯ್ಯ ಬಗ್ಗೆ ನಾನು ಮಾತನಾಡುವುದಿಲ್ಲ. ನೀವೇ ಸಿದ್ದರಾಮಯ್ಯನಿಗೆ ಕೇಳಿ ಎನ್ನುತ್ತಾ ತಮ್ಮ ವಾಹನವೇರಿದರು.
