ಕಾವೇರಿ ವಿಚಾರದಲ್ಲಿ ರಾಷ್ಟ್ರೀಯ ಬಿಜೆಪಿಯ ನಿಲುವನ್ನ ಬಹಿರಂಗಪಡಿಸಿದರಾ ಶೈನಾ?
ನವದೆಹಲಿ(ಸೆ.22): ಕಾವೇರಿ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಲು ಪ್ರಧಾನಮಂತ್ರಿ ನರೇಂದ್ರಮೋದಿ ಮುಂದಾಗುತ್ತಿಲ್ಲ. ಇತ್ತ ರಾಜ್ಯ ನಾಯಕರೂ ಸಹ ಪ್ರಧಾನಿ ಮಧ್ಯಸ್ಥಿಕೆ ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಮಧ್ಯಸ್ಥಿಕೆ ವಹಿಸುವುದಿರಲಿ ಕಾವೇರಿ ವಿಚಾರದ ಬಗ್ಗೆ ತುಟಿ ಬಿಚ್ಚಲೂ ಮೋದಿ ಸಿದ್ಧರಿಲ್ಲ. ಇತ್ತ, ಜನ ಎಷ್ಟೇ ಗೋಗರೆದರೂ ಬಿಜೆಪಿಯ ಸಂಸದರು ಒತ್ತಡ ಹೇರಿ ಪ್ರಧಾನಿಗಳ ಗಮನ ಸೆಳೆಯಲು ಸಿದ್ಧರಿಲ್ಲ. ಸಿಎಂ ಕರೆದಿದ್ದ ಸರ್ವಪಕ್ಷ ಸಭೆಗೂ ಹಾಜರಾಗದೇ ಬಿಜೆಪಿ ನಾಯಕರು ನಿರ್ಲಕ್ಷ್ಯ ವಹಿಸಿದ್ದು ಜನರ ಆಕ್ರೋಶಕ್ಕೂ ತುತ್ತಾಗಿದೆ.
ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ, ಇತ್ತ ಬಿಜೆಪಿಯ ವಕ್ತಾರೆಯೊಬ್ಬರು ನೀಡಿರುವ ಹೇಳಿಕೆ ಭಾರೀ ಸಂಶಯಕ್ಕೆ ಎಡೆಮಾಡಿದೆ. ತಮಿಳುನಾಡಿಗೆ ನೀರು ಬಿಡಬೇಕೆಂಬುದು ರಾಷ್ಟ್ರ ಬಿಜೆಪಿಯ ನಿಲುವಾ..? ಎಂಬ ಪ್ರಶ್ನೆ ಹುಟ್ಟುಹಾಕಿದೆ.
ಹೌದು, ಬಿಜೆಪಿಯ ರಾಷ್ಟ್ರೀಯ ವಕ್ತಾರೆ ಎನ್.ಸಿ. ಶೈನಾ, ` ಕರ್ನಾಟಕ ತಮಿಳುನಾಡಿಗೆ ನೀರು ಬಿಡಬೇಕು ಎಂದು ಸುಪ್ರೀಂಕೋರ್ಟ್ ಸ್ಪಷ್ಟ ಆದೇಶ ನೀಡಿದೆ.. ಸ್ವಾರ್ಥವನ್ನ ಬಿಟ್ಟು ನೀರು ಬಿಡಬೇಕು, ಭಾರತ ದೇಶ ಒಂದು ಎಂಬುವುದನ್ನ ಮನಗಾಣಬೇಕು' ಎಂದು ಹೇಳಿದ್ದಾರೆ.
ಕೃಪೆ: NDTV
