ಒಂದೇ ದೇಶ, ಭಾಷೆ, ಚುನಾವಣೆ, ಧರ್ಮ, ತೆರಿಗೆಯಂತಹ ಸಿದ್ಧಾಂತಗಳನ್ನು ಹೇರುವ ಮೂಲಕ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಭಾರತೀಯ ಒಕ್ಕೂಟ ವ್ಯವಸ್ಥೆ ಧ್ವಂಸಗೊಳಿಸುತ್ತಿವೆ ಎಂದು ರಾಜ್ಯಸಭಾ ಸದಸ್ಯ, ಸಿಪಿಐ(ಎಂ) ಮುಖಂಡ ಸೀತಾರಾಂ ಯೆಚೂರಿ ಆರೋಪಿಸಿದರು.

ಮೈಸೂರು(ಜೂ.12): ಒಂದೇ ದೇಶ, ಭಾಷೆ, ಚುನಾವಣೆ, ಧರ್ಮ, ತೆರಿಗೆಯಂತಹ ಸಿದ್ಧಾಂತಗಳನ್ನು ಹೇರುವ ಮೂಲಕ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಭಾರತೀಯ ಒಕ್ಕೂಟ ವ್ಯವಸ್ಥೆ ಧ್ವಂಸಗೊಳಿಸುತ್ತಿವೆ ಎಂದು ರಾಜ್ಯಸಭಾ ಸದಸ್ಯ, ಸಿಪಿಐ(ಎಂ) ಮುಖಂಡ ಸೀತಾರಾಂ ಯೆಚೂರಿ ಆರೋಪಿಸಿದರು.

ನಗರದಲ್ಲಿ ಭಾನುವಾರ ನಡೆದ ‘ಸಂವಿಧಾನ ಉಳಿಸಲು ರಾಜ್ಯ ಮಟ್ಟದ ದೇಶಪ್ರೇಮಿ' ಸಮಾವೇಶ ಉದ್ಘಾಟಿಸಿ ಮಾತನಾಡಿ, ಸಂವಿಧಾನದ ಅನುಚ್ಛೇದ 356 ಅನ್ನು ತೆಗೆದು ಹಾಕಲು ಸಂಸತ್ತಿನಲ್ಲಿ ಚರ್ಚಿಸದ ಮೋದಿ ಸರ್ಕಾರ ಹಿಂಬಾಗಿಲಿನಿಂದ ರಾಜ್ಯ ವಿಧಾನಮಂಡಲ ಅಧಿಕಾರವನ್ನು ತನ್ನ ಹತೋಟಿಗೆ ತೆಗೆದುಕೊಳ್ಳಲು ಯತ್ನಿಸುತ್ತಿದೆ. ಮುಂದೆ ರಾಜ್ಯ ಸರ್ಕಾರಗಳು ಕೇಂದ್ರದ ಮಾತು ಕೇಳದಿದ್ದರೆ ತನ್ನ ಹಕ್ಕು ಚಲಾಯಿಸಿ ಸರ್ಕಾರವನ್ನು ಕಿತ್ತೊಗೆಯುವ ಹುನ್ನಾರ ಇದರ ಹಿಂದೆ ಅಡಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ದೇಶದಲ್ಲಿ ಜಿಎಸ್‌ಟಿ ತಂದಿದ್ದರಿಂದ ಅನೇಕ ಸಮಸ್ಯೆಗಳು ಎದುರಾಗಿವೆ.

ರಾಜ್ಯಗಳಲ್ಲಿ ಪ್ರಾಕೃತಿಕ ವಿಕೋಪಗಳು ನಡೆದಾಗ ಹಣಕ್ಕಾಗಿ ಕೇಂದ್ರದ ಮುಂದೆ ಭಿಕ್ಷಾ ಪಾತ್ರೆ ಹಿಡಿಯಬೇಕಾಗುತ್ತದೆ. ಗೋಹತ್ಯೆ ಕಾನೂನುಗಳು ರಾಜ್ಯ ಸರ್ಕಾರಗಳ ಪರಿಧಿಗೆ ಬರುವುದರಿಂದ ಕೇಂದ್ರವೇ ಗೋವುಗಳ ಮಾರಾಟ ನಿರ್ಬಂಧ ಕಾಯಿದೆ ತಂದು ರಾಜ್ಯಗಳ ಮೇಲೆ ಹೇರುತ್ತಿದೆ. ಆರ್‌ಎಸ್‌ಎಸ್‌ನ ರಾಜಕೀಯ ಅಸ್ತ್ರವಾಗಿ ಬಿಜೆಪಿ ಕಾರ್ಯನಿರ್ವಹಿಸುತ್ತಿದೆ ಎಂದು ದೂರಿದರು.