ಡೆಬಿಟ್‌ ಹಾಗೂ ಕ್ರೆಡಿಟ್‌ ಕಾರ್ಡ್‌ ಬಳಕೆಗೆ ಕಳೆದ 50 ದಿನಗಳಿಂದ ವಿನಾಯ್ತಿ ನೀಡಲಾಗಿದ್ದ ಸೇವಾ ತೆರಿಗೆಯನ್ನು ಹೊಸ ವರ್ಷದ ಮೊದಲ ದಿನದಿಂದಲೇ ಗ್ರಾಹಕರಿಗೆ ಮತ್ತೆ ವಿಧಿಸಲಾಗುತ್ತದೆ.

-ಎನ್‌ ಎಲ್‌ ಶಿವಮಾದು ಬೆಂಗಳೂರು
ನೋಟು ಅಮಾನ್ಯ ಮಾಡಿದ ದಿನದಿಂದ ಡೆಬಿಟ್‌ ಹಾಗೂ ಕ್ರೆಡಿಟ್‌ ಕಾರ್ಡ್‌ ಬಳಕೆಗೆ ಕೇಂದ್ರ ಸರ್ಕಾರದ ಆದೇಶದಂತೆ ರಿಯಾಯಿತಿ ನೀಡಿದ್ದ ಬ್ಯಾಂಕುಗಳು, ಆರ್‌ಬಿಐ ಸುತ್ತೋಲೆ ಪ್ರಕಾರ ಹೊಸ ವರ್ಷದ ಮೊದಲ ದಿನದಿಂದ ಎಂದಿನಂತೇ ಸೇವಾ ತೆರಿಗೆ ವಿಧಿಸಲಿವೆ.
ಡೆಬಿಟ್‌ ಹಾಗೂ ಕ್ರೆಡಿಟ್‌ ಕಾರ್ಡ್‌ ಬಳಕೆಗೆ ಕಳೆದ 50 ದಿನಗಳಿಂದ ವಿನಾಯ್ತಿ ನೀಡಲಾಗಿದ್ದ ಸೇವಾ ತೆರಿಗೆಯನ್ನು ಹೊಸ ವರ್ಷದ ಮೊದಲ ದಿನದಿಂದಲೇ ಗ್ರಾಹಕರಿಗೆ ಮತ್ತೆ ವಿಧಿಸಲಾಗುತ್ತದೆ. ಪ್ರತಿ ವ್ಯವಹಾರಕ್ಕೆ ಕನಿಷ್ಠ ಶೇ.3ರಷ್ಟುಸೇವಾ ತೆರಿಗೆ ಅನ್ವಯವಾಗಲಿದ್ದು, ಈ ಹೊರೆಯನ್ನು ಗ್ರಾಹಕರು ಭರಿಸುವುದು ಅನಿವಾರ್ಯವಾಗಲಿದೆ.
ನೋಟು ಅಮಾನ್ಯದಿಂದ ಚಿಲ್ಲರೆ ಸಮಸ್ಯೆ ತಲೆದೋರಿದ್ದರಿಂದ ಪರಿಸ್ಥಿತಿ ನಿಯಂತ್ರಿಸಲು ಕೇಂದ್ರ ಸರ್ಕಾರ ಆನ್‌ಲೈನ್‌ ವ್ಯವಹಾರ, ಕ್ರೆಡಿಟ್‌, ಡೆಬಿಟ್‌ ಕಾರ್ಡ್‌ ಬಳಸುವಂತೆ ಮನವಿ ಮಾಡಿತ್ತು. ಇದನ್ನು ಉತ್ತೇಜಿಸುವ ಸಲುವಾಗಿ 50 ದಿನಗಳಿಂದ ಯಾವುದೇ ವ್ಯವಹಾರಕ್ಕೆ ಸೇವಾ ತೆರಿಗೆಗೆ ವಿನಾಯ್ತಿ ನೀಡಿತ್ತು. ಇದೀಗ ವಿನಾಯ್ತಿ ಅವಧಿ ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ಸೇವಾ ತೆರಿಗೆ ಪಾವತಿಸಬೇಕಾಗುತ್ತದೆ.
ಪ್ರತಿ ಬ್ಯಾಂಕುಗಳು ಗ್ರಾಹಕರ ಮೇಲೆ ವಿಧಿಸಬೇಕಿರುವ ಗ್ರಾಹಕ ರಿಯಾಯಿತಿ ದರವನ್ನು (ಎಂಡಿಆರ್‌) ಭಾರತೀಯ ರಿಸರ್ವ ಬ್ಯಾಂಕ್‌ (ಆರ್‌ಬಿಐ) ನಿಗದಿಗೊಳಿಸಿದೆ. ಆದರೆ, ಖಾಸಗಿ ವಲಯದ ಬ್ಯಾಂಕುಗಳು, ರಾಷ್ಟ್ರೀಯ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು ಮತ್ತು ಗ್ರಾಮೀಣ ವಲಯದ ಬ್ಯಾಂಕುಗಳ ಮ್ಯಾನೇಜ್‌ಮೆಂಟ್‌ಗಳು ಒಂದೊಂದು ರೀತಿಯ ದರಗಳನ್ನು ವಿಧಿಸಲಿವೆ. ಖರೀದಿ ವೇಳೆ ಸ್ವೈಪಿಂಗ್‌ ಮಷಿನ್‌ ಬಳಸಿದರೆ, ಎಂಡಿಆರ್‌ ಜತೆಗೆ ಸೇವಾ ತೆರಿಗೆಯನ್ನು ಗ್ರಾಹಕರು ಪಾವತಿಸಬೇಕಾಗುತ್ತದೆ.

(ಕನ್ನಡ ಪ್ರಭ)