ಹೈದರಾಬಾದ್(ಜು.28): ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಜೈಪಾಲ್ ರೆಡ್ಡಿ ವಿಧಿವಶರಾಗಿದ್ದಾರೆ.

ನ್ಯುಮೋನಿಯಾ ರೋಗದಿಂದ ಬಳಲುತ್ತಿದ್ದ 77 ವರ್ಷದ ರೆಡ್ಡಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರೆಡ್ಡಿ ನಿಧನ ಹೊಂದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

1984 ರಿಂದ ದಶಕಕ್ಕೂ ಹೆಚ್ಚು ಕಾಲ ಸಂಸದರಾಗಿದ್ದ ಜೈಪಾಲ್ ರೆಡ್ಡಿ, ವಿವಿಧ ಅವಧಿಯಲ್ಲಿ ಪ್ರಮುಖ ಖಾತೆಗಳನ್ನೂ ನಿರ್ವಹಿಸಿದ್ದರು. ಐಕೆ ಗುಜ್ರಾಲ್ ಸರ್ಕಾರದಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವರಾಗಿದ್ದ ರೆಡ್ಡಿ, ಯುಪಿಎ -1 ಸರ್ಕಾರದ ಅವಧಿಯಲ್ಲಿ ನಗರಾಭಿವೃದ್ದಿ ಮತ್ತು ಸಂಸ್ಕೃತಿ ಖಾತೆ ನಿರ್ವಹಿಸಿದ್ದರು.

ಅದರಂತೆ ಯುಪಿಎ -2 ವಧಿಯಲ್ಲಿ ಜೈಪಾಲ್ ಅವರನ್ನು ಮತ್ತೆ ನಗರಾಭಿವೃದ್ಧಿ ಸಚಿವರನ್ನಾಗಿ ನೇಮಕ ಮಾಡಲಾಗಿತ್ತು.  ನಂತರ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವರಾಗಿಯೂ ಜೈಪಾಲ್ ರೆಡ್ಡಿ ಸೇವೆ ಸಲ್ಲಿಸಿದ್ದರು. ಅಲ್ಲದೆ ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಭೂ ವಿಜ್ಞಾನ ಸಚಿವರಾಗಿಯೂ ಅವರು ಸೇವೆ ಸಲ್ಲಿಸಿದ್ದರು.

ಇನ್ನು ಜೈಪಾಲ್ ರೆಡ್ಡಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ಸೇರಿದಂತೆ ವಿವಿಧ ಗಣ್ಯರು ಕಂಬನಿ ಮಿಡಿದಿದ್ದಾರೆ.