ಇಂದು ಕುಂದಾನಗರಿಯಲ್ಲಿ ನಡೆದ ಮಹಾರ್ಯಾಲಿಯಲ್ಲಿ ಲಿಂಗಾಯಿತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಬೇಕು ಎಂದು ರಾಜ್ಯದ ಪ್ರಮುಖ ಮಠಾಧೀಶರ ಸಮ್ಮುಖದಲ್ಲಿ ಸರ್ವಾನುಮತದ ನಿರ್ಣಯ ಅಂಗೀಕರಿಸಲಾಯಿತು. ಈ ನಿರ್ಣಯ ಹೊರ ಬೀಳುತ್ತಿದ್ದಂತೆ ಜನರಿಂದ ಭಾರೀ ಕರತಾಡನ ವ್ಯಕ್ತವಾಯಿತು.
ಬೆಳಗಾವಿ (ಆ.22): ಇಂದು ಕುಂದಾನಗರಿಯಲ್ಲಿ ನಡೆದ ಮಹಾರ್ಯಾಲಿಯಲ್ಲಿ ಲಿಂಗಾಯಿತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಬೇಕು ಎಂದು ರಾಜ್ಯದ ಪ್ರಮುಖ ಮಠಾಧೀಶರ ಸಮ್ಮುಖದಲ್ಲಿ ಸರ್ವಾನುಮತದ ನಿರ್ಣಯ ಅಂಗೀಕರಿಸಲಾಯಿತು. ಈ ನಿರ್ಣಯ ಹೊರ ಬೀಳುತ್ತಿದ್ದಂತೆ ಜನರಿಂದ ಭಾರೀ ಕರತಾಡನ ವ್ಯಕ್ತವಾಯಿತು.
ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆ ಆಗ್ರಹಿಸಿ ನಗರದ ಕೆಎಲ್‌ಇ ಸಂಸ್ಥೆಯ ಲಿಂಗರಾಜು ಕಾಲೇಜಿನ ಮೈದಾನದಲ್ಲಿ ನಡೆದ ಮಹಾರ‌್ಯಾಲಿಯಲ್ಲಿ ಮಾಜಿ ಸಚಿವ ಬಸವರಾಜ ಹೊರಟ್ಟಿ ಮಂಡಿಸಿದ ಈ ನಿರ್ಣಯಕ್ಕೆ ಸರ್ಕಾರದ ಮುಖ್ಯಸಚೇತಕ ಅಶೋಕ ಪಟ್ಟಣ ಅನುಮೋದಿಸಿದರು. ಇದಕ್ಕೆ ನೆರೆದಿದ್ದ ಮರಾಠಾಧೀಶರು ಮತ್ತು ಒಂದೂವರೆ ಲಕ್ಷಕ್ಕೂ ಅಧಿಕ ಸಮಾಜದ ಶರಣ-ಶರಣೆಯರು ಸಾಕ್ಷಿಯಾದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಗದಗಿನ ತೋಂಟದಾರ್ಯ ಸಂಸ್ಥಾನ ಮಠದ ಡಾ. ಸಿದ್ಧಲಿಂಗ ಮಹಾಸ್ವಾಮೀಜಿ ಮಾತನಾಡಿ, ಲಿಂಗಾಯತ ಧರ್ಮ ಸ್ವತಂತ್ರ ಆಗಬೇಕೆಂದು ಒತ್ತಾಯಿಸಿ, ವಿಶೇಷ ನಾಡಾದ ಬೆಳಗಾವಿಯಲ್ಲಿ ಧರ್ಮಿಯರೆಲ್ಲರೂ ಸೇರಿರುವುದು ಐತಿಹಾಸಿಕ ಕ್ಷಣ. ಸ್ವಾತಂತ್ರ್ಯ ಪೂರ್ವದಲ್ಲಿ ಚತುರಾಚಾರ್ಯರು ಮಾಡಿದ ಅನ್ಯಾಯದಿಂದ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಮಾನ್ಯತೆ ಸಿಗಲಿಲ್ಲ. ಈಗ ಕಾಲ ಪಕ್ವವಾಗಿದ್ದು, ಹೋರಾಟ ನಡೆಸಬೇಕಾದ ಅಗತ್ಯತೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಬಸವಣ್ಣನ ಅನುಯಾಯಿಯಾಗಿದ್ದಾರೆ. ಲಿಂಗಾಯತ ಸ್ವತಂತ್ರ ಧರ್ಮ ರಚನೆಯಾಗಬೇಕು ಎಂಬ ಬೇಡಿಕೆಯ ಹಿನ್ನೆಲೆಯಲ್ಲಿ ಸಮಿತಿ ರಚಿಸಿ, ಸಮಿತಿಯ ವರದಿ ತರಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ. ಶಿವಾನಂದ ಜಾಮದಾರ ಅವರಿಗೆ ಬಸವ ಧರ್ಮದ ಬಗೆಗಿನ ಆಳವಾದ ಜ್ಙಾನ ಇದ್ದು, ನಾಡಿನ ಮಠಾಧೀಶರಿಗೆ ಕಾರ್ಯಾಗಾರದ ಮೂಲಕ ಬಸವ ಧರ್ಮದ ತತ್ವ ಸಾರವನ್ನು ತಿಳಿಸಬೇಕು ಎಂದು ಕೋರಿದರು.
ಕೂಡಲ ಸಂಗಮ ಬಸವ ಧರ್ಮ ಪೀಠದ ಮಾತೆ ಮಹಾದೇವಿ ಮಾತನಾಡಿ, ಮೋಹನ ಭಾಗವತರು ಪ್ರಭಾವಿಗಳು ಹಾಗೂ ಎತ್ತರದ ಸ್ಥಾನದಲ್ಲಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಹೇಳಿ, ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಲು ಒತ್ತಾಯಿಸಬೇಕು. ವೀರಶೈವ ಎನ್ನುವ ಪದವನ್ನು ದಬ್ಬಾಳಿಕೆಯಿಂದ ಲಿಂಗಾಯತರ ಮೇಲೆ ಹೇರಳಾಗಿದೆ. ಬಿಜೆಪಿ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದ ಮಾತೆ ಮಹಾದೇವಿ ಚುನಾವಣೆಯಲ್ಲಿ ಟಿಕೆಟ್ ಪಡೆದುಕೊಳ್ಳುವಾಗ ಲಿಂಗಾಯತ ಕೋಟಾದಡಿ ಟಿಕೆಟ್ ಪಡೆಯುತ್ತಿರಿ. ಹುಟ್ಟಿದಾಗ ಲಿಂಗಾಯತ ಧರ್ಮ ಸಂಸ್ಕಾರ ಪಡೆಯುತ್ತಿರಿ. ಸತ್ತಾಗ ಲಿಂಗಾಯತ ಧರ್ಮದಂತೆ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ. ಆದರೆ ಬಿಜೆಪಿ ಸಂಸ್ಕಾರದಂತೆ ಅಲ್ಲ ಎಂದು ಗುಡುಗಿದರು. ಈ ಹೋರಾಟದಿಂದ ದೂರ ಉಳಿಯದೇ ಕೈ ಜೋಡಿಸಬೇಕು. ಲಿಂಗಾಯತ ಸಂಸದರು ಲೋಕಸಭೆಯಲ್ಲಿ ಧರಣಿ ನಡೆಸಿ, ಲಿಂಗಾಯತ ಧರ್ಮದ ಮಾನ್ಯತೆಗಾಗಿ ಹೋರಾಟ ನಡೆಸಬೇಕು ಎಂದು ಸಲಹೆ ನೀಡಿದರು.
ಬೆಳಗಾವಿಯ ರುದ್ರಾಕ್ಷಿ ಮಠದ ಡಾ. ಸಿದ್ದರಾಮ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿ, ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುವುದರಿಂದ ದೇಶದ ಸಮಗ್ರತೆ, ಅಖಂಡತೆ, ಏಕತೆಗೆ ಧಕ್ಕೆಯಾಗುವುದಿಲ್ಲ. ಲಿಂಗಾಯತ ಧರ್ಮದ ಹಕ್ಕೊತ್ತಾಯಕ್ಕೆ ಕರ್ನಾಟಕ, ಆಂದ್ರಪ್ರದೇಶ, ಮಹಾರಾಷ್ಟ್ರ ಮತ್ತು ತೆಲಂಗಾಣ, ತಮಿಳುನಾಡಿನಿಂದ ಶರಣ-ಶರಣೆಯರು ಆಗಮಿಸಿದ್ದಾರೆ. ಈ ಹೋರಾಟ ಸ್ವತಂತ್ರ ಧರ್ಮ ಆಗುವವರೆಗೆ ನಿರಂತರವಾಗಿ ನಡೆಯಲಿದೆ ಎಂದರು.
