ಖಂಡೇರಿ ಈ ವರ್ಷದ ಕೊನೆಯಲ್ಲಿ ನೌಕಾ ಸೇನೆಗೆ ಸೇರ್ಪಡೆಗೊಳ್ಳಲಿದೆ.
ಮುಂಬೈ(ಜ.12): ಎರಡನೇ ಸ್ಕಾರ್ಪಿನ್ ದರ್ಜೆಯ ರಹಸ್ಯ ಜಲಾಂತರ್ಗಾಮಿ ಖಂಡೇರಿ ಇಂದು ಲೋಕಾರ್ಪಣೆಗೊಂಡಿತು.
ನೌಕಾ ಪಡೆಗಳ ದಾಳಿಯಿಂದ ರಕ್ಷಿಸಿಕೊಳ್ಳಬಲ್ಲ ಅತ್ಯುತ್ಕೃಷ್ಟ ಗುಣಮಟ್ಟದ ಈ ಜಲಾಂತರ್ಗಾಮಿಗೆ ಮಜಗಾಂವ್ ಡಾಕ್ ಶಿಪ್'ಬಿಲ್ಡರ್ಸ್ ಲಿಮಿಟೆಡ್'ನಲ್ಲಿ ಪರೀಕ್ಷಾರ್ಥ ಪ್ರಯೋಗಕ್ಕೆ ಚಾಲನೆ ಸಿಕ್ಕಿತು.
ಉಷ್ಣವಲಯ ಸೇರಿದಂತೆ ಎಲ್ಲ ವಲಯದಲ್ಲೂ ಈ ಜಲಾಂತರ್ಗಾಮಿ ಕಾರ್ಯ ನಿರ್ವಹಿಸಬಲ್ಲುದು. ನೌಕಾ ಸೇನೆಯ ಗುರಿಯನ್ನು ತಲುಪಲು ಬೇಕಾದ ಅಗತ್ಯ ವ್ಯವಹಾರಗಳನ್ನು ನಿರ್ವಹಿಸುವ ಎಲ್ಲ ರೀತಿಯ ಸಂವಹನ ಸೌಲಭ್ಯಗಳು ಈ ನೌಕೆಯಲ್ಲಿವೆ. ಮೇಲ್ಮೈ ಯುದ್ಧ ನಿರೋಧಕ, ಜಲಾಂತರ್ಗಾಮಿ ಯುದ್ಧ ನಿರೋಧಕ, ಗುಪ್ತಚರ ಮಾಹಿತಿ ಕಲೆಹಾಕುವುದು, ಪ್ರದೇಶದ ಕಣ್ಗಾವಲು ಇರಿಸುವುದು ಸೇರಿದಂತೆ ಎಲ್ಲ ಅತ್ಯಾಧುನಿಕ ವ್ಯವಸ್ಥೆಗಳೂ ನೌಕೆಯಲ್ಲಿವೆ. ಖಂಡೇರಿ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಕ್ಷಣಾ ಖಾತೆಯ ಸಹಾಯಕ ಸಚಿವ ಸುಭಾಷ್ ಭಾಮ್ರೆ ವಹಿಸಿದ್ದರು. ನೌಕಾ ಸೇನಾ ಮುಖ್ಯಸ್ಥ ಅಡ್ಮಿರಲ್ ಸುನಿಲ್ ಲಾಂಬಾ ಸಮ್ಮುಖದಲ್ಲಿ, ಸಚಿವರ ಪತ್ನಿ ಬೀನಾ ಭಾಮ್ರೆ ಜಲಾಂತರ್ಗಾಮಿ ಲೋಕಾರ್ಪಣೆ ಮಾಡಿದರು.
‘‘ಭಾರತೀಯ ನೌಕಾ ಸೇನೆಯು 2017ರಲ್ಲಿ ಜಲಾಂತರ್ಗಾಮಿ ಶಸ್ತ್ರಾಸ್ತ್ರದ ಸ್ವರ್ಣ ಮಹೋತ್ಸವ ಆಚರಿಸುತ್ತಿರುವ ಹಿನ್ನೆಲೆಯಲ್ಲಿ, ಪ್ರಾಜೆಕ್ಟ್ 75 ಜಲಾಂತರ್ಗಾಮಿಗಳ ಸೇರ್ಪಡೆ ನಮ್ಮ ಜಲಾಂತರ್ಗಾಮಿ ಸಾಮರ್ಥ್ಯದಲ್ಲಿ ಹೊಸ ಅಧ್ಯಾಯದ ಆರಂಭಕ್ಕೆ ಕಾರಣವಾಗಲಿದೆ’’ ಎಂದು ಅಡ್ಮಿರಲ್ ಲಾಂಬಾ ಈ ಸಂದರ್ಭ ಹೇಳಿದರು.
ಖಂಡೇರಿ ಜಗತ್ತಿನ ಅತ್ಯುತ್ತಮ ಜಲಾಂತರ್ಗಾಮಿಗಳ ಸಾಲಿಗೆ ಸೇರಿದೆ. ಪ್ರಥಮ ದರ್ಜೆಯ ಜಲಾಂತರ್ಗಾಮಿ ಕಲವರಿ, ಪ್ರಸ್ತುತ ಸಮುದ್ರದಲ್ಲಿ ಪ್ರಯೋಗಾರ್ಥ ಕಾರ್ಯ ನಿರ್ವಹಿಸುತ್ತಿದೆ. ಈ ವರ್ಷದ ಮಧ್ಯಂತರದಲ್ಲಿ ಸೇನೆಗೆ ಸೇರ್ಪಡೆಗೊಳ್ಳಲಿದೆ. ಖಂಡೇರಿ ಈ ವರ್ಷದ ಕೊನೆಯಲ್ಲಿ ನೌಕಾ ಸೇನೆಗೆ ಸೇರ್ಪಡೆಗೊಳ್ಳಲಿದೆ.
