ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡ ಕಾಂಗ್ರೆಸ್, ಮತ್ತೆ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರದ ವಿರುದ್ಧ ಕಿಡಿಕಾರಿದ ಕಾಂಗ್ರೆಸ್.

Add Asianetnews Kannada as a Preferred SourcegooglePreferred

ಸೇವಾಗ್ರಾಮ (ಮಹಾರಾಷ್ಟ್ರ): ನರೇಂದ್ರ ಮೋದಿ ಸರ್ಕಾರದ ವಿರುದ್ಧ ‘2ನೇ ಸ್ವಾತಂತ್ರ್ಯ ಸಂಗ್ರಾಮ’ಕ್ಕೆ ಕಾಂಗ್ರೆಸ್ ಪಕ್ಷ ಕರೆ ನೀಡಿದೆ. ‘ಮಹಾತ್ಮಾ ಗಾಂಧೀಜಿಅವರ ಹತ್ಯೆಗೆ ದ್ವೇಷ ಮತ್ತು ಹಿಂಸೆ ಕಾರಣವಾಗಿತ್ತು. ಈಗ ಇದೇ ದ್ವೇಷ ಮತ್ತು ಹಿಂಸೆಯನ್ನು ಮೋದಿ ಸರ್ಕಾರ ಪ್ರಚುರಪಡಿಸುತ್ತಿದ್ದು, ಅದರ ವಿರುದ್ಧ 2ನೇ ಸ್ವಾತಂತ್ರ್ಯ ಸಂಗ್ರಾಮ ನಡೆಸಬೇಕಿದೆ’ ಎಂದು ಪಕ್ಷ ಹೇಳಿದೆ. 

ಮಹಾರಾಷ್ಟ್ರದ ವರ್ಧಾ ಜಿಲ್ಲೆಯಲ್ಲಿರುವ ಗಾಂಧಿ ಸೇವಾ ಗ್ರಾಮ ಆಶ್ರಮದಲ್ಲಿ ಗಾಂಧಿ ಜಯಂತಿ ನಿಮಿತ್ತ ನಡೆದ ‘ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ’ ಸಭೆಯಲ್ಲಿ ಈ ಮಹತ್ವದ ನಿರ್ಣಯವನ್ನು ಅಂಗೀಕರಿಸಲಾಯಿತು.

ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ, ‘ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯು ಗಾಂಧೀಜಿ ಅವರ ಭಾರತೀಯ ಚಿಂತನಾ ಪ್ರಕ್ರಿಯೆಯನ್ನು ಸ್ಮರಿಸುತ್ತ 2 ನಿರ್ಣಯ ಅಂಗೀಕರಿಸಿದೆ.

ಮೊದಲನೆಯದಾಗಿ, ‘ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ‘ಜೈ ಜವಾನ್ ಜೈ ಕಿಸಾನ್’ ಎಂಬುದು ಕೇವಲ ಘೋಷಣೆಯಲ್ಲ. ಅದು ಜೀವನ ಶೈಲಿ. ರೈತರ ಹಿತಾಸಕ್ತಿಗಾಗಿ ಹೋರಾಡಲು ಕಾಂಗ್ರೆಸ್ ಬದ್ಧವಾಗಿದೆ’ ಎಂಬ ಗೊತ್ತುವಳಿ ಸ್ವೀಕರಿಸಲಾಗಿದೆ’ ಇದೇ ವೇಳೆ, ‘ಮೋದಿ ಸರ್ಕಾರವು ದ್ವೇಷ, ಭಯ,
ವಿಭಜನಕಾರಿ ನೀತಿ, ಧ್ರುವೀಕರಣ, ಚರ್ಚೆ-ವಿರೋಧದ ದನಿ ಅಡಗಿಸುವಿಕೆಯಂತಹ ಕೃತ್ಯಗಳಲ್ಲಿ ತೊಡಗಿದೆ. ಇದರ ವಿರುದ್ಧ ‘ದ್ವಿತೀಯ ಸ್ವಾತಂತ್ರ್ಯ ಸಂಗ್ರಾಮ’ ನಡೆಸಲು ಕಾಂಗ್ರೆಸ್ ಪಕ್ಷ ಎರಡನೇ ಗೊತ್ತುವಳಿ ಅಂಗೀಕರಿಸಿದೆ’ ಎಂದರು.