ಅಹಮದಾಬಾದ್‌[ಜ.02]: ಶಾಲಾ ತರಗತಿಗಳಲ್ಲಿ ಶಿಕ್ಷಕರು ಹಾಜರಾತಿ ತೆಗೆದುಕೊಳ್ಳುವಾಗ ವಿದ್ಯಾರ್ಥಿಗಳು ‘ಯೆಸ್‌ ಸರ್‌’ ಅಥವಾ ‘ಯೆಸ್‌ ಮೇಡಂ’ ಎಂದು ಕೂಗಿ ಹೇಳಿ ತಾವು ಹಾಜರಿರುವುದನ್ನು ಖಚಿತಪಡಿಸುವುದು ಸರ್ವೇ ಸಾಮಾನ್ಯ. ಆದರೆ ಬಿಜೆಪಿ ಆಳ್ವಿಕೆಯ ಗುಜರಾತಿನಲ್ಲಿ ಇನ್ನು ಮುಂದೆ ಆ ರೀತಿ ಹೇಳುವಂತಿಲ್ಲ. ಬದಲಾಗಿ ‘ಜೈಹಿಂದ್‌’ ಅಥವಾ ‘ಜೈ ಭಾರತ್‌’ ಎಂಬ ಪದಗಳನ್ನು ಬಳಸಬೇಕು ಎಂದು ಗುಜರಾತ್‌ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ಒಬ್ಬ ವಿದ್ಯಾರ್ಥಿ ತನ್ನ ಶಾಲಾ ದಿನಗಳಲ್ಲಿ ಕನಿಷ್ಠ 10 ಸಾವಿರ ಬಾರಿಯಾದರೂ ಯೆಸ್‌ ಸರ್‌/ಯೆಸ್‌ ಮೇಡಂ ಎಂದು ಹೇಳುತ್ತಾನೆ. ಅದರ ಬದಲಾಗಿ ಜೈಹಿಂದ್‌/ ಜೈಭಾರತ್‌ ಎಂದು ಹೇಳಿದರೆ ವಿದ್ಯಾರ್ಥಿಗಳಲ್ಲಿ ದೇಶಭಕ್ತಿಯ ಭಾವ ಚಿಕ್ಕವಯಸ್ಸಿನಲ್ಲೇ ಹೆಚ್ಚಾಗುತ್ತದೆ ಎಂದು ಶಿಕ್ಷಣ ಸಚಿವ ಭೂಪೇಂದ್ರಸಿನ್ಹ ಚೂಡಾಸಮ ಸಮರ್ಥಿಸಿಕೊಂಡಿದ್ದಾರೆ.

ಗುಜರಾತಿನಲ್ಲಿ ಕುಸಿಯುತ್ತಿರುವ ಶಿಕ್ಷಣ ಗುಣಮಟ್ಟದ ಬಗ್ಗೆ ಗಮನಹರಿಸುವುದರ ಬದಲು ಸರ್ಕಾರ ಈ ರೀತಿಯ ಸುತ್ತೋಲೆ ಹೊರಡಿಸಿರುವುದಕ್ಕೆ ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ದೇಶಭಕ್ತಿಯನ್ನು ಪ್ರದರ್ಶಿಸಲು ವಿದ್ಯಾರ್ಥಿಗಳಿಗೆ ಒತ್ತಡ ಹೇರಬಾರದು. ಏಕೆಂದರೆ, ಆ ಭಾವನೆ ಪ್ರತಿಯೊಬ್ಬರ ರಕ್ತದಲ್ಲೇ ಇದೆ ಎಂದು ಪಟೇಲ್‌ ಸಮುದಾಯದ ನಾಯಕ ಹಾರ್ದಿಕ್‌ ಪಟೇಲ್‌ ಟೀಕಿಸಿದ್ದಾರೆ.