ಡೆಹ್ರಾಡೂನ್[ಮಾ.28]: ಡೆಹ್ರಾಡೂನ್ ಬಳಿಯ ವಸತಿ ಶಾಲೆಯ 7ನೇ ತರಗತಿ ವಿದ್ಯಾರ್ಥಿಯನ್ನು ಆತನ ಸೀನಿಯರ್ಸ್ ಗಳೇ ಥಳಿಸಿ ಕೊಂದಿರುವ ಪ್ರಕರಣ ಬೆಳಕಿಗೆ ಬಂದಿದೆ. ಅತ್ತ ಶಾಲೆಯ ಆಡಳಿತ ಮಂಡಳಿ ಈ ಪ್ರಕರಣವನ್ನು ಮುಚ್ಚಿ ಹಾಕಲು ವಿದ್ಯಾರ್ಥಿಯ ಮೃತದೇಹವನ್ನು ಶಾಲೆಯ ಆವರಣದಲ್ಲೇ ಹೂತು ಹಾಕಿದ್ದಾರೆ.

ಹೌದು ಮಾರ್ಚ್ 10ರಂದು ಪ್ರಕರಣ ನಡೆದಿದೆ. ಡೆಹ್ರಾಡೂನ್ ನ ಪೊಲೀಸ್ ಅಧೀಕ್ಷಕಿ ನಿವೇದಿತಾ ಕುಕ್ರೇತಿ ಈ  ಕುರಿತಾಗಿ ಮಾಹಿತಿ ನೀಡುತ್ತಾ 'ಉತ್ತರ ಪ್ರದೇಶದ ಹಾಪುಡ್ ನಿವಾಸಿ 12 ವರ್ಷದ ವಸು ಯಾದವ್ ಹತ್ಯೆಗೀಡಾದ ಬಾಲಕ. ಕಳೆದ ಕೆಲ ಸಮಯದ ಹಿಂದೆ ಔಟಿಂಗ್ ಸಂದರ್ಭದಲ್ಲಿ ವಸು ರಸ್ತೆ ಬದಿಯಲ್ಲಿದ್ದ ಒಂದು ಅಂಗಡಿಯಿಂದ ಬಿಸ್ಕೆಟ್ ಕದ್ದಿದ್ದ. ಅಂಗಡಿಯ ಮಾಲಿಕ ಈ ಕುರಿತಾಗಿ ಶಾಲಾ ಆಡಳಿತ ಮಂಡಳಿಗೆ ದೂರನ್ನು ನೀಡಿದ್ದ. ಇದಾದ ಬಳಿಕ ಮ್ಯಾನೇಜ್ಮೆಂಟ್ ಯಾವೊಬ್ಬ ಮಕ್ಕಳೂ ಶಾಲಾ ಕ್ಯಾಂಪಸ್ ನಿಂದ ಹೊರ ಹೋಗದಂತೆ ಖಡಕ್ ವಾರ್ನಿಂಗ್ ನೀಡಿತ್ತು. ವಸು ಬಿಸ್ಕೆಟ್ ಕದ್ದಿದ್ದರಿಂದ ಔಟಿಂಗ್ ಗೆ ಕಡಿವಾಣ ಬಿತ್ತೆಂಬ ಕೋಪದಲ್ಲಿ ಹಿರಿಯ ವಿದ್ಯಾತರ್ಥಿಗಳು ಕ್ರಿಕೆಟ್ ಬ್ಯಾಟ್ ಹಾಗೂ ವಿಕೆಟ್ ನಿಂದ  ಹೊಡೆದು ಹತ್ಯೆಗೈದಿದ್ದಾರೆ' ಎಂದು ತಿಳಿಸಿದರು.

ಮಾರ್ಚ್ 10 ರಂದು ಹಿರಿಯ ವಿದ್ಯಾರ್ಥಿಗಳು ವಸುವನ್ನು ಹಿಡಿದು ಭರ್ಜರಿಯಾಗಿ ಥಳಿಸಿದ್ದಾರೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಆಡಳಿತ ಮಂಡಳಿ ವಸುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದರೆ. ಆದರೆ ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದ. ಆದರೆ ಅತ್ತ ಮ್ಯಾನೇಜ್ಮೆಂಟ್ ಈ ವಿಚಾರವನ್ನು ಪೊಲೀಸರಿಗೆ ತಿಳಿಸುವ ಬದಲಾಗಿ ಬಾಲಕನ ಶವವನ್ನು ಶಾಲಾ ಆವರಣದಲ್ಲೇ ಮಣ್ಣು ಮಾಡಿ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದಾರೆ. ಅಲ್ಲದೇ ಬಾಲಕನ ತಂದೆ ತಾಯಿಗೂ ಈ ಬಗ್ಗೆ ಮಾಹಿತಿ ನೀಡಿಲ್ಲ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ತನಿಖೆ ಆರಂಭಿಸಿದ ಪೊಲೀಸರು ವಸು ಶವವನ್ನು ಹೊರ ತೆಗೆದು ಪೋಸ್ಟ್ ಮಾರ್ಟಂ ಮಾಡಿಸಿದ್ದಾರೆ. ಅಲ್ಲದೇ ವಾರ್ಸನ್, ದೈಹಿಕ ಶಿಕ್ಷಕ ಹಾಗೂ ಇಬ್ಬರು ವಿದ್ಯಾರ್ಥಿಗಳ ವಿರುದ್ಧ ಕೇಸ್ ದಾಖಲಿಸಿ ಬಂಧಿಸಿದ್ದಾರೆ.