Asianet Suvarna News Asianet Suvarna News

ಪಟಾಕಿ ಹೊಡೆಯುವ ಸಮಯ ಬದಲು

ತನ್ನ ಆದೇಶದಲ್ಲಿ ಕೊಂಚ ಮಾರ್ಪಾಡು ಮಾಡಿರುವ ಸರ್ವೋಚ್ಚ ನ್ಯಾಯಾಲಯ, ತಮಿಳುನಾಡು, ಪುದುಚೇರಿ ಹಾಗೂ ದಕ್ಷಿಣ ಭಾರತದ ರಾಜ್ಯಗಳಿಗೆ ಪಟಾಕಿ ಹಾರಿಸುವ ಸಮಯದಲ್ಲಿ ಬದಲಾವಣೆ ಮಾಡಿಕೊಳ್ಳಲು ಅವಕಾಶ ನೀಡಿದೆ. 

SC to change timings for bursting crackers
Author
Bengaluru, First Published Oct 31, 2018, 10:40 AM IST

ನವದೆಹಲಿ: ದೀಪಾವಳಿ ಹಾಗೂ ಇತರ ಹಬ್ಬ ಹರಿದಿನಗಳ ಸಂದರ್ಭದಲ್ಲಿ ಪಟಾಕಿಗಳನ್ನು ರಾತ್ರಿ 8ರಿಂದ 10ರವರೆಗೆ ಮಾತ್ರ ಸುಡಬೇಕು ಎಂಬ ತನ್ನ ಇತ್ತೀಚಿನ ಆದೇಶದಲ್ಲಿ ಕೊಂಚ ಮಾರ್ಪಾಡು ಮಾಡಿರುವ ಸರ್ವೋಚ್ಚ ನ್ಯಾಯಾಲಯ, ತಮಿಳುನಾಡು, ಪುದುಚೇರಿ ಹಾಗೂ ದಕ್ಷಿಣ ಭಾರತದ ರಾಜ್ಯಗಳಿಗೆ ಪಟಾಕಿ ಹಾರಿಸುವ ಸಮಯದಲ್ಲಿ ಬದಲಾವಣೆ ಮಾಡಿಕೊಳ್ಳಲು ಅವಕಾಶ ನೀಡಿದೆ. ಆದರೆ 2 ತಾಸಿನ ಮಿತಿಯನ್ನು ಸಡಿಲಿಸದೇ ಇರಲು ಅದು ನಿರ್ಧರಿಸಿದೆ.

ಅಕ್ಟೋಬರ್‌ 23ರ ಆದೇಶದಲ್ಲಿ ಮಾರ್ಪಾಡು ಕೋರಿ ತಮಿಳುನಾಡು ಸರ್ಕಾರ ಹಾಗೂ ಹಲವು ಪಟಾಕಿ ಉತ್ಪಾದಕರು ನ್ಯಾಯಾಲಯದ ಮೊರೆ ಹೋಗಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ನ್ಯಾ. ಎ.ಕೆ. ಸಿಕ್ರಿ ಹಾಗೂ ಅಶೋಕ್‌ ಭೂಷಣ್‌ ಅವರ ಪೀಠ ಈ ಸ್ಪಷ್ಟನೆಗಳನ್ನು ನೀಡಿತು.

ತಮಿಳುನಾಡು ಸರ್ಕಾರವು ನ್ಯಾಯಪೀಠದ ಮುಂದೆ ವಾದ ಮಂಡಿಸಿ, ‘ಆಯಾ ರಾಜ್ಯಗಳಲ್ಲಿ ಬೇರೆ ಬೇರೆ ಸಮಯದಲ್ಲಿ ದೀಪಾವಳಿಯನ್ನು ಆಚರಿಸುತ್ತಾರೆ. ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಬೆಳಗ್ಗೆ ಆಚರಿಸಲಾಗುತ್ತದೆ. ಇದು ಧಾರ್ಮಿಕ ವಿಷಯವಾಗಿದೆ. ಹೀಗಾಗಿ ಆಚರಣೆಯ ಸಂದರ್ಭದಲ್ಲಿ ಪಟಾಕಿ ಹಾರಿಸಬೇಕಾಗುತ್ತದೆ. ಇಂಥದ್ದೇ ಸಮಯ ಎಂದು ಮಿತಿ ಹೇರಿದರೆ ಜನರ ಧಾರ್ಮಿಕ ಹಕ್ಕಿಗೆ ಭಂಗ ಬಂದಂತಾಗುತ್ತದೆ. ಹೀಗಾಗಿ ರಾತ್ರಿ 8ರಿಂದ 10 ಅಲ್ಲದೇ, ಪೂನೆ ನಡೆಯುವ ನಸುಕಿನ 4.30ರಿಂದ ಬೆಳಗ್ಗೆ 6.30ರವರೆಗೂ ಪಟಾಕಿ ಸಿಡಿಸಲು ಅವಕಾಶ ನೀಡಬೇಕು’ ಎಂದು ಹೇಳಿತು.

ಅಲ್ಲದೆ, ‘ಬೇರೆಬೇರೆ ಪ್ರದೇಶಗಳಲ್ಲಿ ಬೇರೆ ಸಮಯ ನಿಗದಿ ಮಾಡುವುದು ಉತ್ತಮ. ಎಲ್ಲರೂ ಒಂದೇ ಸಮಯ (8ರಿಂದ 10) ಪಟಾಕಿ ಸಿಡಿಸಿದರೆ ಅತಿಯಾದ ಮಾಲಿನ್ಯವಾಗಬಹುದು’ ಎಂದು ಅದ ವಾದಿಸಿತು.

ಇನ್ನು ಪಟಾಕಿ ಮಾರಾಟಗಾರರು ವಾದ ಮಂಡಿಸಿ, ‘ಸಮಯ ಕಡಿಮೆ ಇರುವ ಕಾರಣ ಈಗ ಹಸಿರು ಪಟಾಕಿಗಳ ಉತ್ಪಾದನೆ-ಮಾರಾಟ ಸಾಧ್ಯವಿಲ್ಲ’ ಎಂದು ಹೇಳಿದರು.

ಇದನ್ನು ಭಾಗಶಃ ಒಪ್ಪಿಕೊಂಡ ನ್ಯಾಯಪೀಠ, ‘ತಮಿಳುನಾಡು-ಪುದುಚೇರಿ ಹಾಗೂ ದಕ್ಷಿಣ ಭಾರತದ ರಾಜ್ಯಗಳು ಸಮಯ ಬದಲಿಸಿಕೊಳ್ಳಬಹುದು. ಆದರೆ 2 ತಾಸಿನ ನಿರ್ಬಂಧ ಮುಂದುವರಿಯುತ್ತದೆ. ಹೆಚ್ಚುವರಿ ಕಾಲಾವಕಾಶ ನೀಡಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿತು. ಅಲ್ಲದೆ, ‘ಹಸಿರು ಪಟಾಕಿಗಳು ದಿಲ್ಲಿ ಹಾಗೂ ರಾಷ್ಟ್ರ ರಾಜಧಾನಿ ವಲಯಕ್ಕೆ ಮಾತ್ರ ಸೀಮಿತ’ ಎಂದು ಹೇಳಿತು.

ಹಸಿರು ಪಟಾಕಿ ಆದೇಶ ದಿಲ್ಲಿಗೆ ಸೀಮಿತ

ಕಡಿಮೆ ಮಾಲಿನ್ಯ ಉಂಟು ಮಾಡುವ ‘ಹಸಿರು ಪಟಾಕಿ’ಗಳನ್ನು ಮಾತ್ರ ಈ ಸಲ ಸುಡಬೇಕು ಎಂಬ ತನ್ನ ಆದೇಶಕ್ಕೆ ಸಂಬಂಧಿಸಿದಂತೆ ಕೂಡಾ ಸುಪ್ರೀಂಕೋರ್ಟ್‌ ಮಂಗಳವಾರ ಸ್ಪಷ್ಟನೆ ನೀಡಿದ್ದು, ‘ಹಸಿರು ಪಟಾಕಿ ಆದೇಶವು ಕೇವಲ ದಿಲ್ಲಿ ಹಾಗೂ ರಾಷ್ಟ್ರ ರಾಜಧಾನಿ ವಲಯಕ್ಕೆ ಮಾತ್ರ ಸಂಬಂಧಿಸಿರುತ್ತದೆ. ದೇಶದ ಇತರೆಡೆ ಈ ಆದೇಶ ಅನ್ವಯವಾಗುವುದಿಲ್ಲ. ಆದರೆ ರಾಜ್ಯಗಳು ತಾವೇ ಮುಂದಾಗಿ ಹಸಿರು ಪಟಾಕಿಗಳಿಗೆ ಸಂಬಂಧಿಸಿದ ನೀತಿ ರೂಪಿಸಿದರೆ ಸಂತೋಷ’ ಎಂದು ಹೇಳಿದೆ. ಅಲ್ಲದೆ ಈ ಕುರಿತು ಬುಧವಾರ ಅಧಿಕೃತವಾಗಿ ಆದೇಶ ಹೊರಡಿಸುವುದಾಗಿಯೂ ಹೇಳಿತು.

Follow Us:
Download App:
  • android
  • ios